* ಗುಜರಾತ್‌ನ ಗೋಧ್ರಾ ನರಮೇಧ ಬಳಿಕದ ಹಿಂಸಾಚಾರ* ಮೋದಿಗೆ ಬಿಗ್ ರಿಲೀಫ್, ನಿರ್ದೋ‍ಷಿ ಎಂದು ತೀರ್ಪಿತ್ತ ಸುಪ್ರೀಂ* ಎಸ್‌ಐಟಿ ನಿಡಿದ್ದ ಕ್ಲೀನ್‌ಚಿಟ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ

ಅಹಮದಾಬಾದ್(ಜೂ.24): ಗುಜರಾತ್‌ನ ಗೋಧ್ರಾ ನರಮೇಧ ಬಳಿಕದ ಹಿಂಸಾಚಾರ ಪ್ರಕರಣದಲ್ಲಿ ನರೇಂದ್ರ ಮೋದಿಗೆ ಎಸ್‌ಐಟಿ ಕ್ಲೀನ್‌ ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಈ ಹಿಂದೆ ಗೋಧ್ರಾ ನರಮೇಧ ನಂತರ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸಿದ್ದ ಎಸ್‌ಐಟಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಲೀನ್‌ ಚಿಟ್‌ ನೀಡಿತ್ತು. ಕ್ಲೀನ್‌ ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಹಿಂಸಾಚಾರದ ವೇಳೆ ಹತ್ಯೆಗೀಡಾದ ಸಂಸದ ಇಸಾನ್‌ ಜಫ್ರಿ ಅವರ ಪತ್ನಿ ಜಾಕಿಯಾ ಜಫ್ರಿ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್‌, ದಿನೇಶ್‌ ಮಹೇಶ್ವರಿ, ಸಿಟಿ ರವಿಕುಮಾರ್‌ ಅವರಿದ್ಧ ಪೀಠ ಇಂದು ತೀರ್ಪು ಪ್ರಕಟಿಸಿದೆ. ಗುಜರಾತ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ಪರವಾಗಿ ಹಿರಿಯ ವಕಿಲ ಕಪಿಲ್‌ ಸಿಬಲ್‌ ವಾದ ಮಂಡಿಸಿದ್ದರು. ಹಿರಿಯ ವಕೀಲ ಮುಕುಲ್‌ ರೋಹ್ಟಗಿ ಎಸ್‌ಐಟಿ ಪರ ವಾದಿಸಿದ್ದರೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಗುಜರಾತ್‌ ಸರ್ಕಾರದ ಪರವಾಗಿ ವಾದಿಸಿದ್ದರು.

ಏನಿದು ಪ್ರಕರಣ?

2002ರ ಫೆಬ್ರವರಿ 22 ರಂದು ಗೋದ್ರಾದಲ್ಲಿ ಸಬರಮತಿ ಎಕ್ಸ್ ಪ್ರೆಸ್‌ ರೈಲಿನ ಎಸ್6 ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಪರಿಣಾಮ ಆಯೋಧ್ಯೆಯಿಂದ ಗುಜರಾತ್ ಗೆ ಮರಳುತ್ತಿದ್ದ 59 ಕರಸೇವಕರು ಸಜೀವವಾಗಿ ದಹನವಾಗಿದ್ದರು. ಈ ಘಟನೆ ಬಳಿಕ ಗುಜರಾತಿನಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು. ಅನೇಕ ಕಡೆಗಳಲ್ಲಿ ಕೋಮುಗಲಭೆ ಸಂಭವಿಸಿ 1,200 ಕ್ಕೂ ಹೆಚ್ಚು ಮಂದಿಯ ಹತ್ಯೆಯಾಗಿತ್ತು. ವಿಶೇಷವಾಗಿ ಗುಲ್ಬರ್ಗಾ ಸೊಸೈಟಿಯಲ್ಲಿ ನರಮೇಧವೇ ನಡೆದು ಹೋಗಿತ್ತು. ಇದರಲ್ಲಿ ಇಸಾನ್‌ ಜಫ್ರಿ ಸೇರಿ 68 ಮಂದಿ ಹತರಾಗಿದ್ದರು. 2002 ಫೆಬ್ರವರಿ 27ರಿಂದ ಮೇ ತಿಂಗಳವರೆಗೆ ವ್ಯಾಪಕ ಹಿಂಸಾಚಾರ ನಡೆದಿದ್ದು, ಇದರ ಹಿಂದೆ ಬಹುದೊಡ್ಡ ಪಿತೂರಿ ಅಡಗಿದೆ. ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.