Asianet Suvarna News Asianet Suvarna News

ಇಂದು ತುರ್ತುಸ್ಥಿತಿ ಹೇರಿಕೆಯ ದಿನ, ನಿಜವಾದ ಸರ್ವಾಧಿಕಾರ ಹೇಗಿರುತ್ತೆ ಗೊತ್ತಾ!

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಸಿರಾಗಿಸಿಕೊಳ್ಳುವ ಆಡಳಿತಗಾರ ಎಷ್ಟುಪರಿಣಾಮಕಾರಿಯಾಗಿ ಆಡಳಿತ ನಡೆಸಬಲ್ಲ ಎಂಬುದಕ್ಕೆ ಇಂದಿನ ಪ್ರಧಾನಿ ಮೋದಿಯವರೇ ಉದಾಹರಣೆ.

A State of Emergency was Declared in India on this Day in 1975 hls
Author
Bengaluru, First Published Jun 25, 2022, 9:47 AM IST

ನರೇಂದ್ರ ಮೋದಿ ಪ್ರಧಾನ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಹುವಾಗಿ ಬಳಸಲ್ಪಡುತ್ತಿರುವ ಪದ ‘ಸರ್ವಾಧಿಕಾರಿ.’ ವಿರೋಧ ಪಕ್ಷಗಳು ಮಾತ್ರವಲ್ಲದೆ ಕೆಲವು ಮಾಧ್ಯಮಗಳು ಕೂಡಾ ಪ್ರಧಾನಿಯನ್ನು ಸರ್ವಾಧಿಕಾರಿ ಎಂದೇ ಸಂಬೋಧಿಸುವುದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ. ಅಧಿಕಾರ ವಹಿಸಿಕೊಂಡ ಕ್ಷಣದಲ್ಲೇ ನರೇಂದ್ರ ಮೋದಿ ತಾವು ಪ್ರಧಾನ ಮಂತ್ರಿಯಲ್ಲ, ಈ ದೇಶದ ಪ್ರಜೆಗಳ ಪ್ರಧಾನ ಸೇವಕ ಎಂದು ಸ್ಪಷ್ಟವಾಗಿ ಹೇಳಿದ್ದರು, ಮಾತ್ರವಲ್ಲದೆ ನುಡಿದಂತೆಯೇ ನಡೆಯುತ್ತಿದ್ದಾರೆ.

ಇಂದು ಮಾಧ್ಯಮಗಳ ಸಂವಾದಗಳಲ್ಲಿ ಬೊಬ್ಬಿರಿಯುವ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಪಂಚದಲ್ಲಿ ಜರುಗುತ್ತಿರುವ ಎಲ್ಲಾ ವಿದ್ಯಮಾನಗಳಿಗೆ ಪ್ರಧಾನಿಗಳ ಸರ್ವಾಧಿಕಾರ ಧೋರಣೆಯೇ ಕಾರಣ ಎಂದು ಬರೆಯುವ ಬಹಳಷ್ಟುಯುವ ಜನತೆಗೆ ಸರ್ವಾಧಿಕಾರದ ಪರಿಣಾಮದ ಅರಿವಿಲ್ಲ. ನಮ್ಮದೇ ದೇಶವು ಸರ್ವಾಧಿಕಾರಿಯ ಆಡಳಿತದಲ್ಲಿ ಅನುಭವಿಸಿರುವ ತುರ್ತು ಪರಿಸ್ಥಿತಿಯ ಇತಿಹಾಸವನ್ನು ಯುವ ಜನಾಂಗ ತಿಳಿದಿಲ್ಲ. ಸಂವಿಧಾನಬದ್ಧವಾಗಿ ಭಾರತೀಯರಿಗೆ ನೀಡಲಾಗಿದ್ದ ಸ್ವಾತಂತ್ರ್ಯವನ್ನು ಕಸಿದುಕೊಂಡು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯ ಕರಾಳ ದಿನಗಳವು. ಇಂದಿರಾ ಪ್ರಧಾನಿಯಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಾಗ ಸರ್ಕಾರೇತರ ಮಾಧ್ಯಮಗಳ ಮೇಲೆ ನಿಷೇಧ ಹೇರಲಾಗಿತ್ತು.

ಸರ್ಕಾರದ ವಿರುದ್ಧ ಬರೆದ ಪತ್ರಕರ್ತರನ್ನೆಲ್ಲ ಬಂಧಿಸಿ ಜೈಲಿಗಟ್ಟಲಾಗಿತ್ತು. ವಿರೋಧ ಪಕ್ಷದ ಅಷ್ಟೂನಾಯಕರನ್ನು ಹುಡುಕಿ ಬಂಧಿಸಲಾಗಿತ್ತು. ಈ ಸಂವಿಧಾನದ ಪರಿಚ್ಛೇದ 352ರ ಅನುಸಾರ ತಮಗೆ ವಿಶೇಷಾಧಿಕಾರ ದಕ್ಕಿಸಿಕೊಂಡ ಇಂದಿರಾ ಪೌರಹಕ್ಕುಗಳನ್ನು ಕಸಿದುಕೊಂಡು ತಮ್ಮ ವಿರೋಧಿ ಪಾಳಯದ ನಾಯಕರ ಧ್ವನಿ ಅಡಗಿಸಲು ಇನ್ನಿಲ್ಲದ ಶ್ರಮ ಹಾಕಿದರು. ಮಾಧ್ಯಮದ ಧ್ವನಿಯನ್ನು ಅಡಗಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಅನೇಕ ಸಂಘಟನೆಗಳಿಗೆ ನಿಷೇಧ ಹೇರಲಾಗಿತ್ತು.

2002 ಗುಜರಾತ್ ಹಿಂಸಾಚಾರದ ವೇಳೆ ನಡೆದಿದ್ದೇನು.? ಸಂದರ್ಶನದಲ್ಲಿ ಮೌನ ಮುರಿದ ಗೃಹ ಸಚಿವ ಅಮಿತ್ ಶಾ!

ನಮಗೆ ಇತಿಹಾಸದ ಅರಿವಿರಬೇಕು

ಇತಿಹಾಸದ ಅರಿವು ಪ್ರತಿಯೊಬ್ಬ ಯುವಕನೂ ಹೊಂದಿರಬೇಕಾದದ್ದು ಅತ್ಯವಶ್ಯಕ. ಯಾವುದು ತಪ್ಪು, ಯಾವುದು ಸರಿ ಎಂದು ನಿರ್ಧರಿಸಬೇಕಾದರೆ ಇತಿಹಾಸ ಅರಿಯಬೇಕು. ಪ್ರಜಾಪ್ರಭುತ್ವದ ಸಾರ್ವಭೌಮತೆಯ ರಕ್ಷಣೆಗಾಗಿ ಯಾವ ನಾಯಕರು ಎಷ್ಟೆಲ್ಲ ತ್ಯಾಗ ಮಾಡಿದ್ದಾರೆ ಎಂಬ ಅರಿವು ಬಹಳ ಅವಶ್ಯಕ. ಅಷ್ಟುಮಾತ್ರವಲ್ಲದೆ ನಿಜವಾದ ಸರ್ವಾಧಿಕಾರಿ ವ್ಯಕ್ತಿತ್ವ ಯಾವ ರೀತಿ ಇರುತ್ತದೆ ಮತ್ತು ಸರ್ವಾಧಿಕಾರದ ಪರಿಣಾಮಗಳು ಏನು ಎಂಬುದನ್ನು ತುಲನೆ ಮಾಡಿ ನೋಡಿದರೆ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ.

1975, ಜೂನ್‌ 25ರ ಮಧ್ಯರಾತ್ರಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಲಾಗಿದ್ದರೂ, ಪ್ರಜೆಗಳು ತಮ್ಮ ಮೇಲಿನ ತುರ್ತು ಪರಿಸ್ಥಿತಿಯ ಕುರಿತು ಅರಿತದ್ದು ಜೂ.27ರಂದು. ಜೂ.26ರಂದು ಬಹಳಷ್ಟುಪತ್ರಿಕೆಗಳು ಪ್ರಜೆಗಳ ಕೈಸೇರಲಿಲ್ಲ- ಕಾರಣ ಆ ಹಿಂದಿನ ರಾತ್ರಿಯೇ ಪತ್ರಿಕೆಗಳ ಕಚೇರಿಗಳಿಗೆ ವಿದ್ಯುತ್‌ ಸರಬರಾಜು ಕಡಿತಗೊಳಿಸಲಾಗಿತ್ತು.

ಆಳುವವ ಸರ್ವಾಧಿಕಾರಿಯಾದರೆ...

ಇಂದು ಸಂವಿಧಾನದಲ್ಲಿ ತಿದ್ದುಪಡಿಯ ಅವಶ್ಯಕತೆ ಇದೆ ಎಂದ ಮಾತ್ರಕ್ಕೆ ಅದು ಸರ್ವಾಧಿಕಾರಿ ಧೋರಣೆ ಎಂದು ಬಿಂಬಿಸಲ್ಪಡುತ್ತದೆ. ಆದರೆ ಇಂದಿರಾ ತಮಗೆ ನ್ಯಾಯಾಂಗದ ಸಂರಕ್ಷಣೆ ಕಲ್ಪಿಸಿಕೊಳ್ಳುವುದರ ಜತೆಗೆ ನಾಗರಿಕರು ಯಾವುದೇ ಕೋರ್ಟುಗಳಲ್ಲಿ ಸರ್ಕಾರವನ್ನು ಪ್ರಶ್ನಿಸುವಂತಿಲ್ಲ ಎಂದೂ ಸಂವಿಧಾನಕ್ಕೆ ತಿದ್ದುಪಡಿ ತಂದುಕೊಂಡರು ಎಂಬುದರ ಬಗ್ಗೆ ಜಾಣ ಮರೆವು ತೋರುತ್ತಾರೆ.

ಅಂದು ಮೀಸಾ ಕಾಯಿದೆ (ಮೆಂಟೆನೆನ್ಸ್‌ ಆಫ್‌ ಇಂಟರ್ನಲ್‌ ಸೆಕ್ಯುರಿಟಿ ಆಕ್ಟ್) ಯಥೇಚ್ಛವಾಗಿ ದುರ್ಬಳಕೆ ಮಾಡಲಾಗಿತ್ತು. ಇಷ್ಟೆಲ್ಲ ಅನಾಹುತಕ್ಕೆ ಕಾರಣವಾದದ್ದು ಅಂದಿನ ಪ್ರಧಾನಿಯ ಆಯ್ಕೆಯನ್ನು ರದ್ದುಗೊಳಿಸಿ, ಆಕೆ ಆರು ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಹುದ್ದೆ ವಹಿಸಿಕೊಳ್ಳುವಂತಿಲ್ಲ ಎಂದು ಅಲಹಾಬಾದ್‌ ಹೈಕೋರ್ಚ್‌ ನೀಡಿದ ತೀರ್ಪು.

ಸ್ವತಂತ್ರ ಭಾರತದ ಇತಿಹಾಸ ಕಂಡ ಅತ್ಯಂತ ಕರಾಳ ಘಟನೆಯೆಂದರೆ ತುರ್ತು ಪರಿಸ್ಥಿತಿ. ನಮ್ಮನ್ನು ಆಳುವವರು ಸರ್ವಾಧಿಕಾರಿ ಧೋರಣೆ ಹೊಂದಿದರೆ ಏನಾಗುತ್ತದೆ ಎಂಬುದಕ್ಕೆ ಅದೊಂದು ಉದಾಹರಣೆಯೂ ಹೌದು. ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯು ಸ್ವತಂತ್ರವಾಗಿ ಬದುಕುವ ಭಾರತೀಯರ ಹಕ್ಕನ್ನೇ ಕಸಿದುಕೊಂಡಿತು.

ರಾತೋರಾತ್ರಿ ಕಸಿದುಕೊಳ್ಳಲಾದ ಪತ್ರಿಕಾ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳ ಸ್ವಾತಂತ್ರ್ಯ, ಸಂಘಟನೆಯ ಸ್ವಾತಂತ್ರ್ಯ ಭಾರತೀಯರ ಆತ್ಮಾಭಿಮಾನಕ್ಕೆ ದೊಡ್ಡ ಮಟ್ಟದ ಘಾಸಿಯನ್ನುಂಟು ಮಾಡಿತ್ತು. ಚಲನಶೀಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರ್ವಾಧಿಕಾರದ ವ್ಯಾಪ್ತಿಗೆ ತಂದು ಭಾರತದ ಭವಿಷ್ಯವನ್ನೇ ಕರಾಳತೆಗೆ ದೂಡುವ ಪ್ರಯತ್ನ ಮಾಡಿದ್ದ ಇಂದಿರಾ ವಿರುದ್ಧ ಸಿಡಿಲ ಮರಿಗಳಂತೆ ಸಿಡಿದೆದ್ದು ಹೋರಾಡಿದ ಪ್ರತಿಯೊಬ್ಬ ಭಾರತೀಯನೂ ಇಂದಿನ ಪೀಳಿಗೆಗೆ ಆದರ್ಶವಾಗಿದ್ದಾನೆ.

ಗೋಧ್ರಾ ಪ್ರಕರಣ, ಮೋದಿಗೆ ಬಿಗ್ ರಿಲೀಫ್, ನಿರ್ದೋಷಿ ಎಂದು ತೀರ್ಪಿತ್ತ ಸುಪ್ರೀಂ!

ಆಳುವವನು ಸರ್ವಾಧಿಕಾರಿ ಮನಸ್ಥಿತಿ ಹೊಂದಿದರೆ ಏನಾಗುತ್ತದೆ ಎಂಬುದಕ್ಕೆ ಇಂದಿರಾ ಗಾಂಧಿಯೇ ಸ್ಪಷ್ಟಉದಾಹರಣೆ. ಭಾರತೀಯ ಹಿತಾಸಕ್ತಿಗಿಂತ ತಮ್ಮ ಸ್ವಾರ್ಥಕ್ಕೆ ಆಕೆ ಹೆಚ್ಚು ಬೆಲೆ ನೀಡಿದರು. ಇಡೀ ಭಾರತವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ತಮಗೆ ಬೇಕಾದಂತೆ ಆಡಳಿತ ನಡೆಸಲು ಮುಂದಾಗಿದ್ದ ಅವರಿಗೆ ಭಾರತವನ್ನು ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಇತ್ತು ಎಂಬುದರಲ್ಲಿ ಸಂದೇಹವಿಲ್ಲ. ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ಪುತ್ರಿಗೆ ಜನ್ಮದತ್ತವಾಗಿಯೇ ಇಂತಹದೊಂದು ಮಹತ್ವಾಕಾಂಕ್ಷೆ ಬಂದಿದ್ದಿರಬಹುದು. ಆದರೆ, ಭಾರತೀಯನ ಆತ್ಮಾಭಿಮಾನದ ಎದುರು ಆ ಮಹತ್ವಾಕಾಂಕ್ಷೆ ಮಣ್ಣು ಮುಕ್ಕಿದೆ. ಕುಟುಂಬ ರಾಜಕಾರಣದ ಸಂಕೋಲೆಯಿಂದ ಭಾರತೀಯ ತನ್ನನ್ನು ತಾನು ಬಿಡಿಸಿಕೊಂಡಿದ್ದಾನೆ.

ಆಳುವವ ಪ್ರಜಾಪ್ರಭುತ್ವವಾದಿಯಾದರೆ...

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಸಿರಾಗಿಸಿಕೊಳ್ಳುವ ಆಡಳಿತಗಾರ ಎಷ್ಟುಪರಿಣಾಮಕಾರಿಯಾಗಿ ಆಡಳಿತ ನಡೆಸಬಲ್ಲ ಎಂಬುದಕ್ಕೆ ಇಂದಿನ ಪ್ರಧಾನಿ ಮೋದಿಯವರೇ ಉದಾಹರಣೆ. ಆಡಳಿತದ ನಿರ್ಧಾರಗಳಲ್ಲಿ ಜನರ ಸಲಹೆ ಸೂಚನೆಗಳು ಎಷ್ಟುಪರಿಣಾಮಕಾರಿ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಪ್ರಧಾನಿಯಾದ ಬಳಿಕ 2014ರ ಅಕ್ಟೋಬರ್‌ನಿಂದ ಅವರು ಆರಂಭಿಸಿದ ‘ಮನ್‌ ಕೀ ಬಾತ್‌’ ಕಾರ್ಯಕ್ರಮ ಜನರನ್ನು ಬೆಸೆಯುವ ನಿಟ್ಟಿನಲ್ಲಿನ ಒಂದು ದೊಡ್ಡ ಕ್ರಮ. ಪ್ರತಿ ತಿಂಗಳು ಮನ್‌ ಕೀ ಬಾತ್‌ ಪ್ರಸಾರಗೊಳ್ಳುವುದಕ್ಕೂ ಮುನ್ನ ಅವರು ಜನರಿಂದ ಸಲಹೆ ಪಡೆಯುತ್ತಾರೆ.

ಈ ಸಲಹೆಗಳು ಅವರ ಮಾತುಗಳಲ್ಲಿ ಪ್ರತಿಫಲನಗೊಳ್ಳುತ್ತವೆ. ಅವರು ನಡೆಸಿದಷ್ಟುಸಂವಾದ ಕಾರ್ಯಕ್ರಮಗಳನ್ನು ಬೇರೊಬ್ಬ ಜನನಾಯಕ ನಡೆಸಿರಲು ಸಾಧ್ಯವೇ ಇಲ್ಲ. ಅದು ಪರೀಕ್ಷಾ ಪೆ ಚರ್ಚಾ ಇರಬಹುದು, ಶಿಕ್ಷಕರ ದಿನದಂದು ಅವರು ನಡೆಸುವ ಸಂವಾದ ಆಗಿರಬಹುದು, ತಂತ್ರಜ್ಞರೊಂದಿಗಿನ ಸಂವಾದವಿರಬಹುದು, ಐಎಎಸ್‌ ಅಧಿಕಾರಿಗಳೊಂದಿಗಿನ ಸಂವಾದವಿರಬಹುದು, ಮನ್‌ ಕೀ ಬಾತ್‌ ಆಗಿರಬಹುದು ಅಥವಾ ಯೋಜನೆಗಳ ಫಲಾನುಭವಿಗಳೊಂದಿಗೆ ಅವರು ನಡೆಸುವ ಸಂವಾದವೇ ಆಗಿರಬಹುದು ಇವೆಲ್ಲವೂ ಪ್ರಜಾಪ್ರಭುತ್ವದ ಆಶಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿನ ದೊಡ್ಡ ಹೆಜ್ಜೆಗಳಾಗಿವೆ.

ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ನಿಂತು ಅವರು ಮಾಡುವ ಭಾಷಣದಲ್ಲೂ ಜನಸಾಮಾನ್ಯರ ಚಿಂತನೆಗಳು ಪ್ರತಿಫಲನಗೊಳ್ಳುತ್ತವೆ. ಭಾಷಣಕ್ಕೂ ಹಲವು ದಿನಗಳ ಮುಂಚಿತವಾಗಿ ಅವರು ಭಾಷಣಕ್ಕೆ ಸಲಹೆಗಳನ್ನು ನೀಡುವಂತೆ ಜನರಿಗೆ ಮನವಿ ಮಾಡುತ್ತಾರೆ. ಅದರ ಆಧಾರದ ಮೇಲೆಯೇ ಅವರು ಭಾಷಣದಲ್ಲಿ ವಿಷಯಗಳಿಗೆ ಒತ್ತು ನೀಡುತ್ತಾರೆ. ಅವರ ಹಲವು ನಿರ್ಧಾರ, ಯೋಜನೆಗಳ ಹಿಂದೆಯೂ ಜನಸಾಮಾನ್ಯರ ಕಾಳಜಿಗಳು ಅಭಿವ್ಯಕ್ತಗೊಂಡಿದೆ ಎಂದರೆ ಅದಕ್ಕೆ ಅವರು ಜನಸಾಮಾನ್ಯರೊಂದಿಗೆ ಸಾಧಿಸಿರುವ ಬೆಸುಗೆಯೇ ಕಾರಣ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆಡಳಿತಗಾರ ಪ್ರಜೆಗಳಿಂದಲೇ ಆಯ್ಕೆಯಾಗಿರುತ್ತಾನೆ. ಆಡಳಿತದಲ್ಲೂ ಪ್ರಜೆಗಳ ಹಿತಾಸಕ್ತಿ ಸರ್ವೋಚ್ಚವಾಗಿರುತ್ತದೆ. ಸರ್ಕಾರದ ಪ್ರತಿ ನಡೆ, ನಿರ್ಧಾರ, ನೀತಿಗಳಲ್ಲಿ ಪ್ರಜೆಗಳನ್ನು ಒಳಪಡಿಸಿಕೊಂಡು ಮುನ್ನಡೆಯುವವನು ಮಾತ್ರ ಉತ್ತಮ ಆಡಳಿತಗಾರನಾಗುತ್ತಾನೆ. ತನ್ನನ್ನು ತಾನು ‘ಪ್ರಧಾನ ಸೇವಕ’ ಎಂದು ಕರೆದುಕೊಳ್ಳುವ ಮೋದಿ, ತಮ್ಮ ಕಾರ್ಯದ ಮೂಲಕವು ತಾವೊಬ್ಬ ಪ್ರಧಾನ ಸೇವಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ನೆಹರು, ಇಂದಿರಾ ಗಾಂಧಿ ಆರ್‌ಎಸ್‌ಎಸ್ ನಾಶಪಡಿಸಲು ಪ್ರಯತ್ನಿಸಿದ್ರೂ ಏನೂ ಆಗಿಲ್ಲ: ಕಟೀಲ್

ಕೊರೋನಾ ವೈರಸ್‌ ದೇಶಕ್ಕೆ ಕಾಲಿಟ್ಟಕೂಡಲೇ ಮೋದಿ ‘ಜನತಾ ಕಫä್ರ್ಯ’ ಘೋಷಣೆ ಮಾಡಿದ್ದರು. ಜನರಿಂದಲೇ ನಡೆಸಲ್ಪಟ್ಟಕಫä್ರ್ಯ ಇದಾಗಿತ್ತು. ಇಂತಹದೊಂದು ಅದ್ಭುತ ಪರಿಕಲ್ಪನೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ತಲೆಬಾಗಿದ ಪ್ರಧಾನಿಗೆ ಮಾತ್ರ ಮೂಡಿಬರಲು ಸಾಧ್ಯ. ಮೋದಿಗೆ ಭಾರತೀಯರ ನಾಡಿಮಿಡಿತದ ಅರಿವಿದೆ. ಅವರು ನೀಡುವ ಕರೆಯನ್ನು ಜನಸಾಮಾನ್ಯರು ಪ್ರೀತಿಯಿಂದ ಆಚರಣೆಗೆ ತರುತ್ತಾರೆ. ಜನತಾ ಕಫä್ರ್ಯ, ಕೊರೋನಾ ಯೋಧರಿಗೆ ಗೌರವ ಸಲ್ಲಿಸಲು ನೀಡಿದ ಕರೆ ಇದಕ್ಕೆಲ್ಲಾ ಜನರು ಸ್ಪಂದಿಸಿದ ರೀತಿ ಒಬ್ಬ ಪ್ರಧಾನಿ ಮತ್ತು ನಾಗರಿಕರ ನಡುವಿನ ಬಾಂಧವ್ಯವನ್ನು ಸೂಚಿಸುತ್ತದೆ.

ಮಕ್ಕಳ ಮಾತೂ ಆಲಿಸುವ ಪ್ರಧಾನಿ

ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆಯಿಂದ ದೇಶದಲ್ಲಿ ಸೃಷ್ಟಿಯಾದ ಅಸ್ಥಿರತೆ, ಅರಾಜಕತೆಯನ್ನು ಈ ದೇಶ ನೋಡಿದೆ ಮತ್ತು ಅದನ್ನು ಹಿಮ್ಮೆಟ್ಟಿನಿಂತಿದೆ. ಈಗ ದೇಶದಲ್ಲಿ ಜನಸೇವಕ ಪ್ರಧಾನಿ ಇದ್ದಾರೆ. ಜನಸಾಮಾನ್ಯರ ಸಲಹೆ ಸೂಚನೆಗಳನ್ನು ಆಲಿಸುವ, ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ, ಹಿರಿಯರ ಅನುಭವಗಳನ್ನು ಕೇಳಿ ತಿಳಿದುಕೊಳ್ಳುವ, ಪುಟಾಣಿ ಮಕ್ಕಳ ಅನಿಸಿಕೆಗಳನ್ನೂ ಗೌರವಿಸುವ ಪ್ರಧಾನಿ ಇದ್ದಾರೆ. ಹೀಗಾಗಿಯೇ ವಿಶ್ವ ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ಭಾರತ ಈಗ ವಿಶ್ವಮನ್ನಣೆ ಗಳಿಸುತ್ತಿದೆ. ಎಂತಹ ಸವಾಲುಗಳನ್ನೂ ಎದೆಗೊಟ್ಟು ಎದುರಿಸಬಲ್ಲ ಸಾಮರ್ಥ್ಯ ಇಂದು ಭಾರತಕ್ಕೆ ಬಂದಿದೆ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ಈಗ ತನ್ನ ಮೌಲ್ಯಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠವಾಗುತ್ತಿದೆ.

ಆದರೆ ಕುಟುಂಬ ರಾಜಕಾರಣವನ್ನೇ ನಂಬಿರುವ ಪಕ್ಷವೊಂದರ ಮುಖ್ಯಸ್ಥರು ತಮ್ಮ ಹಿರಿಯರು ಹಾಕಿರುವ ಅದೇ ಹಾದಿಯಲ್ಲಿ ಸಾಗುತ್ತಿರುವುದು ಇತ್ತೀಚಿನ ಇ.ಡಿ. ನೋಟೀಸ್‌ ಘಟನೆಯಿಂದ ಸಾಬೀತಾಗಿದೆ. ತಾವು ಪ್ರಶ್ನಾತೀತರು ಎಂಬ ಭಾವನೆ ಗಾಂಧಿ ಕುಟುಂಬದಲ್ಲಿ ಇಂದಿಗೂ ದಟ್ಟವಾಗಿದೆ. ಅಂದು ಜಸ್ಟೀಸ್‌ ಖನ್ನಾ ಅವರು ಇಂದಿರಾರನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ಅಧಿಕಾರಸ್ಥ ರಾಜಕಾರಣಿಗಳ ಅನುಕೂಲಕ್ಕೆ ತಕ್ಕಂತೆ ಕೇವಲ ಸಂಸತ್ತಿನ ಅನುಮೋದನೆ ಪಡೆದು ಕರಾಳ ಶಾಸನಗಳನ್ನು ರೂಪಿಸುವಂತಿಲ್ಲ ಅಥವಾ ತಿದ್ದುಪಡಿ ತರುವಂತಿಲ್ಲ’ ಎಂದು ಆದೇಶ ನೀಡಿದ್ದರು. ಮುಂದೆ ಅವರು ಇಂದಿರಾ ವಿರುದ್ಧ ಸೊಲ್ಲೆತ್ತಿದ್ದಕ್ಕೆ ಭಾರಿ ದಂಡ ತೆರಬೇಕಾಯಿತು.

ಮೋದಿ ಮೈತ್ರಿ ಮುರಿದ ಉದ್ದವ್ ಠಾಕ್ರೆಗೆ ಇದೆಂಥಾ ದುಸ್ಥಿತಿ?

ಸುಪ್ರೀಂಕೋರ್ಟಿನ ಮುಂದಿನ ಮುಖ್ಯ ನ್ಯಾಯಮೂರ್ತಿ ಅವರೇ ಆಗಬೇಕಿತ್ತು, ಆದರೆ ಇಂದಿರಾ ಜಸ್ಟೀಸ್‌ ಖನ್ನಾರ ಅವಕಾಶ ಕಸಿದುಕೊಂಡರು. ಇಂದು ಅದೇ ಕುಟುಂಬವು ವಿರೋಧ ಪಕ್ಷದಲ್ಲಿದ್ದಾಗಲೂ ಇ.ಡಿ. ನೋಟೀಸ್‌ನ ವಿರುದ್ಧ ಪ್ರತಿಭಟನೆ ನಡೆಸುತ್ತದೆ. ಮುಂದೆ ಅದೇ ಪಕ್ಷವು ಆಡಳಿತಕ್ಕೆ ಬಂದರೆ ಏನಾಗಬಹುದು ಎಂಬುದು ನಿಜಕ್ಕೂ ಗಂಭೀರವಾಗಿ ಯೋಚಿಸಬೇಕಾದ ವಿಚಾರ. ಇಂದು ಪ್ರಜಾಪ್ರಭುತ್ವವು ಅತ್ಯಂತ ಚೆನ್ನಾಗಿ ಉಸಿರಾಡುತ್ತಿದೆ. ಮೋದಿ ಸರ್ಕಾರ ‘ಎಲ್ಲರ ಜೊತೆಯಾಗಿ, ಎಲ್ಲರ ವಿಕಾಸ’ ಎಂಬ ತತ್ವದೊಂದಿಗೆ ಆಡಳಿತ ನಡೆಸುತ್ತಿದ್ದು, ಸಾಮಾಜಿಕ ನ್ಯಾಯದ ತತ್ವದೊಂದಿಗೆ ಒಡಿಶಾದ ಬುಡಕಟ್ಟು ಹೆಣ್ಣುಮಗಳಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿರುವುದು ಪ್ರಜಾಪ್ರಭುತ್ವದ ಸುಂದರ ಮತ್ತು ಮಾದರಿ ಉದಾಹರಣೆಯಾಗಿದೆ.

- ನಳಿನ್‌ ಕುಮಾರ್‌ ಕಟೀಲ್‌, ರಾಜ್ಯಾಧ್ಯಕ್ಷ, ಬಿಜೆಪಿ

Follow Us:
Download App:
  • android
  • ios