ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ಬುಧವಾರ ಮುಂಜಾನೆ "ಆಪರೇಷನ್ ಸಿಂಧೂರ್" ನಡೆಸಿತು. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ, ಸೇನೆ, ನೌಕಾಪಡೆ ಮತ್ತು ವಾಯುಪಡೆ ನಿಖರ ಕ್ಷಿಪಣಿ ದಾಳಿ ನಡೆಸಿದವು. ಯಾವುದೇ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸೇನೆ ತಿಳಿಸಿದೆ. ಪ್ರಧಾನಿ ಮೋದಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು.
ನವದೆಹಲಿ (ಮೇ.7): ಭೀಕರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಎರಡು ವಾರಗಳ ನಂತರ, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿ ಕಾರ್ಯಾಚರಣೆಯಲ್ಲಿ ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ನಿಖರವಾದ ಕ್ಷಿಪಣಿ ದಾಳಿಗಳನ್ನು ನಡೆಸಿತು.
ಆಪರೇಷನ್ ಸಿಂಧೂರ್ ನಿಮಗೆ ಗೊತ್ತಾಗಬೇಕಾದ ಅಂಶಗಳು
'ಆಪರೇಷನ್ ಸಿಂಧೂರ್' ಅಡಿಯಲ್ಲಿ ಬೆಳಗಿನ ಜಾವ 1.44 ಕ್ಕೆ ಸೇನಾ ದಾಳಿ ನಡೆಸಲಾಯಿತು.
"ಈ ಕಾರ್ಯಾಚರಣೆಯ ಅಡಿಯಲ್ಲಿ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಪಡೆಗಳು ದಾಳಿ ನಡೆಸಿವೆ, ಅಲ್ಲಿಂದ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸಲಾಗಿತ್ತು ಹಾಗೂ ನಿರ್ದೇಶನ ಮಾಡಲಾಗಿತ್ತು ಎಂದು ಸೇನೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ದಾಳಿಗಳಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮೂರು ಪಡೆಗಳ ನಿಖರವಾದ ದಾಳಿ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲಾಯ್ಟರಿಂಗ್ ಅಮ್ಯುನಿಷನ್ ಎಂದೂ ಹೇಳಲಾಗುವ ಕಾಮಿಕೇಜ್ ಡ್ರೋನ್ ಬಳಸಿತ್ತು. ಇದು ಟಾರ್ಗೆಟ್ ಮೇಲೆ ಅಪ್ಪಳಿಸಲು ವಿನ್ಯಾಸಗೊಳಿಸಲಾದ ಶಸ್ತ್ರಾಸ್ತ್ರಗಳನ್ನು ಬಳಸಿದವು, ಸಾಮಾನ್ಯವಾಗಿ ಸಿಡಿತಲೆಯನ್ನು ಇದು ಹೊತ್ತೊಯ್ಯುತ್ತದೆ.
"ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿಲ್ಲ" ಎಂದು ಒತ್ತಿ ಹೇಳಿದ್ದು, ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಸೇನೆ ತಿಳಿಸಿದೆ. "ಗುರಿಗಳ ಆಯ್ಕೆ ಮತ್ತು ದಂಡನೆಯ ವಿಧಾನದಲ್ಲಿ ಭಾರತ ಗಣನೀಯ ಸಂಯಮವನ್ನು ಪ್ರದರ್ಶಿಸಿದೆ" ಎಂದು ಸೇನೆ ತಿಳಿಸಿದೆ.
ಗುರಿಯಾದ ಒಂಬತ್ತು ಸ್ಥಳಗಳಲ್ಲಿ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಸೇರಿವೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆ ನಡೆಸಲಾಯಿತು, ಇದರಲ್ಲಿ 26 ಜನರು, ಹೆಚ್ಚಾಗಿ ಪ್ರವಾಸಿಗರು ಸಾವನ್ನಪ್ಪಿದರು.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾತ್ರಿಯಿಡೀ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಕಾರ್ಯಾಚರಣೆಯ ನಂತರ, ಎನ್‌ಎಸ್‌ಎ ಅಜಿತ್ ದೋವಲ್ ಅವರು ಯುಎಸ್ ಎನ್‌ಎಸ್‌ಎ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಮಾತನಾಡಿದರು ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ಅವರಿಗೆ ವಿವರಿಸಿದರು.
‘ಆಪರೇಷನ್ ಸಿಂಧೂರ್’ ಕುರಿತು ವಿವರವಾದ ಮಾಹಿತಿ ಇಂದು ಭಾರತದ ಸೇನಾಪಡೆಗಳು ತಿಳಿಸಲಿವೆ


