ಮುಂಬೈನ ವಿರಾರ್ ಪಶ್ಚಿಮದ ಕಟ್ಟಡದ ಲಿಫ್ಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಬ್ಲಿಂಕಿಟ್ ಡೆಲಿವರಿ ಏಜೆಂಟ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಈ ಕೃತ್ಯ ಸೆರೆಯಾಗಿದ್ದು, ನಿವಾಸಿಗಳು ಆತನನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ನವದೆಹಲಿ (ಜು.22): ಮುಂಬೈನ ವಿರಾರ್ ಪಶ್ಚಿಮದಲ್ಲಿರುವ ಕಟ್ಟಡವೊಂದರ ಲಿಫ್ಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಬ್ಲಿಂಕಿಟ್ ಡೆಲಿವರಿ ಏಜೆಂಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಟ್ಟಡದ ನಿವಾಸಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಘಟನೆ ಬಗ್ಗೆ ಗೊತ್ತಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ, ಡೆಲಿವರಿ ಏಜೆಂಟ್ ಲಿಫ್ಟ್ ಒಳಗೆ ಎಡಗೈಯಲ್ಲಿ ಪಾರ್ಸೆಲ್ ಹಿಡಿದಿರುವುದು ಕಂಡುಬರುತ್ತದೆ. ಅವನು ತನ್ನ ಪ್ಯಾಂಟ್‌ನ ಒಂದು ಮೂಲೆಯಲ್ಲಿ ಜಿಪ್ ಬಿಚ್ಚಿ ಮೂತ್ರ ಮಾಡಿದ್ದಾನೆ. ಹಿಂಬದಿಯ ಕ್ಯಾಮೆರಾದಿಂದ ತನ್ನ ಕೃತ್ಯವನ್ನು ಮರೆಮಾಡಲು ಪ್ರಯತ್ನಿಸಿದ್ದು ದಾಖಲಾಗಿದೆ.

ನಂತರ ಅವನು ಲಿಫ್ಟ್‌ನ ಮುಂಭಾಗದ ಗೇಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂದು ಆರೋಪಿಸಲಾಗಿದೆ. ಮುಂಬೈನ ವಿರಾರ್ ಪಶ್ಚಿಮದಲ್ಲಿರುವ ಸಿಡಿ ಗುರುದೇವ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

ಕಟ್ಟಡದ ನಿವಾಸಿಗಳು ಲಿಫ್ಟ್‌ನಲ್ಲಿ ಸಮಸ್ಯೆಯನ್ನು ಗಮನಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ/ ಇದರಲ್ಲಿ ಬ್ಲಿಂಕಿಟ್ ಜಾಕೆಟ್ ಧರಿಸಿದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಘಟನೆಯ ನಂತರ, ನಿವಾಸಿಗಳು ಬ್ಲಿಂಕಿಟ್ ಕಚೇರಿಯಲ್ಲಿ ಆರೋಪಿಯನ್ನು ಪ್ರಶ್ನೆ ಮಾಡಿದ್ದಲ್ಲದೆ, ಅಲ್ಲಿ ಆತನನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು ಮತ್ತು ವಿರಾರ್ ಪಶ್ಚಿಮದಲ್ಲಿರುವ ಬೊಲಿಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಘಟನೆಯನ್ನು ದೃಢಪಡಿಸಿದ ಪೊಲೀಸ್‌ ಅಧಿಕಾರಿ, ಸೋಮವಾರ ರಾತ್ರಿ ಬೊಲಿಂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದರು. "ಲಿಫ್ಟ್‌ನಲ್ಲಿ ಡೆಲಿವರಿ ಏಜೆಂಟ್‌ ಮೂತ್ರ ವಿಸರ್ಜನೆ ಮಾಡುತ್ತಿರುವ ಬಗ್ಗೆ ನಿವಾಸಿಗಳಿಂದ ನಮಗೆ ದೂರು ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷಿಯಾಗಿ ಸಲ್ಲಿಸಲಾಗಿದೆ. ನಾವು ಡೆಲಿವರಿ ಏಜೆಂಟ್‌ನ ಗುರುತನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಎರಡೂ ಕಡೆಯಿಂದ ಹೇಳಿಕೆಗಳನ್ನು ದಾಖಲಿಸುತ್ತಿದ್ದೇವೆ" ಎಂದು ಅಧಿಕಾರಿ ಹೇಳಿದರು.

ಅನೇಕ ನಿವಾಸಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪೋಸ್ಟ್ ಮಾಡಿ ಅಂತಹ ನಡವಳಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. "ಡೆಲಿವರಿ ಏಜೆಂಟ್‌ನ ಕೃತ್ಯವು ಅತ್ಯಂತ ಆಕ್ಷೇಪಾರ್ಹವಾಗಿದ್ದರೂ, ಹಿಂಸಾಚಾರವನ್ನು ಆಶ್ರಯಿಸುವ ಬದಲು ಈ ವಿಷಯವನ್ನು ತಕ್ಷಣವೇ ಪೊಲೀಸರಿಗೆ ವರದಿ ಮಾಡಬೇಕಾಗಿತ್ತು" ಎಂದು ಅಧಿಕಾರಿ ಹೇಳಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ ಎಂದು ಅವರು ಹೇಳಿದರು.