ದೆಹಲಿಯ ಲೋಧಿ ಕಾಲೋನಿಯಲ್ಲಿ ನವವಿವಾಹಿತೆ ಆಕೃತಿ ಸುತಾರ್ (Aakruti Sutar) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯಲ್ಲ, 20 ಲಕ್ಷ ವರದಕ್ಷಿಣೆಗಾಗಿ ಪತಿಯೇ ಮಾಡಿದ ಕೊಲೆ ಎಂದು ಮೃತರ ಕುಟುಂಬ ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನವದೆಹಲಿ: ದೆಹಲಿಯ ಲೋಧಿ ಕಾಲೋನಿಯ ವಸತಿ ಸಂಕೀರ್ಣವೊಂದರಲ್ಲಿ ಶನಿವಾರ ಸಂಜೆ 28 ವರ್ಷದ ಯುವತಿಯೊಬ್ಬಳು ನಿಗೂಢವಾಗಿ ಮೃತಪಟ್ಟಿದ್ದಾಳೆ. ಮೃತರನ್ನು ಆಕೃತಿ ಸುತಾರ್ ಎಂದು ಗುರುತಿಸಲಾಗಿದ್ದು ಇವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆಕೃತಿಯ ಕುಟುಂಬದವರು ಇದು ಆತ್ಮಹತ್ಯೆಯಲ್ಲ, ವರದಕ್ಷಿಣೆಗಾಗಿ ನಡೆದ ಕೊಲೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆ
ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಆಕೃತಿ, ಕಳೆದ ಏಪ್ರಿಲ್ 24 ರಂದು ಎಂಟು ವರ್ಷಗಳ ಕಾಲ ಪ್ರೀತಿಸಿದ್ದ ಅರಾಸ್ತು ಸಿಕ್ಕಾ ಎಂಬುವವರನ್ನು ಮದುವೆಯಾಗಿದ್ದರು. ಮದುವೆಯ ನಂತರ ರಜೆಯಲ್ಲಿದ್ದ ಆಕೃತಿ, ಶನಿವಾರವಷ್ಟೇ ಕೆಲಸಕ್ಕೆ ಹಾಜರಾಗಿದ್ದರು.
ಸಾವಿನ ಸುತ್ತ ಅನುಮಾನದ ಹುತ್ತ
ಆಕೃತಿಯ ಸಾವು ಆತ್ಮಹತ್ಯೆ ಎಂಬ ಸಾಧ್ಯತೆಯನ್ನು ಕುಟುಂಬದವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಅದಕ್ಕೆ ಅವರು ನೀಡಿರುವ ಕಾರಣಗಳು ಹೀಗಿವೆ. ಶನಿವಾರ ಕಚೇರಿಗೆ ಮರಳಿದ್ದ ಆಕೃತಿ, ಅಲ್ಲಿ ತನ್ನ ಸಹೋದ್ಯೋಗಿಗಳಿಗೆ ಸಣ್ಣ ಪಾರ್ಟಿ ನೀಡಿದ್ದರು. ಖುಷಿಯಾಗಿದ್ದ ಅವಳು ಖಿನ್ನತೆಗೆ ಒಳಗಾಗಿರಲು ಸಾಧ್ಯವೇ ಇಲ್ಲ ಎನ್ನುವುದು ಕುಟುಂಬದ ವಾದ.ಸಂಜೆ 6 ಗಂಟೆ ಸುಮಾರಿಗೆ ಆಕೃತಿ ತನ್ನ ತಾಯಿಯೊಂದಿಗೆ ಮಾತನಾಡಿದ್ದಳು. ಆಗಲೂ ಅವಳು ತುಂಬಾ ಸಹಜವಾಗಿಯೇ ಇದ್ದಳು ಮತ್ತು ಪಾರ್ಟಿಯ ಬಗ್ಗೆ ತಿಳಿಸಿ, ಮನೆಗೆ ಮರಳುತ್ತಿರುವುದಾಗಿ ಹೇಳಿದ್ದಳು.ರಾತ್ರಿ 8 ಗಂಟೆ ಸುಮಾರಿಗೆ ಆಕೆಯ ಪತಿ ಅರಾಸ್ತು ಕರೆ ಮಾಡಿ, ಆಕೃತಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದನು. ಆದರೆ 9:30ರ ಸುಮಾರಿಗೆ ಪೊಲೀಸರು ಕರೆ ಮಾಡಿ, ಲೋಧಿ ಕಾಲೋನಿಯ ವಸತಿ ಸಂಕೀರ್ಣದ ಬಳಿ ಮಹಿಳೆಯ ಮೃತದೇಹ ಬಿದ್ದಿರುವುದಾಗಿ ಮಾಹಿತಿ ನೀಡಿದ್ದರು.
ವರದಕ್ಷಿಣೆ ಕಿರುಕುಳದ ಆರೋಪ
ಆಕೃತಿಯ ಪತಿ ಅರಾಸ್ತು ಸಿಕ್ಕಾ ಪ್ರಸ್ತುತ ನಿರುದ್ಯೋಗಿಯಾಗಿದ್ದು, ಮದುವೆಯಾದಾಗಿನಿಂದಲೂ 20 ಲಕ್ಷ ರೂಪಾಯಿ ವರದಕ್ಷಿಣೆಗಾಗಿ ಆಕೃತಿಗೆ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಮೃತಳ ಸಹೋದರ ಅಮಯ್ ಸುತಾರ್ ಮಾತನಾಡಿ, ನನ್ನ ತಂಗಿ ಮಾನಸಿಕವಾಗಿ ತುಂಬಾ ದೃಢವಾಗಿದ್ದಳು, ಅವಳು ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಇದು ವ್ಯವಸ್ಥಿತವಾಗಿ ನಡೆದ ಕೊಲೆ ಎಂದು ದೂರಿದ್ದಾರೆ.
ಮದುವೆಗೆ ಎರಡು ದಿನಗಳ ಮೊದಲು ದಂಪತಿ ನಡುವೆ ಜೋರಾಗಿ ಜಗಳ ನಡೆದಿತ್ತು ಮತ್ತು ಅರಾಸ್ತು ಅವಳಿಗೆ ಜೀವ ಬೆದರಿಕೆ ಹಾಕಿದ್ದ ಎಂದೂ ಕುಟುಂಬದವರು ತಿಳಿಸಿದ್ದಾರೆ. ಆಕೃತಿ ವಾಸವಿದ್ದ ಮನೆಯಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಕಟ್ಟಡದಿಂದ ಬಿದ್ದು ಆಕೆ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕವಾಗಿ ಊಹಿಸಲಾಗಿದೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ವರದಕ್ಷಿಣೆ ಸಾವು ಮತ್ತು ಕೊಲೆ ಎರಡೂ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


