ಇಲ್ಲೊಂದು ಕಡೆ ಯುವಕನೋರ್ವ ಸುಮ್ಮನಿರಲಾರದೇ ಹುಲಿಯ ಬಾಲಕ್ಕೆ ದೊಣ್ಣೆಯೊಂದನ್ನು ಕಟ್ಟಿ ಅದು ಹೇಗೆ ಪ್ರತಿಕ್ರಿಯಿಸಬಹುದು ಎಂದು ನೋಡಲು ಹೋಗಿದ್ದಾನೆ. ಆಮೇಲಾಗಿದ್ದು, ದುರಂತ.
ಭೋಪಾಲ್: ಕಾಡುಪ್ರಾಣಿಗಳು ಯಾವಾಗ ಹೇಗೆ ದಾಳಿ ಮಾಡುತ್ತವೆ ಎಂದು ಹೇಳಲಾಗದು. ಸಾಮಾನ್ಯವಾಗಿ ಕಾಡುಪ್ರಾಣಿಗಳು ತಮ್ಮಷ್ಟಕ್ಕೆ ತಾವಿರುತ್ತವೆ. ಹಸಿವಾದರಷ್ಟೇ ಬೇಟೆಯಾಡುವ ಕಾಡುಪ್ರಾಣಿಗಳು ಹೊಟ್ಟೆ ತುಂಬಿದ ನಂತರ ತನ್ನ ಇಷ್ಟದ ಆಹಾರವೆನಿಸಿರುವ ಇತರ ಸಣ್ಣಪುಟ್ಟ ಪ್ರಾಣಿಗಳು ಕಣ್ಣೆದುರೇ ಸಾಗಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಕೆಣಕಲು ಹೋದರೆ ಕತೆ ಮುಗಿದಂತೆ ಅದರಲ್ಲೂ ವ್ಯಾಘ್ರಗಳೆನಿಸಿದ ಹುಲಿ ಸಿಂಹಗಳ ಮುಂದೆ ಯಾರ ಆಟವೂ ನಡೆಯದು. ವ್ನ್ಯಜೀವಿಗಳೊಂದಿಗೆ ಸರಸ ಸಲ್ಲದು ಎಂದು ಜನ ಸಾಮಾನ್ಯರಿಗೆ ಅರಣ್ಯ ಇಲಾಖೆ ಆಗಾಗ ಸ್ಪಷ್ಟ ಸೂಚನೆ ನೀಡುತ್ತಿರುತ್ತದೆ. ಹಾಗಿದ್ದೂ ಕೂಡ ಕೆಲವು ಸಂದರ್ಭಗಳಲ್ಲಿ ಕೆಲವು ಅತೀ ಕುತೂಹಲದ ವ್ಯಕ್ತಿಗಳು ಕಾಡು ಪ್ರಾಣಿಗಳನ್ನು ಕೆಣಕಲು ಹೋಗಿ ತಮ್ಮ ಜೀವಕ್ಕೆ ಅಪಾಯವನ್ನು ಎಳೆದುಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ಸುಮ್ಮನಿರಲಾರದೇ ಹುಲಿಯ ಬಾಲಕ್ಕೆ ದೊಣ್ಣೆಯೊಂದನ್ನು ಕಟ್ಟಿ ಅದು ಹೇಗೆ ಪ್ರತಿಕ್ರಿಯಿಸಬಹುದು ಎಂದು ನೋಡಲು ಹೋಗಿದ್ದಾನೆ.
ಆದರೆ ಈತನ ಕಿತಾಪತಿಯಿಂದ ರಾಷ್ಟ್ರೀಯ ಪ್ರಾಣಿ ಎನಿಸಿರುವ ಹುಲಿಗೆ ಕೆಣಕಿದಂತಾಗಿದ್ದು, ಕೂಡಲೇ ಆತನ ಮೇಲೆ ದಾಳಿ ಮಾಡಿದೆ. ಆತನ ಕುತ್ತಿಗೆ ಹಿಡಿದು ಹುಲಿ ಎಳೆದಾಡಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಹೀಗೆ ಹುಲಿಯನ್ನು ಕೆಣಕಿ ಪ್ರಾಣ ಕಳೆದುಕೊಂಡ ಯುವಕನನ್ನು 35 ವರ್ಷದ ಸಂತೋಷ್ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದ ಖರ್ಗೊನೆ (Khargone) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಚಿತ್ರದುರ್ಗದ ಕಿರು ಮೃಗಾಲಯಕ್ಕೆ ಬೆಂಗಾಲ್ ಟೈಗರ್ಸ್ ಎಂಟ್ರಿ, ಪುಳಕಿತರಾದ ಪ್ರವಾಸಿಗರು
ಸಂತೋಷ್ ಆಟದಿಂದ ಪ್ರಚೋದನೆಗೊಳಗಾದ ಹುಲಿ ಆತನ ಮೇಲೆ ದಾಳಿ ನಡೆಸಿ ಕುತ್ತಿಗೆಯನ್ನು ಕಚ್ಚಿ ಗಾಯಗೊಳಿಸಿತ್ತು. ಇದಾದ ಬಳಿಕ ಹುಲಿ ಕಾಡಿನಲ್ಲಿ ಮಾಯವಾಗಿದ್ದು,
ಹುಲಿಗಾಗಿ ಅರಣ್ಯ ಸಿಬ್ಬಂದಿ ಶೋಧ ನಡೆಸಿದೆ. ಮಹಾರಾಷ್ಟ್ರದ ಜಲಗಾಂವ್ (Jalgaon district) ಜಿಲ್ಲೆಯಲ್ಲಿರುವ ಯಾವಲ್ ವನ್ಯಜೀವಿ ಸಂರಕ್ಷಣಾ ಪ್ರದೇಶದಿಂದ (Yawal Wildlife Sanctuary) ಮಧ್ಯಪ್ರದೇಶದ ಖರ್ಗೊನೆ ಜಿಲ್ಲೆಯ ಚಿರಿಯ ಅರಣ್ಯ ಪ್ರದೇಶಕ್ಕೆ (Chiriya forest range) ಆಗಮಿಸಿತ್ತು.
ಕೊಡಗು: ಬ್ರಹ್ಮಗಿರಿಯಲ್ಲಿ ಹಾಡಹಗಲೇ ರಸ್ತೆಯಲ್ಲಿ ಹುಲಿ ಓಡಾಟ, ಕಕ್ಕಾಬಿಕ್ಕಿಯಾದ ಜನತೆ..!
ಇದು ಮೊದಲಿಗೆ ಯಾವಲ್ ಪ್ರದೇಶದ ಅಂಬಾ ದೊಚರ್ (Amba Dochar) ಪ್ರದೇಶಕ್ಕೆ ಬಂದಿದ್ದ ಈ ಹುಲಿ ಬೇಟೆಯಾಡಿದ ನಂತರ ವಿಶ್ರಾಂತಿ ಪಡೆಯುತ್ತಿತ್ತು. ಇದರ ಉಪಸ್ಥಿತಿ ಅಲ್ಲಿ ಗ್ರಾಮಸ್ಥರ ಗಮನ ಸೆಳೆದಿದ್ದು, ಗ್ರಾಮದ ಮಂದಿ ಹುಲಿಯನ್ನು ಕೆಣಕಲು ಶುರು ಮಾಡಿದ್ದಾರೆ ಪರಿಣಾಮ ಘಟನೆ ಸಂಭವಿಸಿದೆ ಎಂದು ಭಿಕಗಾನ್ (Bhikangaon) ಎಸ್‌ಡಿಒ (ಅರಣ್ಯ) ದಿನೇಶ್ ವಾಸ್ಕೆಲ್ ಹೇಳಿದ್ದಾರೆ.
