ಪತಿಯ ಸ್ನೇಹಿತ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ವರ್ಗಾಯಿಸುವಂತೆ ಕೋರಿ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ: ವೈವಾಹಿಕ ವಿವಾದಗಳು ಅಥವಾ ಗಂಡ-ಹೆಂಡತಿಯ ನಡುವಿನ ಕಲಹಗಳ ಸಂದರ್ಭದಲ್ಲಿ ಪತ್ನಿಯರು ತಮ್ಮ ಗಂಡಂದಿರ ಉದ್ಯೋಗದಾತರಿಗೆ ದೂರು ನೀಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದ್ದು, ಈ ಬಗ್ಗೆ ಭಾರತದ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಂತಹ ದೂರುಗಳು ಗಂಡನ ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು. ಅಂತಿಮವಾಗಿ ಪತಿಗೆ ಕೆಲಸವೇ ಇಲ್ಲದಂತಾದರೆ, ಪತ್ನಿಗೆ ಸಿಗಬೇಕಾದ ಜೀವನಾಂಶ (ಅಲಿಮನಿ) ಹಕ್ಕುಗಳ ಮೇಲೆಯೇ ಅದು ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ!

ಅಸ್ಸಾಂನಲ್ಲಿರುವ ತನ್ನ ಪತಿಯ ಸ್ನೇಹಿತ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ವರ್ಗಾಯಿಸುವಂತೆ ಕೋರಿ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪತಿಯ ವಿರುದ್ಧದ ಇತರ ಪ್ರಕರಣಗಳು ಈಗಾಗಲೇ ಗಾಜಿಯಾಬಾದ್‌ನಲ್ಲಿ ಬಾಕಿ ಇರುವುದರಿಂದ, ಈ ಪ್ರಕರಣವನ್ನೂ ಅಲ್ಲೇ ವಿಚಾರಣೆ ನಡೆಸಬೇಕೆಂದು ಪತ್ನಿ ಕೋರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು ಈ ಕಟುವಾದ ಹಾಗೂ ಪ್ರಮುಖ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಜೀವನೋಪಾಯ ಕಸಿದುಕೊಳ್ಳುವುದು ಅತ್ಯಂತ ಕೆಟ್ಟ ಹೆಜ್ಜೆ!

ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಗಂಡನ ಉದ್ಯೋಗಕ್ಕೆ ಧಕ್ಕೆ ತರುವ ಹೆಂಡತಿಯರ ನಡವಳಿಕೆಯನ್ನು ಖಂಡಿಸಿದರು. ವಿಚ್ಛೇದನ ಪಡೆಯುವುದು ಬೇರೆ ವಿಷಯ, ಆದರೆ ಸಂಗಾತಿಯ ಜೀವನೋಪಾಯವನ್ನೇ ಕಸಿದುಕೊಳ್ಳುವುದು ಅತ್ಯಂತ ಕೆಟ್ಟ ಹೆಜ್ಜೆ. ವೈವಾಹಿಕ ಕಲಹದ ಸಮಯದಲ್ಲಿ ಗಂಡನ ಉದ್ಯೋಗದಾತರಿಗೆ (ಆಫೀಸ್‌ಗೆ) ಪತ್ರ ಬರೆಯುವುದು ಹೆಂಡತಿ ತೆಗೆದುಕೊಳ್ಳಬಹುದಾದ ಅತ್ಯಂತ ಕೆಟ್ಟ ನಿರ್ಧಾರವಾಗಿದೆ. ಇದರಿಂದ ಪತಿ ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ. ಒಮ್ಮೆ ಕೆಲಸ ಪೋದರೆ, ಭವಿಷ್ಯದಲ್ಲಿ ಹೆಂಡತಿಗೆ ಯಾವುದೇ ಜೀವನಾಂಶ ಪಡೆಯಲು ಆಧಾರವೇ ಇಲ್ಲದಂತಾಗುತ್ತದೆ" ಎಂದು ಪೀಠವು ಎಚ್ಚರಿಸಿತು.

ಪ್ರಕರಣದ ಪ್ರಮುಖ ಅಂಶಗಳು ಮತ್ತು ವಾದಗಳು!

ಮಾನನಷ್ಟ ಮೊಕದ್ದಮೆ: ಪತಿಯ ಆಪ್ತ ಸ್ನೇಹಿತ ಹಾಗೂ ಸಹೋದ್ಯೋಗಿಯು ಪತಿಯ ಇಚ್ಛೆಯ ಮೇರೆಗೆ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಮಹಿಳೆಯ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ವಾಯುಪಡೆಗೆ ದೂರು ನೀಡಿದ್ದ ಪತ್ನಿ: ಗಂಡನು ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದು, ಸೇವಾ ನಿಯಮಗಳನ್ನು ಉಲ್ಲಂಘಿಸಿ ಸ್ವತಂತ್ರ ವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪತ್ನಿಯು ದೆಹಲಿಯ ವಾಯುಪಡೆ ಅಧಿಕಾರಿಗಳಿಗೆ ದೂರು ರವಾನಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲೇ ಆತನ ಸ್ನೇಹಿತ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದನು.

ಹೆಲ್ಮೆಟ್ ಕಳ್ಳತನದ ಆರೋಪ: ವಾಯುಪಡೆಗೆ ಸೇರಿದ ಹೆಲ್ಮೆಟ್ ಕದ್ದಿದ್ದಕ್ಕಾಗಿ ತನ್ನ ಮತ್ತು ತನ್ನ ಸಹೋದರನ ವಿರುದ್ಧ ಪತಿಯು ಸುಳ್ಳು ದೂರು ದಾಖಲಿಸಿದ್ದರಿಂದ, ಪ್ರತಿಯಾಗಿ ಈ ಕ್ರಮ ಕೈಗೊಳ್ಳಬೇಕಾಯಿತು ಎಂದು ಪತ್ನಿಯ ವಕೀಲರು ವಿವರಿಸಿದರು.

ಮಧ್ಯಸ್ಥಿಕೆಗೆ ವಹಿಸಿದ ಸುಪ್ರೀಂ ಕೋರ್ಟ್!

ಪ್ರಕರಣದ ಗಂಭೀರತೆಯನ್ನು ಗಮನಿಸಿದ ಸುಪ್ರೀಂ ಕೋರ್ಟ್, ದಂಪತಿಗಳ ನಡುವಿನ ಪರಸ್ಪರ ಇತ್ಯರ್ಥದ ಸಾಧ್ಯತೆಯನ್ನು ಅನ್ವೇಷಿಸಲು ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ ಉಲ್ಲೇಖಿಸಿತು. ಅಲ್ಲದೆ, ಪತಿ-ಪತ್ನಿಯರು ತಮ್ಮ ನಡುವಿನ ಎಲ್ಲಾ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಮತ್ತು ಪರಸ್ಪರ ಹೊರಿಸಿಕೊಂಡಿರುವ ಆರೋಪಗಳನ್ನು ಹಿಂಪಡೆಯಲು ಸೂಕ್ತ ಕಾನೂನು ತಿಳುವಳಿಕೆ ನೀಡುವಂತೆ ನ್ಯಾಯಮೂರ್ತಿ ನಾಗರತ್ನ ಅವರು ಮಹಿಳೆಯ ವಕೀಲರಿಗೆ ಸಲಹೆ ನೀಡಿದರು.