*   ರಾಜಕಾರಣಕ್ಕೆ ಆರ್‌ಎಸ್‌ಎಸ್‌ ಎಳೆಯುವುದು ಸರಿಯಲ್ಲ*   ದಿನಕ್ಕೊಂದು ಹೇಳಿಕೆ ಕೊಟ್ಟು ಅರಾಜಕತೆ ಸೃಷ್ಟಿಮಾಡಲು ಪ್ರಯತ್ನ *  ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ 

ಬೆಳಗಾವಿ(ಜೂ.08):  ನೆಹರು, ಇಂದಿರಾ ಗಾಂಧಿ ಕೂಡ ಆರ್‌ಎಸ್‌ಎಸ್‌ ನಾಶಪಡಿಸಲು ಪ್ರಯತ್ನಿಸಿದರೂ ಏನು ಆಗಲಿಲ್ಲ. ಈಗ ಸಿದ್ದರಾಮಯ್ಯನೂ ಕೈ ಸುಟ್ಟುಕೊಳ್ಳುತ್ತಾರೆ. ಕಾಂಗ್ರೆಸ್‌ ಪಕ್ಷವೂ ಸುಟ್ಟು ಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಟೀಕಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ರಾಷ್ಟ್ರಭಕ್ತರನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿದೆ. ಸಂಘದ ಕಾರ್ಯಕರ್ತರು ಕೇವಲ ಬಿಜೆಪಿಯಲ್ಲಿ ಅಷ್ಟೇ ಅಲ್ಲ. ಕಾಂಗ್ರೆಸ್‌ನಲ್ಲಿ ಉಗ್ರಪ್ಪ, ಜೆಡಿಎಸ್‌ನಲ್ಲಿ ಪಿಜಿಆರ್‌ ಸಿಂಧ್ಯಾ ಅವರಿಗೂ ಸಂಘದ ಹಿನ್ನೆಲೆಯಿದೆ. ವ್ಯಕ್ತಿಗಳ ನಿರ್ಮಾಣ ಮಾಡಿ ರಾಷ್ಟ್ರಕಾರ್ಯ ಮಾಡಿ ಎಂದು ಹೇಳುತ್ತದೆ. ಇಂತಹ ಸಂಘಟನೆಯನ್ನು ರಾಜಕಾರಣಕ್ಕೆ ಎಳೆಯುವಂತಹದ್ದು ಶೋಭೆ ತರುವ ವಿಚಾರವಲ್ಲ ಎಂದರು.

KARNATAKA POLITICS: ಕಟೀಲ್‌ ಬಿಜೆಪಿ ರಾಜ್ಯಾಧ್ಯಕ್ಷ ಆಗಲು ನಾಲಾಯಕ್‌: ಸಿದ್ದರಾಮಯ್ಯ

ಪಕ್ಷದಲ್ಲಿ ಹಿಡಿತ ಸಾಧಿಸಲು ಹುಚ್ಚು ಸಿದ್ರಾಮಣ್ಣ ನಿತ್ಯ ಪ್ರಚಾರದಲ್ಲಿರಬೇಕೆಂದು ಆರ್‌ಎಸ್‌ಎಸ್‌ ಬಗ್ಗೆ ಟೀಕಿಸುತ್ತಿದ್ದಾರೆ. ಅಲ್ಪಸಂಖ್ಯಾತರ ತುಷ್ಪೀಕರಣ ನೀತಿ ಮಾಡಲು ಕಾಂಗ್ರೆಸ್‌, ಜೆಡಿಎಸ್‌ ಪೈಪೋಟಿ ನಡೆಸುತ್ತಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯನಿಂದ ಕೈಗೆ ಮುಜುಗರ:

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದೆ. ಕೇಂದ್ರದ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟವಾಗಿ ಹೊರಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಚಿಂತನಾ ಶಿಬಿರ ಪ್ರಾರಂಭವಾದ ಬಳಿಕ 60 ಜನ ಕಾಂಗ್ರೆಸ್‌ ಬಿಟ್ಟಿದ್ದಾರೆ. ರಾಜ್ಯದಲ್ಲಿ ಇದೇ ರೀತಿಯ ಪರಿಣಾಮ ಆಗುತ್ತಿದೆ. ಸಿದ್ದರಾಮಯ್ಯ, ಡಿಕೆಶಿ ನಡುವಿನ ಒಳಜಗಳ ಆತ್ಮವಿಶ್ವಾಸ ಕುಗ್ಗಿಸಿದೆ. ಮುಖ್ಯಮಂತ್ರಿ ಚಂದ್ರು, ಬ್ರಿಜೆಶ್‌ ಕಾಳಪ್ಪ, ಸುದರ್ಶನ ಕಾಂಗ್ರೆಸ್‌ ಬಿಡಲು ತಯಾರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ತಮ್ಮ ಹಿಡಿತ ಹೆಚ್ಚು ಮಾಡಲು ಸಿದ್ದರಾಮಯ್ಯ ದಿನಕ್ಕೆ ಒಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ ಎಂದರು.

ಸಿಎಂ ವಿಚಾರದಲ್ಲೂ ಗೊಂದಲ:

ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಹಾಗೂ ಕೆಪಿಸಿಸಿಯ ನಡುವೆ ಹೊಂದಾಣಿಕೆ ಇಲ್ಲ. ಅಭ್ಯರ್ಥಿ ಆಯ್ಕೆ ಬಗ್ಗೆ ಹೊಂದಾಣಿಕೆಯಾಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಜೆಡಿಎಸ್‌ ಬೆಂಬಲಕ್ಕೆ ನಿಂತಿದ್ದಾರೆ. ಸಿದ್ದರಾಮಯ್ಯ ಅದಕ್ಕೆ ವಿರುದ್ಧವಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಿಎಂ ಆಗುವ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಗೊಂದಲವಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯ ನಡುವಿನ ಒಳಜಗಳ ಇತ್ಯರ್ಥಕ್ಕೆ ಚಿಂತನಾ ಶಿಬಿರ ಮಾಡಿದ್ದರು. ಚಿಂತನ ಶಿಬಿರ ವಿಚತ್ರವಾಯಿತು. ಅಂದೇ ರಾಜ್ಯಸಭೆ ಚುನಾವಣೆ ಗಲಾಟೆ ನಡೆಯಿತು. ಸರ್ಕಾರ ಮಾಡುವುದು ಬಿಡಿ ಪಕ್ಷದ ಪೂರ್ಣ ತಂಡ ರಚನೆ ಮಾಡಲು ಆಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಎರಡು ವರ್ಷದಿಂದ ಪಕ್ಷದ ಪದಾಧಿಕಾರಿಗಳ ನೇಮಕ ಮಾಡಿಲ್ಲ. ಕಾಂಗ್ರೆಸ್‌ ಗೊಂದಲ ಗೂಡಾಗಿದೆ ಎಂದು ದೂರಿದರು.
ದಿನಕ್ಕೊಂದು ಹೇಳಿಕೆ ಕೊಟ್ಟು ಅರಾಜಕತೆ ಸೃಷ್ಟಿಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಗಲಭೆ ಸೃಷ್ಟಿಯಾಗಲು ಪ್ರೇರಣೆ ಕೊಡುವ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ. ಕಾಂಗ್ರೆಸ್‌ ಪಕ್ಷವನ್ನು ಜನ ತಿರಸ್ಕಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಆತ್ಮೀಯತೆ, ವಿಶ್ವಾಸಕ್ಕೂ ಹಾಗೂ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸ ಇದೆ: ಬಿಎಸ್‌ವೈ

ಸುದ್ದಿಗೋಷ್ಠಿಯಲ್ಲಿ ಸಂಸದೆ ಮಂಗಲ ಅಂಗಡಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ ಬೆನಕೆ, ಪ್ರಭುಲಿಂಗ ಹೂಗಾರ, ಪಕ್ಷದ ವಕ್ತಾರ ಶರದ ಪಾಟೀಲ, ಡಾ.ಸೋನಾಲಿ ಸರ್ನೋಬತ್‌ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯಸಭೆಯ ಮೂರು, ರಾಜ್ಯದ ನಾಲ್ಕು ಪರಿಷತ್‌ ಚುನಾವಣೆ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಶಿಕ್ಷಕರಲ್ಲಿ ನಂಬಿಕೆ ಹುಟ್ಟಿದೆ. ಶಿಕ್ಷಣದ ಮೂಲಕ ಪರಿವರ್ತನೆ ಆಗುವ ಭರವಸೆ ಇದೆ. ಏಳನೇ ವೇತನ ಆಯೋಗದ ಅನುಷ್ಠಾನದ ಭರವಸೆ ಇದೆ. ಕಳೆದ ಸಲ ಗೆದ್ದಿರುವ ಪರಿಷತ್‌ ಸದಸ್ಯರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.