ಭೋಪಾಲ್‌ನ ಏಮ್ಸ್ ಆಸ್ಪತ್ರೆಯ ಲಿಫ್ಟ್‌ನಲ್ಲಿ ವೈದ್ಯಕೀಯ ಸಿಬ್ಬಂದಿಯ ಚಿನ್ನದ ಸರ ಕದ್ದಿದ್ದ ಆರೋಪಿಯನ್ನು ಪೊಲೀಸರು 48 ಗಂಟೆಗಳಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ, ಆರೋಪಿಯು ಹಣಕಾಸಿನ ಸಮಸ್ಯೆ ಹಾಗೂ ಐಷಾರಾಮಿ ಜೀವನದ ಆಸೆಗಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಏಮ್ಸ್ ಆಸ್ಪತ್ರೆಯ ಲಿಫ್ಟ್‌ನಲ್ಲೇ ದರೋಡೆ ಮಾಡಿದವನ ಬಂಧನ
ಇತ್ತೀಚೆಗೆ ಭೋಪಾಲ್‌ನ ಏಮ್ಸ್ ಆಸ್ಪತ್ರೆಯ ಲಿಫ್ಟ್‌ನಲ್ಲೇ ಯುವಕನೋರ್ವ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯೊಬ್ಬರ ಚಿನ್ನದ ಕರಿಮಣಿ ಸರವನ್ನು ಕದ್ದು ಪರಾರಿಯಾಗಿದ್ದ. ಲಿಫ್ಟ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಸ್ಪತ್ರೆಯಲ್ಲೇ ಈ ಘಟನೆ ನಡೆದಿದೆ ಎಂಬ ವಿಚಾರ ತಿಳಿದು ಅನೇಕರು ಆಘಾತ ವ್ಯಕ್ತಪಡಿಸಿದ್ದರು. ಆದರೆ ಈಗ ಈ ಚಿನ್ನದ ಸರವನ್ನು ಕದ್ದಿರುವುದು ಬೇರೆ ಯಾರು ಅಲ್ಲ, ಅದೇ ವೈದ್ಯಕೀಯ ಕಾಲೇಜಿನಲ್ಲಿ ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿ ಎಂಬುದು ತಿಳಿದು ಬಂದಿದೆ. ಘಟನೆ ನಡೆದ 48 ಗಂಟೆಗಳಲ್ಲಿ ಪೊಲೀಸರು ಆತನನ್ನು ಬಂಧಿಸಿ ಪ್ರಕರಣವನ್ನು ಭೇದಿಸಿದ್ದಾರೆ. ಅತನನ್ನು 25 ವರ್ಷದ ಸುನೀಲ್ ಮೀನಾ ಎಂದು ಗುರುತಿಸಲಾಗಿದೆ. ಈತ 3ನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಯಾಗಿದ್ದಾನೆ.
ಆರೋಪಿಯನ್ನು ಪತ್ತೆ ಮಾಡಲು ಪೊಲೀಸರು 45 ಸಿಸಿ ಕ್ಯಾಮರಾಗಳನ್ನು ತಪಾಸಣೆ ಮಾಡಿದ್ದರು. ಆಸ್ಪತ್ರೆಯ ಲಿಫ್ಟ್‌ನಲ್ಲಿ ಬರುತ್ತಿದ್ದಾಗ ಈ ಅವಘಡ ನಡೆದಿತ್ತು. ಕೇವಲ 54 ಸೆಕೆಂಡ್‌ಗಳಲ್ಲಿ ಅರೋಪಿ ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾಗಿದ್ದ. ಏಮ್ಸ್ ಆಸ್ಪತ್ರೆಯ ಸ್ತ್ರೀ ರೋಗ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವರ್ಷಾ ಸೋನಿ ಎಂಬುವವರು ಈ ಘಟನೆಯಲ್ಲಿ ಚಿನ್ನದ ಸರವನ್ನು ಕಳೆದುಕೊಂಡಿದ್ದರು.
ಘಟನೆಯ ವೀಡಿಯೋದಲ್ಲಿ ವರ್ಷ ಸೋನಿ ಹಾಗೂ ಆರೋಪಿ ಇಬ್ಬರು ಲಿಫ್ಟ್‌ನಲ್ಲಿ ಬರುತ್ತಿದ್ದರು. ಈ ವೇಳೆ ಆರೋಪಿ ಮುಖಕ್ಕೆ ಮಾಸ್ಕ್ ಹಾಕಿದ್ದ. ಲಿಫ್ಟ್ 3ನೇ ಫ್ಲೋರ್ ತಲುಪುತ್ತಿದ್ದಂತೆ ಆರೋಪಿ ಹೊರ ಹೋಗುವುದಕ್ಕೆ ಮುಂದೆ ಹೋದಂತೆ ಮಾಡಿ ಹಿಂದೆ ತಿರುಗಿ ವರ್ಷ ಸೋನಿ ಅವರ ಕತ್ತಿಗೆ ಕೈ ಹಾಕಿ ಚಿನ್ನದ ಮಂಗಳಸೂತ್ರ ಕದ್ದು ಮೆಟ್ಟಿಲುಗಳನ್ನು ಇಳಿದು ಪರಾರಿಯಾಗಿದ್ದ. ಈ ವೇಳೆ ವರ್ಷಾ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಆತನನ್ನು ಹಿಡಿಯಲಾಗದೇ ಅಸಹಾಯಕರಾಗಿದ್ದರು. ಆದರೆ ನಂತರ ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಪರೀಕ್ಷಿಸಿದ ವೈದ್ಯರು ಆರೋಪಿ ಸುನೀಲ್ ಮೀನಾನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ವಿಮಾನ ಅಪಘಾತದ ವೇಳೆ ಟಿವಿ ನೋಡ್ತಿದ್ದ ಅಜಿತ್ ಪವಾರ್ ತಾಯಿ: ಮನೆಯ ಕೇಬಲ್ ಸಂಪರ್ಕ ಕಡಿತಗೊಳಿಸಿದ ಸಿಬ್ಬಂದಿ
ಬಂಧನದ ನಂತರ ಪೊಲೀಸರ ವಿಚಾರಣೆ ವೇಳೆ ಆರೋಪಿ ಸುನೀಲ್ ಮೀನಾ, ತಾನು ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದು, ಆನ್‌ಲೈನ್ ಹಣ ವರ್ಗಾವಣೆ ವೇಳೆ ಸಾಕಷ್ಟು ಹಣ ಕಳೆದುಕೊಂಡಿದ್ದೇನೆ ಸ್ನೇಹಿತರ ಬಳಿಯೂ ಸಾಲ ಮಾಡಿದ್ದೇನೆ. ಎಲ್ಲರೂ ಸಾಲದ ಹಣ ವಾಪಸ್ ಕೇಳುತ್ತಿದ್ದರು. ಹೀಗಾಗಿ ಹಣಕ್ಕಾಗಿ ಕಳ್ಳತನ ಮಾಡಿದ್ದಾಗಿ ಹೇಳಿದ್ದಾನೆ. ಈತ ಬಹಳ ಲಕ್ಸುರಿ ಜೀವನ ಶೈಲಿ ರೂಪಿಸಿಕೊಂಡಿದ್ದ, ದುಬಾರಿ ಮೊಬೈಲ್, ಕಾರು ಖರೀದಿಸಬೇಕೆಂದು ಬಯಸಿದ್ದ, ಹೀಗೆ ದುಡ್ಡಿಲ್ಲದೆಯೂ ಶೋಕಿ ಮಾಡ್ತಿದ್ದ ಈತನಿಗೆ ಒಬ್ಬಳು ಗರ್ಲ್‌ಫ್ರೆಂಡ್ ಕೂಡ ಇದ್ದಳು. ಈ ಎಲ್ಲಾ ವೈಯಕ್ತಿಕ ಖರ್ಚುವೆಚ್ಚಗಳನ್ನು ಸರಿದೂಗಿಸಿಕೊಳ್ಳಲು ಈತ ಈ ರೀತಿ ಕಳ್ಳತನಕ್ಕೆ ಇಳಿದಿದ್ದಾಗಿ ವರದಿಯಾಗಿದೆ. ಈತ ಹೀಗೆ ಕದ್ದ ಕರಿಮಣಿ ಸರವನ್ನು ಜ್ಯುವೆಲ್ಲರಿ ಶಾಪೊಂದಕ್ಕೆ ಮಾರಾಟ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪುಷ್ಪರಾಜ್ ಎಂಬುವವರಿಂದ ಈ ಮಂಗಳಸೂತ್ರವನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದಲ್ಲಿ ಆತನನ್ನು ಆರೋಪಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಕ್ಕಳಿಗೆ ಮಾಲ್ ಮಾಲ್ ಎಂದು ಕರೆದು ಚುಡಾಯಿಸ್ತಿದ್ದ ಬೀದಿ ಕಾಮಣ್ಣರಿಗೆ ಬೆಂಡೆತ್ತಿದ್ದ ಪೊಲೀಸರು


