ನಟ ಅಮೀರ್ ಖಾನ್ ಅವರ ಮೂರನೇ ಮದುವೆಯು 'ಲವ್ ಜಿಹಾದ್' ಆರೋಪದೊಂದಿಗೆ ದೊಡ್ಡ ವಿವಾದವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ, ಅಯೋಧ್ಯೆಯ ಶ್ರೀಗಳು ಅಮೀರ್ ಖಾನ್ ಅವರನ್ನು ಹತ್ಯೆ ಮಾಡಿದವರಿಗೆ 5 ಕೋಟಿ ರೂಪಾಯಿ ಬಹುಮಾನ ಘೋಷಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಈ ಘಟನೆಯು ರಾಜಕೀಯ ವಲಯದಲ್ಲೂ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಾಲಿವುಡ್‌ನ 'ಮಿಸ್ಟರ್ ಪರ್ಫೆಕ್ಟ್‌' ಖ್ಯಾತಿಯ ನಟ ಅಮೀರ್ ಖಾನ್ ಅವರ ವೈಯಕ್ತಿಕ ಜೀವನ ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಅವರ ಮೂರನೇ ಮದುವೆಯ ಬೆನ್ನಲ್ಲೇ ಅವರಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಲಾಗಿದ್ದು, ಅಮೀರ್ ಖಾನ್ ಅವರನ್ನು ಹತ್ಯೆ ಮಾಡಿದವರಿಗೆ ಅಯೋಧ್ಯೆಯ ಶ್ರೀಗಳು ಬರೋಬ್ಬರಿ 5 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ವಿವಾದದ ಹಿನ್ನೆಲೆ ಏನು?

ಇತ್ತೀಚೆಗಷ್ಟೇ ನಟ ಅಮೀರ್ ಖಾನ್ ಅವರು ಬ್ಯೂಟಿ ಮತ್ತು ವೆಲ್ನೆಸ್ ವೃತ್ತಿಪರರಾದ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜುಲೈ 5 ರಂದು ಮುಂಬೈನ ಪಾಲಿ ಹಿಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸರಳವಾಗಿ ಮದುವೆಯಾಗಿದ್ದರು. ಈ ವಿಷಯ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

5 ಕೋಟಿ ರೂಪಾಯಿ ಬಹುಮಾನದ ಘೋಷಣೆ:

ಅಯೋಧ್ಯೆಯ ಪ್ರಸಿದ್ಧ ತಪಸ್ವಿ ಶಿಬಿರದ ಮುಖ್ಯಸ್ಥ ಜಗದ್ಗುರು ಪರಮಹಂಸ ಆಚಾರ್ಯ ಅವರು ಅಮೀರ್ ಖಾನ್ ವಿರುದ್ಧ ಗುಡುಗಿದ್ದಾರೆ. 'ಯಾರೇ ಆಗಲಿ ಅಮೀರ್ ಖಾನ್ ಅವರನ್ನು ಹತ್ಯೆ ಮಾಡಿದರೆ, ಅವರಿಗೆ ನಾನು 5 ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ. ಅಷ್ಟೇ ಅಲ್ಲದೆ, ಅವರ ಮೇಲಾಗುವ ಎಲ್ಲಾ ಕಾನೂನು ಹೋರಾಟದ ಖರ್ಚನ್ನು ನಾನೇ ಭರಿಸುತ್ತೇನೆ' ಎಂದು ಹೇಳಿದ್ದಾರೆ. ಅಮೀರ್ ಖಾನ್ ಅವರು 'ಲವ್ ಜಿಹಾದ್' ಅನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ರಾಜಕೀಯ ನಾಯಕರ ಆಕ್ರೋಶ:

ಮಹಾರಾಷ್ಟ್ರದ ಬಿಜೆಪಿ ಸಚಿವ ನಿತೇಶ್ ರಾಣೆ ಅವರು ಅಮೀರ್ ಖಾನ್ ಅವರನ್ನು 'ಲವ್ ಜಿಹಾದ್‌ನ ಬ್ರಾಂಡ್ ಅಂಬಾಸಿಡರ್' ಎಂದು ಕರೆದಿದ್ದು, ಈ ಹೇಳಿಕೆಯನ್ನು ಪರಮಹಂಸ ಆಚಾರ್ಯ ಬೆಂಬಲಿಸಿದ್ದಾರೆ. 'ಅಮೀರ್ ಖಾನ್ ಇದುವರೆಗೆ ಮೂರು ಮದುವೆಯಾಗಿದ್ದು, ಆ ಮೂವರೂ ಹಿಂದೂ ಮಹಿಳೆಯರೇ ಆಗಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ' ಎಂಬುದು ಶ್ರೀಗಳ ವಾದವಾಗಿದೆ.

ಅಮೀರ್ ಖಾನ್ ಅವರ ಈ ಹಿಂದಿನ ದಾಂಪತ್ಯ:

ಅಮೀರ್ ಖಾನ್ 1986ರಲ್ಲಿ ರೀನಾ ದತ್ತಾ ಅವರನ್ನು ಮೊದಲ ಮದುವೆಯಾಗಿದ್ದರು (2002ರಲ್ಲಿ ವಿಚ್ಛೇದನ). ನಂತರ 2005ರಲ್ಲಿ ಕಿರಣ್ ರಾವ್ ಅವರನ್ನು ಮದುವೆಯಾದರು (2021ರಲ್ಲಿ ವಿಚ್ಛೇದನ). ಈಗ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಮೂರನೇ ಮದುವೆಯಾಗಿದ್ದಾರೆ. ಈ ಎಲ್ಲಾ ಮದುವೆಗಳು ಈಗ 'ಲವ್ ಜಿಹಾದ್' ಎಂಬ ಹೊಸ ವಿವಾದಕ್ಕೆ ನಾಂದಿ ಹಾಡಿವೆ.

ಈಗಾಗಲೇ ಬಜರಂಗದಳದ ಕಾರ್ಯಕರ್ತರು ಈ ಮದುವೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಈಗ ಅಯೋಧ್ಯೆಯ ಶ್ರೀಗಳ ಈ ಪ್ರಚೋದನಾಕಾರಿ ಹೇಳಿಕೆಯಿಂದ ಅಮೀರ್ ಖಾನ್ ಅವರ ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ. ಸದ್ಯಕ್ಕೆ ಅಮೀರ್ ಖಾನ್ ಅಥವಾ ಅವರ ತಂಡ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.