ಕಡು ಬಡತನದ ಕುಟುಂಬ. 7ನೇ ತರಗತಿ ಬಾಲಕಿ ಶೂ ಹರಿದಿತ್ತು. ಹೊಸ ಶೂ ಖರೀದಿಸಲು ಸ್ಕಾಲರ್‌ಶಿಪ್ ಹಣ ಡ್ರಾ ಮಾಡಲು ಅಣ್ಣನ ಜೊತೆ ಎಟಿಎಂ ಬಳಿ ತೆರಳಿದ್ದಾಳೆ. ಆದರೆ ಸ್ಕಾಲರ್‌ಶಿಪ್ ಚೆಕ್ ಮಾಡಿದಾಗ ಅಚ್ಚರಿ ಕಾದಿದೆ. ಕಾರಣ ಖಾತೆಯಲ್ಲಿದ್ದಿದ್ದು ಬರೋಬ್ಬರಿ 759 ಕೋಟಿ ರೂಪಾಯಿ.

ಕೂಚ್ ಬಿಹಾರ್ (ಜು.13) ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ಬಡ ಕುಟುಂಬ ಅದು. ತಂದೆ ಕೇರಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೆ, ತಾಯಿ ಕೂಡ ಕೂಲಿ ಕೆಲಸ ಮಾಡಿ ಇಬ್ಬರು ಮಕ್ಕಳ ಖರ್ಚು ವೆಚ್ಚ ನೋಡಿಕೊಳ್ಳುತ್ತಾರೆ. ಕಡು ಬಡತನದಲ್ಲಿದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್‌‌ಶಿಪ್ ಪ್ರಮುಖ ಆಸರೆಯಾಗಿತ್ತು. ಶಾಲೆ, ಪುಸ್ತಕ ಸೇರಿದಂತೆ ಇತರ ಖರ್ಚು ವೆಚ್ಚಗಳಿಗೆ ಇದು ಸಾಕಾಗುತ್ತಿರಲಿಲ್ಲ. ಇದರ ನಡುವೆ 7ನೇ ತರಗತಿ ಬಾಲಕಿಯ ಶೂ ಹರಿದಿತ್ತು. ಬದಲಿ ಶೂ ಖರೀದಿಗೆ ಪೋಷಕರ ಬಳಿ ಹಣ ಇರಲಿಲ್ಲ. ಹೀಗಾಗಿ ಜುಲೈ ತಿಂಗಳ 900 ರೂಪಾಯಿ ಸ್ಕಾಲರ್‌ಶಿಪ್‌ನಲ್ಲಿ ಶೂ ಖರೀದಿಗೆ ನಿರ್ಧರಿಸಿದ್ದಾರೆ. ಸ್ಕಾಲರ್‌ಶಿಪ್ ಹಣ ಜಮೆ ದಿನಾಂಕದ ಮರುದಿನ ಬಾಲಕಿ ತನ್ನ ಸಹೋದರನ ಜೊತೆ ಹೋಗಿ 900 ರೂಪಾಯಿ ಜಮೆ ಆಗಿದೆಯಾ ಅನ್ನೋದು ಪರಿಶೀಲಿಸಿದಾಗ ಅಚ್ಚರಿಯಾಗಿದೆ. ನಾಲ್ಕು ಬಾರಿ ಚೆಕ್ ಮಾಡಿದರೂ ಖಾತೆಯಲ್ಲಿ 759 ಕೋಟಿ ರೂಪಾಯಿ ಜಮೆ ಆಗಿತ್ತು. ಕೋಟಿ ಕೋಟಿ ರೂಪಾಯಿ ನೋಡಿದ ಬಾಲಕಿ ಗಾಬರಿಯಾಗಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ಯಾಂಕ್ ಬ್ಯಾಲೆನ್ಸ್ 759,69,51,951 ರೂಪಾಯಿ

ಬಾಲಕಿ ಸುಪರ್ಣ ರಾಯ್ ಹಾಗೂ ಆತನ ಸಹೋದರ ಎಟಿಎಂ ಬಳಿ ಬಂದು ಸ್ಕಾಲರ್‌ಶಿಪ್ ಹಣ ಡ್ರಾ ಮಾಡಲು ಮುಂದಾಗಿದ್ದಾರೆ. ಎಟಿಎಂ ಕಾರ್ಡ್ ಹಿಡಿದು ಬ್ಯಾಲೆನ್ಸ್ ಚೆಕ್ ಮಾಡಿದ್ದಾರೆ. 900 ರೂಪಾಯಿ ಬಂದಿಯೋ ಅಥವಾ ಇಲ್ಲವೋ ಎಂದು ಮೊದಲು ಪರಿಶೀಲಿಸಿದ್ದಾರೆ. 900 ರೂಪಾಯಿ ಬದಲು 759,69,51,951 ರೂಪಾಯಿ ತೋರಿಸಿದೆ. ಇದು ತಾಂತ್ರಿಕ ದೋಷ ಎಂದು ಮತ್ತೆ ಕಾರ್ಡ್ ಹಾಕಿ ಚೆಕ್ ಮಾಡಿದ್ದಾರೆ. ಆಗಲೂ ಅಷ್ಟೇ ಮೊತ್ತ ತೋರಿಸಿದೆ.

ಬ್ಯಾಂಕ್‌ಗೆ ಮಾಹಿತಿ ನೀಡಿದ ಬಾಲಕಿ

ಹೀಗೆ ನಾಲ್ಕು ಬಾರಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ದಾರೆ. ನಾಲ್ಕು ಬಾರಿ ಪರಿಶೀಲಿಸಿದಾಗ 759 ಕೋಟಿ ರೂಪಾಯಿ ಇರುವುದು ನಿಜವಾಗಿದೆ. ಬಾಲಕಿ ಹಾಗೂ ಆಕೆಯ ಸಹೋದರ ಗಾಬರಿಯಾಗಿದ್ದಾರೆ. 900 ರೂಪಾಯಿ ಡ್ರಾ ಮಾಡಿದ ಬಾಲಕಿ ಉಳಿದ ಹಾಗೇ ಇರಲಿ ಎಂದು ಮರಳಿದ್ದಾಳೆ. ಬಳಿಕ ನೇರವಾಗಿ ಬ್ಯಾಂಕ್‌ಗೆ ತೆರಳಿದ್ದಾರೆ. ಬ್ಯಾಂಕ್‌ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ನಲ್ಲಿ ಚೆಕ್ ಮಾಡಿದಾಗ 759 ಕೋಟಿ ರೂಪಾಯಿ ಇರುವುದು ನಿಜವಾಗಿದೆ.

ಬಾಲಕಿ ಬ್ಯಾಂಕ್‌ಗೆ ಮಾಹಿತಿ ನೀಡಿದ ಬೆನ್ನಲ್ಲೇ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇತ್ತ ಈ ಮಾಹಿತಿ ಪೊಲೀಸರಿಗೂ ಸಿಕ್ಕಿದೆ. ಪೊಲೀಸರು ಆಗಮಿಸಿ ಇದೀಗ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ಮೂಲಗಳ ಪ್ರಕಾರ ಇದು ತಾಂತ್ರಿಕ ದೋಷದಿಂದ ಆಗಿರುವ ಸಾಧ್ಯತೆ ಇದೆ. ಇನ್ನು ಇಷ್ಟು ಮೊತ್ತವನ್ನು ಹೀಗೆ ವರ್ಗಾವಣೆ ಮಾಡುವುದಿಲ್ಲ. ಹೀಗಾಗಿ ತಾಂತ್ರಿಕ ದೋಷವಾಗಿರುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ. ತನಿಖೆ ಬಳಿಕ ಖಚಿತ ಮಾಹಿತಿ ಸಿಗಲಿದೆ ಎಂದಿದ್ದಾರೆ.

ಬಾಲಕಿ ಹಾಗೂ ಪೋಷಕರಿಗೆ ಆದಾಯ ತೆರಿಗೆ ತಲೆನೋವು

759 ಕೋಟಿ ರೂಪಾಯಿ ಖಾತೆಗೆ ಜಮೆ ಆಗಿದೆ. ಕೂಲಿ ಕೆಲಸ ಮಾಡಿಕೊಂಡು ಮೂರು ಹೊತ್ತು ಊಟ ಮಾಡುತ್ತಿರುವುದೇ ದೊಡ್ಡ ವಿಷಯ. ಇದರ ನಡುವೆ ನಮ್ಮಿಂದ ಆದಾಯ ತೆರಿಗೆ ಕಸಿದುಕೊಳ್ಳಬೇಡಿ ಎಂದು ಬಾಲಕಿ ತಾಯಿ ಮನವಿ ಮಾಡಿದ್ದಾರೆ. ಖಾತೆಯಲ್ಲಿ ಕೋಟಿ ಕೋಟಿ ದುಡ್ಡ ಜಮೆ ಆಗಿದೆ. ಇದು ನಮ್ಮ ದುಡ್ಡಲ್ಲ. ಹೀಗಾಗಿ ತೆರಿಗೆ ಸಂಕಷ್ಟಕ್ಕೆ ನಮ್ಮನ್ನು ಸಿಲುಕಿಸಬೇಡಿ ಎಂದು ಬ್ಯಾಂಕ್ ಬಳಿ ಮನವಿ ಮಾಡಿದ್ದಾರೆ. ಇತ್ತ ಗ್ರಾಮಸ್ಥರು ಇದೀಗ ಈ ಬಡ ಕುಟುಂಬದ ಮನೆಯತ್ತ ತಂಡೋಪ ತಂಡವಾಗಿ ಧಾವಿಸುತ್ತಿದ್ದಾರೆ.