ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆಂಬ ಆರೋಪವನ್ನು ತಳ್ಳಿಹಾಕಿ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಎಸ್‌ಐಆರ್ ಆದೇಶಗಳನ್ನು ಒಮ್ಮತದಿಂದ ಹೊರಡಿಸಲಾಗಿದೆ ಮತ್ತು ಫಾರ್ಮ್ 6ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಯು ಯಾವುದೇ ಗಟ್ಟಿಯಾದ ಆಧಾರ ಹೊಂದಿಲ್ಲ, ಬದಲಿಗೆ ಕೇವಲ ಒಂದು ಮಾಧ್ಯಮ ವರದಿಯನ್ನು ಆಧರಿಸಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರತಿ-ಅಫಿಡವಿಟ್‌ನಲ್ಲಿ ಆಕ್ಷೇಪಿಸಿದೆ.
ಎಸ್‌ಐಆರ್ ವಿಚಾರವಾಗಿ ಜ್ಞಾನೇಶ್ ಕುಮಾರ್ ಕಾರ್ಯವೈಖರಿಯನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದಕ್ಕೆ ಪ್ರತಿ-ಅಫಿಡವಿಟ್ ಸಲ್ಲಿಸುವ ಮೂಲಕ ಆಯೋಗ ಜ್ಞಾನೇಶ್ ವಿರುದ್ಧದ ಆರೋಪಗಳನ್ನೆಲ್ಲ ತಿರಸ್ಕರಿಸಿದೆ.
‘ಜ್ಞಾನೇಶ್ ಕುಮಾರ್ ಹಾಗೂ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನೊಳಗೊಂಡ ತ್ರಿಸದಸ್ಯ ಆಯೋಗದ ಸಂಪೂರ್ಣ ಒಮ್ಮತದ ಮೇರೆಗೇ ಎಸ್‌ಐಆರ್ ಆದೇಶಗಳನ್ನು ಹೊರಡಿಸಲಾಗಿದೆ. ಕಡತ ಪರಿಶೀಲನೆ ವೇಳೆ ಆಯುಕ್ತರು ವ್ಯಕ್ತಪಡಿಸುವ ವೈಯಕ್ತಿಕ ಅನಿಸಿಕೆ ಅಥವಾ ಟಿಪ್ಪಣಿಗಳನ್ನು ಆಯೋಗದ ಅಂತಿಮ ನಿರ್ಧಾರವೆಂದು ಪರಿಗಣಿಸಲಾಗದು’ ಎಂದು ಆಯೋಗ ವಿವರಿಸಿದೆ.
ಫಾರ್ಮ್ 6 ತಿದ್ದುಪಡಿಗೆ ಸ್ಪಷ್ಟನೆ:
ಮತದಾರರ ಪಟ್ಟಿಗೆ ಹೆಸರು ಸೇರಿಸುವ ಫಾರ್ಮ್ 6 ತಿದ್ದುಪಡಿ ವಿವಾದಕ್ಕೂ ಸ್ಪಷ್ಟನೆ ನೀಡಿರುವ ಆಯೋಗ, ‘ಫಾರ್ಮ್ ತಿದ್ದುಪಡಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವೇ ಇದೆ. ನಮೂನೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಕೇವಲ ಆನ್‌ಲೈನ್ ಗೊಂದಲ ನಿವಾರಣೆಗೆ ಅ.21ರಿಂದ ಫಾರ್ಮ್ 6 ಹಾಗೂ ಎಸ್‌ಐಆರ್ ಘೋಷಣಾ ಪತ್ರವನ್ನು ಪ್ರತ್ಯೇಕವಾಗಿ ಪ್ರದರ್ಶಿಸಲಾಗುತ್ತಿದೆ’ ಎಂದು ತಿಳಿಸಿದೆ.
ಕಡತ ಸೋರಿಕೆ ಆಗಿಲ್ಲ:
ಆಂತರಿಕ ಕಡತಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಆಯೋಗ, ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಷ್ಟೇ ತೆರವುಗೊಳಿಸುವ ಸಂವಿಧಾನಾತ್ಮಕ ಪ್ರಕ್ರಿಯೆಯ ಮೂಲಕವೇ ಸಿಇಸಿ ಅವರನ್ನು ವಜಾಗೊಳಿಸಲು ಸಾಧ್ಯ. ಹೀಗಾಗಿ ಸಿಇಸಿ ಅವರ ಅಧಿಕಾರ ನಿರ್ವಹಣೆಗೆ ತಡೆ ನೀಡಬೇಕೆಂಬ ಅರ್ಜಿಗೆ ಕಾನೂನುಬದ್ಧ ಮಾನ್ಯತೆ ಇಲ್ಲ’ ಎಂದು ವಾದಿಸಿದೆ.







