ಶೇ.100ರಷ್ಟು ಶುದ್ಧ ಎಥನಾಲ್‌ (ಇ100) ಇಂಧನದಿಂದ ಚಲಿಸುವ ಫ್ಲೆಕ್ಸ್-ಫ್ಯೂಯೆಲ್ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯಿಂದ ವಾಹನಗಳ ತೂಕದ ಮಿತಿಯನ್ನು 3,500 ಕೆಜಿಗಳಿಗೆ ಹೆಚ್ಚಿಸಲಾಗಿದೆ.

ನವದೆಹಲಿ: ಶೇ.100ರಷ್ಟು ಅಂದರೆ ‘ಇ100’ ಶುದ್ಧ ಎಥನಾಲ್‌ ಇಂಧನದಿಂದ ಚಲಿಸುವ ಫ್ಲೆಕ್ಸ್-ಫ್ಯೂಯೆಲ್ (ಯಾವುದೇ ಇಂಧನ ಬಳಸಬಹುದಾದ) ವಾಹನಗಳ ಬಳಕೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿದೆ. ಈ ಹೊಸ ತಿದ್ದುಪಡಿಯು ಸಂಪೂರ್ಣವಾಗಿ ಎಥನಾಲ್‌ ಆಧರಿತ ವಾಹನಗಳ ತಯಾರಿಕೆ ಮತ್ತು ಬಳಕೆಗೆ ಅಧಿಕೃತವಾಗಿ ಹಾದಿ ಸುಗಮಗೊಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, ಇ20 ಪ್ರಮಾಣಕ್ಕಿಂತ ಹೆಚ್ಚಿನ, ಅಂದರೆ ಇ100 ವರೆಗಿನ ಎಥನಾಲ್‌ ಇಂಧನವು ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ಮತ್ತು ಪ್ರಮಾಣೀಕರಿಸಿದ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಸಾಮಾನ್ಯ ಅಥವಾ ಇ20 ಇಂಧನ ಬಳಸುವ ವಾಹನಗಳಲ್ಲಿ ಇ85 ಅಥವಾ ಇ100 ಇಂಧನವನ್ನು ಬಳಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಾಹನ ತೂಕದ ಮಿತಿ ಹೆಚ್ಚಳ

ಈ ತಿದ್ದುಪಡಿಯ ಭಾಗವಾಗಿ ಸಚಿವಾಲಯವು ವಾಹನ ವರ್ಗೀಕರಣದ ಮಿತಿಗಳು, ಇಂಧನ ನಿಯತಾಂಕಗಳು ಹಾಗೂ ಹೊರಸೂಸುವಿಕೆ ತಪಾಸಣೆಗೆ ಸಂಬಂಧಿಸಿದ ತಾಂತ್ರಿಕ ನಿಯಮಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿದೆ. ಇದಲ್ಲದೆ, ಈ ಬದಲಾವಣೆಗೊಳಪಡುವ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ತೂಕದ ಮಿತಿಯನ್ನು ಪ್ರಸ್ತುತ ಇರುವ 3,000 ಕೆಜಿಗಳಿಂದ 3,500 ಕೆಜಿಗಳಿಗೆ ಹೆಚ್ಚಿಸಲಾಗಿದೆ.

ಭಾರತದ ಮೊದಲ ಫ್ಲೆಕ್ಸ್-ಫ್ಯೂಯೆಲ್ ಕಾರು

ಇತ್ತೀಚೆಗಷ್ಟೇ ಮಾರುತಿ ಸುಜುಕಿ ಸಂಸ್ಥೆಯು ಇ20ಯಿಂದ ಇ100 ವರೆಗಿನ ಮಿಶ್ರಣದಲ್ಲಿ ಚಲಿಸಬಲ್ಲ ಭಾರತದ ಮೊದಲ ಫ್ಲೆಕ್ಸ್-ಫ್ಯೂಯೆಲ್ ಕಾರು ‘ವೇಗನ್ ಆರ್ ಫ್ಲೆಕ್ಸ್-ಫ್ಯೂಯೆಲ್’ ಮಾದರಿಯನ್ನು ಬಿಡುಗಡೆ ಮಾಡಿತ್ತು. ಇದರ ಜತೆಗೆ ಟೊಯೋಟಾ, ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈ ಸಂಸ್ಥೆಗಳು ಸಹ ಭಾರತೀಯ ಮಾರುಕಟ್ಟೆಗೆ ಸೂಕ್ತವಾದ ಫ್ಲೆಕ್ಸ್-ಫ್ಯೂಯೆಲ್‌ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ.