ಖಾಸಗಿ ಶಾಲೆಗಳಿಗೆ ಮಾನ್ಯತೆ ನೀಡುವ ಹೆಸರಿನಲ್ಲಿ ₹100 ಕೋಟಿ ವಂಚಿಸಿದ ಆರೋಪದ ಮೇಲೆ ಡಿಎಂಕೆ ಮಾಜಿ ಸಚಿವ ಅನ್ಬಿಲ್ ಮಹೇಶ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ವಜಾಗೊಳಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಚೆನ್ನೈ: ಖಾಸಗಿ ಶಾಲೆಗಳಿಂದ ಪಾರ್ಟಿ ಫಂಡ್ ಹೆಸರಿನಲ್ಲಿ 100 ಕೋಟಿ ರು. ಪಡೆದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಿಎಂಕೆಯ ಮಾಜಿ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿಯನ್ನು ತಮಿಳುನಾಡಿನ ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.ಇದರೊಂದಿಗೆ ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವ ಅಡಳಿತಾರೂಢ ಟಿವಿಕೆ ಮತ್ತು ವಿಪಕ್ಷ ಡಿಎಂಕೆ ನಡುವೆ ಕಳೆದ 4 ತಿಂಗಳಿನಿಂದ ನಡೆಯುತ್ತಿರುವ ಭಾರೀ ರಾಜಕೀಯ ವಾಕ್ಸಮರ ಇದೀಗ ಮತ್ತೊಂದು ಹಂತ ತಲುಪಿದಂತಾಗಿದೆ. ಮಹೇಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ ಬಂಧನವಾಗಿದೆ.
ಏನಿದು ಪ್ರಕರಣ?
2021 ಮತ್ತು 2026ರ ನಡುವೆ ಪೊಯ್ಯಮೋಳಿ ಶಾಲಾ ಶಿಕ್ಷಣ ಸಚಿವರಾಗಿದ್ದರು. ಈ ವೇಳೆ ತಮಿಳುನಾಡು ಖಾಸಗಿ ಶಾಲಾ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಬಿ.ಟಿ.ಅರಸುಕುಮಾರ್ ಮತ್ತು ಖಜಾಂಚಿ ಮುತ್ತುಕುಮಾರ್ ಅವರು, ಖಾಸಗಿ ಶಾಲೆಗಳಿಗೆ ಸರ್ಕಾರದಿಂದ ಮಾನ್ಯತೆ ನೀಡುವುದು ಸೇರಿದಂತೆ ವಿವಿಧ ಸವಲತ್ತು ಕೊಡಿಸುವುದಾಗಿ ಖಾಸಗಿ ಶಾಲೆಗಳಿಂದ 100 ಕೋಟಿ ರು. ಹಣ ಸಂಗ್ರಹಿಸಿದ್ದರು. ಆದರೆ ಬಳಿಕ ಸರ್ಕಾರದಿಂದ ಯಾವುದೇ ಸವಲತ್ತನ್ನೂ ನೀಡದೇ, ಹಣವನ್ನೂ ಮರಳಿಸದೇ ವಂಚಿಸಿದ್ದಾರೆ ಎಂದು ಅದೇ ಸಂಘಟನೆಯ ಕಾರ್ಯದರ್ಶಿ ಇಳಂಗೋವನ್ ಎನ್ನುವವರು ಕೆಲ ತಿಂಗಳ ಹಿಂದೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಆರೋಪದ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಕಳೆದ ಜೂನ್‌ನಲ್ಲಿ ಅರಸುಕುಮಾರ್ ಮತ್ತು ಮುತ್ತುಕುಮಾರ್ ಅವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಇವರಿಬ್ಬರೂ ನೀಡಿದ ಮಾಹಿತಿ ಆಧರಿಸಿ ಇದೀಗ ಮಹೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.







