ಶೆಲ್ಲಿ ಒಬೆರಾಯ್‌ 150 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ 116 ಮತಗಳನ್ನು ಪಡೆದಿದ್ದಾರೆ. ಈ ಹಿನ್ನೆಲೆ ಮೇಯರ್‌ ಸ್ಥಾನಕ್ಕೆ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿಗೆ ಮುಖಭಂಗವಾದಂತಾಗಿದೆ.

ಹೊಸ ದೆಹಲಿ (ಫೆಬ್ರವರಿ 22, 2023): ದೆಹಲಿ ಮೇಯರ್‌ ಗದ್ದಲಕ್ಕೆ ಕೊನೆಗೂ ತೆರೆ ಎಳೆಯಲಾಗಿದ್ದು, ಎಎಪಿಯ ಶೆಲ್ಲಿ ಒಬೆರಾಯ್‌ ಅವರನ್ನು ದೆಹಲಿಯ ನೂತನ ಮೇಯರ್‌ ಅನ್ನಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ, ಎಎಪಿ ನಡುವಿನ ಗದ್ದಲಗಳಿಂದಾಗಿ ಮೇಯರ್‌ ಚುನಾವಣೆ 3 ಬಾರಿ ಮುಂದೂಡಿಕೆಯಾಗಿತ್ತು. ಇತ್ತೀಚೆಗೆ ಸುಪ್ರೀಂಕೋರ್ಟ್‌ ನೀಡಿದ ಆದೇಶದಂತೆ ಬುಧವಾರ ಚುನಾವಣೆ ನಡೆದಿದ್ದು, ಈ ವೇಳೆ ಎಎಪಿಯ ಶೆಲ್ಲಿ ಒಬೆರಾಯ್‌ ಆಯ್ಕೆಯಾಗಿದ್ದಾರೆ. 

ನಾಮನಿರ್ದೇಶಿತ ಸದಸ್ಯರು (Nominated Members) ಮತದಾನ ಪ್ರಕ್ರಿಯೆಯಲ್ಲಿ (Voting Process) ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿದ ಕೆಲವು ದಿನಗಳ ನಂತರ ಆಮ್ ಆದ್ಮಿ ಪಕ್ಷದ (Aam Aadmi Party) (ಎಎಪಿ) (AAP) ಶೆಲ್ಲಿ ಒಬೆರಾಯ್ (Shelly Oberoi) ಬುಧವಾರ ದೆಹಲಿ ಮೇಯರ್ ಚುನಾವಣೆಯಲ್ಲಿ (Delhi Mayor Election) ಗೆದ್ದಿದ್ದಾರೆ. ಶೆಲ್ಲಿ ಒಬೆರಾಯ್ ಅವರು ಬಿಜೆಪಿ (BJP) ಅಭ್ಯರ್ಥಿ ರೇಖಾ ಗುಪ್ತಾ ಅವರ ವಿರುದ್ಧ 34 ಅಂತರಗಳ ಗೆಲುವು ಸಾಧಿಸಿದ್ದಾರೆ. 

ಇದನ್ನು ಓದಿ: ಆಪ್ ಬಿಜೆಪಿ ನಡುವೆ ಮಾರಾಮಾರಿ, ದೆಹಲಿ ಮೇಯರ್ ಚುನಾವಣೆ ರದ್ದಾಯ್ತು ಮೊದಲ ಬಾರಿ!

ಶೆಲ್ಲಿ ಒಬೆರಾಯ್‌ 150 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ 116 ಮತಗಳನ್ನು ಪಡೆದಿದ್ದಾರೆ. ಈ ಹಿನ್ನೆಲೆ ಮೇಯರ್‌ ಸ್ಥಾನಕ್ಕೆ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿಗೆ ಮುಖಭಂಗವಾದಂತಾಗಿದೆ. ಇನ್ನು, ಎಎಪಿ ಅಭ್ಯರ್ಥಿ ಶೆಲ್ಲಿ ಒಬೆರಾಯ್‌ ದೆಹಲಿ ಮೇಯರ್‌ ಆಗಿದ್ದಕ್ಕೆ ಅವರನ್ನು ಅಭಿನಂದಿಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು "ಗೂಂಡಾಗಳು ಸೋತರು, ಸಾರ್ವಜನಿಕರು ಗೆದ್ದರು" ಎಂದೂ ಪ್ರತಿಕ್ರಿಯೆ ನೀಡಿದ್ದಾರೆ. 

ಆಪ್‌ ಮೇಯರ್‌ ಆಗಿದ್ದಕ್ಕೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅನೇಕ ಅಭಿನಂದನೆಗಳು ಮತ್ತು ದೆಹಲಿಯ ಜನರಿಗೆ ಮತ್ತೊಮ್ಮೆ ಹೃದಯಪೂರ್ವಕ ಕೃತಜ್ಞತೆಗಳು ಎಂದು ಮನೀಶ್‌ ಸಿಸೋಡಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಹಾಗೆ, ಎಎಪಿಯ ಮೊದಲ ಮೇಯರ್ ಶೆಲ್ಲಿ ಒಬೆರಾಯ್‌ ಅವರಿಗೆ ಅನೇಕ ಅಭಿನಂದನೆಗಳು ಎಂದೂ ಅವರು ಪೋಸ್ಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಕೇಜ್ರಿವಾಲ್ ಆಪ್ ಪಕ್ಷಕ್ಕೆ ಸಂಕಷ್ಟ: 97 ಕೋಟಿ ವಸೂಲಿಗೆ ಗವರ್ನರ್ ಆದೇಶ

ಸರ್ವೋಚ್ಚ ನ್ಯಾಯಾಲಯದ ಶುಕ್ರವಾರದ ತೀರ್ಪಿನ ಪ್ರಕಾರ ಉಪಮೇಯರ್ ಮತ್ತು ಪ್ರಬಲ ಸ್ಥಾಯಿ ಸಮಿತಿಯ 6 ಸದಸ್ಯರು ಸೇರಿದಂತೆ ಉಳಿದ ಚುನಾವಣೆಗಳಿಗೆ ದೆಹಲಿಯ ನೂತನ ಮೇಯರ್‌ ಶೆಲ್ಲಿ ಒಬೆರಾಯ್ ಈಗ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಯರ್ ಆಯ್ಕೆಯೊಂದಿಗೆ ವಿಶೇಷ ಅಧಿಕಾರಿಯ ಕಚೇರಿಗೂ ಸಹ ಬೀಗ ಬಿದ್ದಂತಾಗಿದೆ. ವಿಶೇಷ ಅಧಿಕಾರಿ ಅಶ್ವಿನಿ ಕುಮಾರ್ ಅವರು ಮೇ 22, 2022 ಮತ್ತು ಫೆಬ್ರವರಿ 22, 2023 ರ ನಡುವೆ ವಿಚಾರಣಾ ವಿಭಾಗದ ಅಧಿಕಾರವನ್ನು ಹೊಂದಿದ್ದರು.

ಈ ಹಿಂದೆ ದೆಹಲಿಯ ಮೇಯರ್‌ ಚುನಾವಣೆ ನಡೆಸಲು ಮೂರು ಬಾರಿ ವಿಫಲ ಯತ್ನಗಳು ನಡೆದ ನಂತರ ಸುಪ್ರೀಂ ಕೋರ್ಟ್ ಆದೇಶದ ನಂತರ ಬುಧವಾರ ಮೇಯರ್ ಚುನಾವಣೆ ನಡೆಸಲಾಯಿತು. ಕಳೆದ ವರ್ಷ ಡಿಸೆಂಬರ್ 4 ರಂದು ನಡೆದ ದೆಹಲಿಯ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಎಎಪಿ ಸ್ಪಷ್ಟ ವಿಜಯಿಯಾಗಿ ಹೊರಹೊಮ್ಮಿತ್ತು. ಅವರು 134 ವಾರ್ಡ್‌ಗಳನ್ನು ಗೆದ್ದು, ನಾಗರಿಕ ಸಂಸ್ಥೆಯಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದ್ದರು. ಇನ್ನು 250 ಸದಸ್ಯ ಬಲದ ಮುನ್ಸಿಪಲ್ ಹೌಸ್‌ನಲ್ಲಿ ಬಿಜೆಪಿ 104 ವಾರ್ಡ್‌ಗಳನ್ನು ಗೆದ್ದು ಎರಡನೇ ಸ್ಥಾನ ಗಳಿಸಿದರೆ, ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಎಲ್ಲರೂ ಹಸುವಿನ ಹಾಲು ಕರೆದರೆ ನಾವು ___ ಹಾಲು ಕರೆದೆವು ಎಂದ ಕೇಜ್ರಿವಾಲ್

ನಾಮನಿರ್ದೇಶಿತ ಸದಸ್ಯರಿಗೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್ ಮತದಾನದ ಹಕ್ಕು ನೀಡಿದ್ದರು. ನಂತರ, ಎಎಪಿ ಈ ಬಗ್ಗೆ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಇತ್ತೀಚೆಗೆ ಈ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ ಲೆಫ್ಟಿನೆಂಟ್‌ ಗವರ್ನರ್ ಆದೇಶವನ್ನು ತಿರಸ್ಕರಿಸಿ, ದೆಹಲಿ ಮೇಯರ್‌ ಚುನಾವಣೆಗೆ ಮುಹೂರ್ತ ಫಿಕ್ಸ್‌ ಮಾಡಿತ್ತು. ,