ಸುಪ್ರೀಂ ಚಾಟಿ ಬೀಸಿದ ಬಳಿಕ ಮತ್ತೆ ಪೇಪರ್‌ಗಳಲ್ಲಿ ದೊಡ್ಡ ಜಾಹೀರಾತು ನೀಡಿ ಕ್ಷಮೆ ಕೇಳಿದ ಪತಂಜಲಿ ಬಾಬಾ
ತಮ್ಮ ಪತಂಜಲಿ ಉತ್ಪನ್ನಗಳ ಬಗ್ಗೆ ಜನರ ದಾರಿ ತಪ್ಪಿಸುವಂತಹ ಜಾಹೀರಾತು ನೀಡಿ ಸುಪ್ರೀಂಕೋರ್ಟ್‌ನಿಂದ ಸರಿಯಾಗಿ ತಿವಿಸಿಕೊಂಡಿರುವ ಯೋಗ ಗುರು ಬಾಬಾ ರಾಮ್‌ದೇವ್ ಹಾಗೂ ಅವರ ಸಹಾಯಕ ಆಚಾರ್ಯ ಬಾಲಕೃಷ್ಣ ಅವರು ಇಂದು ಪತ್ರಿಕೆಗಳಲ್ಲಿ ಜಾಹೀರಾತಿನಷ್ಟೇ ದೊಡ್ಡದಾಗಿ ಕ್ಷಮೆಯಾಚನೆಯ ಪ್ರಕಟಣೆ ಹೊರಡಿಸಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.
ನವದೆಹಲಿ: ತಮ್ಮ ಪತಂಜಲಿ ಉತ್ಪನ್ನಗಳ ಬಗ್ಗೆ ಜನರ ದಾರಿ ತಪ್ಪಿಸುವಂತಹ ಜಾಹೀರಾತು ನೀಡಿ ಸುಪ್ರೀಂಕೋರ್ಟ್‌ನಿಂದ ಸರಿಯಾಗಿ ತಿವಿಸಿಕೊಂಡಿರುವ ಯೋಗ ಗುರು ಬಾಬಾ ರಾಮ್‌ದೇವ್ ಹಾಗೂ ಅವರ ಸಹಾಯಕ ಆಚಾರ್ಯ ಬಾಲಕೃಷ್ಣ ಅವರು ಇಂದು ಪತ್ರಿಕೆಗಳಲ್ಲಿ ಜಾಹೀರಾತಿನಷ್ಟೇ ದೊಡ್ಡದಾಗಿ ಕ್ಷಮೆಯಾಚನೆಯ ಪ್ರಕಟಣೆ ಹೊರಡಿಸಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.
ನಿನ್ನೆ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರು ನಿಮ್ಮ ಕ್ಷಮೆಯೂ, ಪತ್ರಿಕೆಗಳಲ್ಲಿ ನಿಮ್ಮ ಉತ್ಪನ್ನಗಳ ಬಗ್ಗೆ ನೀವು ನೀಡುವ ಜಾಹೀರಾತಿನಷ್ಟೇ ದೊಡ್ಡದಾಗಿರುತ್ತದೆಯೇ ಎಂದು ಪ್ರಶ್ನೆ ಮಾಡಿದ್ದರು. ನಿನ್ನೆಯೂ 10 ಲಕ್ಷ ರೂಪಾಯಿ ವೆಚ್ಚ ಮಾಡಿ ಪತಂಜಲಿ ಸಂಸ್ಥೆ ಪತ್ರಿಕೆಗಳಲ್ಲಿ ಬಹಿರಂಗ ಕ್ಷಮೆಯಾಚನೆಯನ್ನು ಪ್ರಕಟಿಸಿತ್ತು. ಆದರೆ ಸುಪ್ರೀಂಕೋರ್ಟ್ ಈ ಕ್ಷಮೆಯಾಚನೆ ಪ್ರಕಟಣೆಯ ಗಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಮತ್ತೆ ದೇಶದ ಪ್ರಮುಖ ಪತ್ರಿಕೆಗಳಲ್ಲಿ ದೊಡ್ಡದಾಗಿ ಕ್ಷಮೆಯಾಚನೆಯನ್ನು ಪ್ರಕಟಿಸುವ ಮೂಲಕ ಬಾಬಾ ರಾಮ್ ದೇವ್ ದೇಶದ ಕ್ಷಮೆ ಕೋರಿದ್ದಾರೆ.
ಈ ಜಾಹೀರಾತಿನಲ್ಲಿ, ರಾಮ್‌ದೇವ್ ಮತ್ತು ಬಾಲಕೃಷ್ಣ ಅವರು ತಾವು ವೈಯಕ್ತಿಕವಾಗಿಯೂ ಹಾಗೂ ಪತಂಜಲಿ ಆಯುರ್ವೇದ ಪರವಾಗಿ ಭಾರತದ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ. ನಮ್ಮ ಜಾಹೀರಾತುಗಳನ್ನು ಪ್ರಕಟಿಸುವಲ್ಲಿ ಮಾಡಿದ ತಪ್ಪಿಗೆ ನಾವು ಶ್ರದ್ಧೆಯಿಂದ ಕ್ಷಮೆಯಾಚಿಸುತ್ತೇವೆ ಮತ್ತು ಅಂತಹ ದೋಷಗಳು ಇನ್ನುಮುಂದೆ ಪುನರಾವರ್ತನೆಯಾಗುವುದಿಲ್ಲ ಎಂಬುದು ನಮ್ಮ ತುಂಬು ಹೃದಯದ ಭರವಸೆಯಾಗಿದೆ ಎಂದು ಕ್ಷಮೆಯಾಚನೆಯಲ್ಲಿ ಹೇಳಲಾಗಿದೆ.
ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುಪ್ರೀಂಕೋರ್ಟ್‌ನಲ್ಲಿ ನಡೆದ ನ್ಯಾಯಾಂಗ ನಿಂದನೆ ಪ್ರಕ್ರಿಯೆಯ ವಿಚಾರಣೆಯ ಸಂದರ್ಭದಲ್ಲಿ, ಪತಂಜಲಿ ಪತ್ರಿಕೆಗಳಲ್ಲಿ ಕ್ಷಮೆಯಾಚಿಸುವ ಗಾತ್ರವು ಅದರ ಉತ್ಪನ್ನಗಳಿ ಜಾಹೀರಾತಿನಂತೆ ಪೂರ್ಣ ಪುಟದ ಜಾಹೀರಾತುಗಳನ್ನು ಹೋಲುತ್ತದೆಯೇ ಎಂದು ಸುಪ್ರೀಂ ಕೋರ್ಟ್ ಕೇಳಿತ್ತು.
ಈ ವೇಳೆ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠದ ಮುಂದೆ ತಾವು 67 ಪತ್ರಿಕೆಗಳಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದೇವೆ. ಹಾಗೂ ಹೆಚ್ಚುವರಿ ಜಾಹೀರಾತುಗಳನ್ನು ನೀಡಲು ಸಿದ್ಧರಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಈ ಕ್ಷಮೆಯಾಚನೆಯ ಜಾಹೀರಾತುಗಳಿಗೆ 10 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಹೇಳಿದ್ದರು. ಅಲ್ಲದೇ ತಾವು ನೀಡುವ ಕ್ಷಮೆಯಾಚನೆಯ ಜಾಹೀರಾತುಗಳನ್ನು ಒಟ್ಟುಗೂಡಿಸಿ ಪೀಠದ ಮುಂದೆ ಸಲ್ಲಿಸುವಂಯೂ ನ್ಯಾಯಾಲಯವು ಪತಂಜಲಿಗೆ ಆದೇಶಿಸಿತ್ತು.
ವಾರದಲ್ಲಿ ಬಹಿರಂಗ ಕ್ಷಮೆ: ಬಾಬಾ ರಾಮದೇವ್, ಬಾಲಕೃಷ್ಣಗೆ ಸುಪ್ರೀಂಕೋರ್ಟ್ ಆದೇಶ
ಜಾಹೀರಾತುಗಳ ಕಾಫಿಯನ್ನು ದೊಡ್ಡದಾಗಿಸಿ ತಂದು ನಮಗೆ ತೋರಿಸಬೇಡಿ, ನಾವು ಜಾಹೀರಾತಿನ ನಿಜವಾದ ಗಾತ್ರವನ್ನು ನೋಡಲು ಬಯಸುತ್ತೇವೆ. ನೀವು ಜಾಹೀರಾತನ್ನು ನೀಡಿದಾಗ ನಾವು ಅದನ್ನು ಸೂಕ್ಷ್ಮದರ್ಶಕ ಬಳಸಿ ನೋಡುವಂತಿರಬಾರದು. ಅಲ್ಲದೇ ಕೇವಲ ಪೇಪರ್‌ನಲ್ಲಿ ಇರುವುದು ಮಾಥ್ರವಲ್ಲ, ಅದು ಸಹಜವಾಗಿ ಓದುವುದಕ್ಕೂ ಸಾಧ್ಯವಾಗಬೇಕು ಎಂದು ನ್ಯಾಯಾಧೀಶರು ಹೇಳಿದ್ದರು.