ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಅರ್ನಬ್' ಚಂಡಮಾರುತವು ಬುಧವಾರ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ. ಇದರ ಪ್ರಭಾವದಿಂದ ಆಂಧ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗಲಿದ್ದು, ಭೂಕುಸಿತದ ಆತಂಕ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ನಿಷೇಧಿಸಲಾಗಿದೆ.
ಅಮರಾವತಿ/ಭುವನೇಶ್ವರ/ಕೋಲ್ಕತಾ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ತೀವ್ರ ವಾಯುಭಾರ ಕುಸಿತವು ಸೋಮವಾರ ಚಂಡಮಾರುತವಾಗಿ ರೂಪಾಂತರಗೊಂಡಿದ್ದು, ಬುಧವಾರ ತೀವ್ರ ಸ್ವರೂಪ ಪಡೆದುಕೊಂಡು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಇದು ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಕರಾವಳಿ ಪ್ರದೇಶಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಸೋಮವಾರ ಬೆಳಿಗ್ಗೆ 5.30ರ ವೇಳೆ ಕೇಂದ್ರೀಕೃತಗೊಂಡ ಮಾರುತವು, ಮಧ್ಯರಾತ್ರಿ ವೇಳೆ ತೀವ್ರ ‘ಅರ್ನಬ್’ (ಸಮುದ್ರ ಎಂದರ್ಥ) ಚಂಡಮಾರುತವಾಗಿ ಮಾರ್ಪಟ್ಟಿದೆ. ಮಂಗಳವಾರ ಇದು ಅತ್ಯಂತ ತೀವ್ರ ಸ್ವರೂಪ ಪಡೆದುಕೊಂಡು, ಅಂತಿಮವಾಗಿ ಬುಧವಾರ ಮುಂಜಾನೆ ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ.
ಆಂಧ್ರ ಕರಾವಳಿಗೆ ಹೈಅಲರ್ಟ್
ಚಂಡಮಾರುತದ ಪ್ರಭಾವದಿಂದ 3 ದಿನಗಳ ಕಾಲ ಆಂಧ್ರ ಕರಾವಳಿ, ಯಾನಾಂ ಮತ್ತು ರಾಯಲಸೀಮಾ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ. ಹೀಗಾಗಿ ಈ ಭಾಗಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಒಡಿಶಾದಲ್ಲಿ ಮೀನುಗಾರಿಕೆ ನಿಷೇಧ
ನೆರೆಯ ಆಂಧ್ರಪ್ರದೇಶದಕ್ಕೆ ಅಪ್ಪಳಿಸುತ್ತಿರುವ ಚಂಡಮಾರುತವು, ಒಡಿಶಾದ ದಕ್ಷಿಣ ಜಿಲ್ಲೆಗಳಾದ ಗಂಜಾಂ, ಗಜಪತಿ, ರಾಯಗಢ, ಮಲ್ಕಾನ್ಗಿರಿ, ಕೊರಾಪುಟ್ ಮತ್ತು ನಬರಂಗ್ಪುರಗಳಿಗೂ ತಟ್ಟಲಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು 6 ಜಿಲ್ಲೆಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಹಾಗೂ ಬೆಟ್ಟಗಳು, ಜಲಪಾತಗಳು ಮತ್ತು ಅಣೆಕಟ್ಟುಗಳ ಬಳಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ.
ಪಶ್ಚಿಮ ಬಂಗಾಳದಲ್ಲೂ ಭೀತಿ
ಪಶ್ಚಿಮ ಬಂಗಾಳದಲ್ಲೂ ಚಂಡಮಾರುತದ ಪ್ರಭಾವದಿಂದ ಅ.28ರಿಂದ 30 ರವರೆಗೆ ಭಾರಿ ಮಳೆಯಾಗಲಿದೆ ಎಂದು ಕೋಲ್ಕತ್ತಾದ ಹವಾಮಾನ ಇಲಾಖೆ ಎಚ್ಚರಿಸಿದೆ. ಡಾರ್ಜೀಲಿಂಗ್, ಕಾಲಿಂಪಾಂಗ್, ಅಲಿಪುರ್ದಾರ್ ಮತ್ತು ಜಲ್ಪೈಗುರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಡಾರ್ಜೀಲಿಂಗ್ನ ಬೆಟ್ಟ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಭೀತಿ ಎದುರಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.







