ನವೆಂಬರ್ 1ರಂದು ಇಂಡಿಯಾ ಕೂಟ ಹಮ್ಮಿಕೊಂಡಿರುವ ಬೃಹತ್ ರ್‍ಯಾಲಿಯನ್ನು ಕೈಬಿಡುವಂತೆ ದೆಹಲಿಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರು ಒಂದು ಕೆಲಸ ಮಾಡಿದ್ರೆ ಕೇವಲ 30 ಸೆಕೆಂಡುಗಳಲ್ಲಿ ಪ್ರತಿಭಟನೆ ನಿಲ್ಲಿಸುತ್ತೇವೆ ಎಂದು ಷರತ್ತು ವಿಧಿಸಿದ್ದಾರೆ.

ನವದೆಹಲಿ: ಮತ ಕಳ್ಳತನ ವಿರುದ್ಧ ಇಂಡಿಯಾ ಕೂಟ ನ.1ರಂದು ಹಮ್ಮಿಕೊಂಡಿರುವ ಬೃಹತ್‌ ರ್‍ಯಾಲಿ ನಿಲ್ಲಿಸುವಂತೆ ಆಗ್ರಹಿಸಿರುವ ವ್ಯಾಪಾರಿಗಳಿಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಲಹೆಯೊಂದನ್ನು ನೀಡಿದ್ದು, ‘ಪ್ರಧಾನಿ ಮೋದಿ ಅವರಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನುವಜಾಗೊಳಿಸುವಂತೆ ಹೇಳಿ. ಹೀಗೆ ಮಾಡಿದರೆ 30 ಸೆಕೆಂಡುಗಳಲ್ಲಿ ಪ್ರತಿಭಟನೆಗಳನ್ನು ನಿಲ್ಲಿಸುತ್ತೇನೆ’ ಎಂದಿದ್ದಾರೆ.

ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ರಾಹುಲ್‌, ‘ಪ್ರತಿಯೊಬ್ಬ ವ್ಯಾಪಾರಿಯ ಮಾತನ್ನು ನಾವು ಆಲಿಸುತ್ತಿದ್ದೇವೆ. ಮತವನ್ನು ಕದ್ದಿರುವ ಪರಿಸ್ಥಿತಿಯಲ್ಲಿ ಯಾವುದೂ ಸುರಕ್ಷಿತವಲ್ಲ. ನಿಮ್ಮ ಅಂಗಡಿ, ನಿಮ್ಮ ಉಳಿತಾಯ, ನಿಮ್ಮ ಮಕ್ಕಳ ಭವಿಷ್ಯ ಯಾವುದೂ ಸುರಕ್ಷಿತವಾಗಿಲ್ಲ. ನಂ.4 ಆರೋಪಿಯಾಗಿರುವ ಜ್ಞಾನೇಶ್‌ ಕುಮಾರ್‌ ಅವರನ್ನು ವಜಾಗೊಳಿಸುವಂತೆ ಮೋದಿಯವರಿಗೆ ಹೇಳಿ. ಆಗ 30 ಸೆಕೆಂಡುಗಳಲ್ಲಿ ಪ್ರತಿಭಟನೆಗಳು ನಿಲ್ಲುತ್ತವೆ‘ ಎಂದು ಬರೆದುಕೊಂಡಿದ್ದಾರೆ.

ನ.1ರ ಇಂಡಿಯಾ ಕೂಟದ ರ್‍ಯಾಲಿ ಕೈಬಿಡಲು ಆಗ್ರಹಿಸಿ ವ್ಯಾಪಾರಿಗಳ ಪ್ರತಿಭಟನೆ

ವೋಟ್‌ ಚೋರಿ ವಿರುದ್ಧ ನ.1ರಂದು ಕಾಂಗ್ರೆಸ್‌ ನೇತೃತ್ವದಲ್ಲಿ ಇಂಡಿಯಾ ಕೂಟ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ರ್‍ಯಾಲಿಯನ್ನು ರದ್ದುಗೊಳಿಸುವಂತೆ ಕೋರಿ ದೆಹಲಿಯಲ್ಲಿ ಸೋಮವಾರ ವ್ಯಾಪಾರಿಗಳು ಪ್ರತಿಭಟನೆ ನಡೆಸಿ ಆಗ್ರಹ ಮಾಡಿದ್ದಾರೆ. ಇಲ್ಲಿನ ಕಾಶ್ಮೀರಿ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ದೀಪಾವಳಿ ನಂತರ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದರು. ‘ಹಬ್ಬದ ಋತುವಿನಲ್ಲಿ ಭದ್ರತಾ ವ್ಯವಸ್ಥೆಗಳು, ರಸ್ತೆಗಳ ಬಂದ್‌ ಮತ್ತು ಸಂಚಾರ ಮಾರ್ಗ ಬದಲಾವಣೆಗಳಿಂದಾಗಿ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರಕ್ಕೆ ಅಡ್ಡಿಯಾಗಬಹುದು. ಹೀಗಾಗಿ ರ್‍ಯಾಲಿ ಮರು ನಿಗದಿಪಡಿಸಿ’ ಎಂದು ಮನವಿ ಮಾಡಿದ್ದಾರೆ.

ಈ ಕುರಿತು ವ್ಯಾಪಾರ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಬ್ರಿಜೇಶ್‌ ಗೋಯಲ್‌ ಪ್ರತಿಕ್ರಿಯಿಸಿದ್ದು, ಪ್ರತಿಭಟನೆ ಮುಂದೂಡುವಂತೆ ಇಂಡಿಯಾ ಕೂಟದ ಎಲ್ಲಾ ಪಕ್ಷಗಳಿಗೂ ಪತ್ರ ಬರೆಯುವುದಾಗಿ ಅವರ ತಿಳಿಸಿದ್ದಾರೆ.