ಭಾರತೀಯ ಸೇನೆಯನ್ನು ಬೆಂಬಲಿಸಿ ಎಂದು ಹೇಳಿ ಸಾವಿಗೆ ಶರಣಾದ ಜಮ್ಮುಕಾಶ್ಮೀರದ ವ್ಯಕ್ತಿ
ಜಮ್ಮುಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ವಿಚಾರಣೆಗೆ ಬುಲಾವ್ ಬಂದಿದ್ದ ವ್ಯಕ್ತಿಯೊಬ್ಬ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮೊದಲು ಆತ ಮಾಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಶ್ರೀನಗರ: ಜಮ್ಮುಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ವಿಚಾರಣೆಗೆ ಬುಲಾವ್ ಬಂದಿದ್ದ ವ್ಯಕ್ತಿಯೊಬ್ಬ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮೊದಲು ಆತ ಮಾಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆತ ತಾನು ನಿರಪರಾಧಿ ಎಂದು ಹೇಳಿದ್ದಾನೆ. ಜೊತೆಗೆ ಭಯೋತ್ಪಾದಕರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಆತ ಹೇಳಿಕೊಂಡಿದ್ದಾರೆ. 50 ವರ್ಷದ ಮುಖ್ತಾರ್ ಹುಸೈನ್ ಶಾ ಎಂಬಾತನೇ ಹೀಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ,
ಜೊತೆಯಾಗಿ ಒಟ್ಟಾಗಿ ಬಂದು ಸೈನ್ಯವನ್ನು ಬೆಂಬಲಿಸಿ, ಭಾರತದ ಜೊತೆಗೆ ನಿಲ್ಲಿ ಹಾಗೂ ಈ ರಕ್ತಪಾತವನ್ನು ಕೊನೆಗೊಳಿಸಿ ಎಂದು ಆತ ಸಾವಿಗೂ ಮೊದಲು ವಿಡಿಯೋ ಸಂದೇಶ ಕಳುಹಿಸಿದ್ದಾನೆ. 10 ನಿಮಿಷಗಳಷ್ಟು ಸುಧೀರ್ಘ ವಿಡಿಯೋದಲ್ಲಿ, ' ಇನ್ನು ಮುಂದೆ ಈ ಕಿರುಕುಳವನ್ನು ಸಹಿಸಲು ಸಾಧ್ಯವಿಲ್ಲ, ತಾನು ಯಾವುದೇ ಭಯೋತ್ಪಾದಕರಿಗೆ ಎಂದಿಗೂ ಸಹಾಯ ಮಾಡಿಲ್ಲ, ಆದರೆ ಯಾರೂ ನನ್ನನ್ನು ನಂಬುತ್ತಿಲ್ಲ ಎಂದು ವೀಡಿಯೋದಲ್ಲಿ ಆತ ಹೇಳಿದ್ದಾನೆ. ವಿಷ ಸೇವಿಸುವುದಕ್ಕೂ ಮೊದಲು ಅವರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ.
ಪೂಂಚ್ ಅಟ್ಯಾಕ್ ಹೊಣೆ ಹೊತ್ತ ಜೈಷ್ ಸಹವರ್ತಿ ಸಂಘಟನೆ: ಸೈನಿಕರ ಮೇಲಿನ ದಾಳಿ ವಿಡಿಯೋ ಮಾಡಿದ್ದ ಉಗ್ರರು!
ವಿಷ ಸೇವಿಸಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾಜೌರಿಯ ಆಸ್ಪತ್ರೆಯಲ್ಲಿ ಈತ ಕೊನೆಯುಸಿರೆಳೆದಿದ್ದಾನೆ. ಈ ವಿಡಿಯೋ ಈಗ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕರು ಆತ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುವುದರ ಹಿಂದಿನ ಪ್ರೇರಕ ಶಕ್ತಿ ಏನಾಗಿತ್ತು ಎಂಬುದರ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ. ಕಳೆದ ವಾರ ಪೂಂಚ್‌ನಲ್ಲಿ ಸೇನಾ ವಾಹನದ ಮೇಲೆ ಗ್ರೇನೆಡ್ ದಾಳಿ ನಡೆದಿತ್ತು.ಈ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿ ಪೊಲೀಸರು ಮತ್ತು ಭದ್ರತಾ ಪಡೆಗಳು ಜನರಿಗೆ ಕಿರುಕುಳ ನೀಡುತ್ತಿವೆ ಮತ್ತು ಚಿತ್ರಹಿಂಸೆ ನೀಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪಾಕಿಸ್ತಾನಿ ಪ್ರಜೆಗಳು ಎಂದು ನಂಬಲಾದ ಈ ಭಯೋತ್ಪಾದಕರು ದಾಳಿಯ ನಂತರ ಕೆಳಗೆ ಬಿದ್ದ ಸೈನಿಕರ ಐದು ರೈಫಲ್‌ಗಳೊಂದಿಗೆ ಪರಾರಿಯಾಗಿದ್ದರು. ಈ ಭಯೋತ್ಪಾದಕ ದಾಳಿಯ ನಂತರ ಆ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಬೃಹತ್ ಶೋಧ ಕಾರ್ಯಾಚರಣೆಯ ಹೊರತಾಗಿಯೂ ಉಗ್ರರು ತಲೆಮರೆಸಿಕೊಂಡಿದ್ದಾರೆ.
ಈ ದಾಳಿಗೆ ಸಂಬಂಧಿಸಿದಂತೆ 200 ರಿಂದ 590 ಜನರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಇನ್ನು ಮುಂದೆ ಈ ಕಿರುಕುಳವನ್ನು ಸಹಿಸಲಾಗದು. ನಾನು ಉಗ್ರರಿಗೆ ಸಹಾಯ ಮಾಡಿಲ್ಲ ನಾನು ಸತ್ಯ ಹೇಳಿದರು ಯಾರೂ ನಂಬಲು ಸಿದ್ದರಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಮೃತ ವ್ಯಕ್ತಿ ಮೆಂಧರ್ ತಹಸಿಲ್‌ನ (Mendhar tehsil) ನಾರ್ ಗ್ರಾಮದ ನಿವಾಸಿಯಾಗಿದ್ದ. ನನ್ನ ಕುಟುಂಬ ಯಾವಾಗಲೂ ಭಾರತವನ್ನೇ ಬೆಂಬಲಿಸಿದೆ. ಅಧಿಕಾರಿಗಳಿಗೆ ನನ್ನ ಮನವಿ ಎಂದರೆ ಅಮಾಯಕರ ಮೇಲೆ ದಬ್ಬಾಳಿಕೆ ಮಾಡಬೇಡಿ, ಆದರೆ ಘಟನೆಯಲ್ಲಿ ಭಾಗಿಯಾಗಿರುವವರ ಮೇಲೆ ಯಾರೇ ಆಗಿದ್ದರೂ ಕಠಿಣ ಕ್ರಮವಾಗಲಿ ಎಂದು ಶಾ ವೀಡಿಯೋದಲ್ಲಿ ಹೇಳಿದ್ದಾನೆ.
ಪೂಂಚ್ ದಾಳಿಗೆ ಸ್ಟಿಕ್ಕಿ ಬಾಂಬ್, ಚೀನಾ ನಿರ್ಮಿತ ಉಕ್ಕಿನ ಗುಂಡು ಬಳಕೆ: ಉಗ್ರರ ಶೋಧಕ್ಕೆ 2,000 ಕಮಾಂಡೋ ನಿಯೋಜನೆ
ಇಷ್ಟೇ ಅಲ್ಲದೇ ತಾನು ದಾಳಿ ನಡೆಸಲು ಭಯೋತ್ಪಾದಕರಿಗೆ ಸಹಾಯ ಮಾಡಿಲ್ಲ ಎಂದು ಆತ ದೇವರು ಮತ್ತು ಪವಿತ್ರ ಕುರಾನ್‌ನ ಮೇಲೆಯೂ ಪ್ರಮಾಣ ಮಾಡಿದ್ದಾನೆ. 200 ಕ್ಕೂ ಹೆಚ್ಚು ಅಮಾಯಕರು ಯಾವುದೇ ತಪ್ಪು ಮಾಡದೇ ಕಿರುಕುಳ ಮತ್ತು ಚಿತ್ರಹಿಂಸೆಯನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ರೈಫಲ್ಸ್‌ನ (Rashtriya Rifles) ನನ್ನ ಸಹೋದರರು ಕೊಲ್ಲಲ್ಪಟ್ಟಿದ್ದಕ್ಕಾಗಿ ನನಗೆ ತುಂಬಾ ದುಃಖವಾಗಿದೆ. ಅವರ ಕುಟುಂಬಗಳಿಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಯಾವುದೇ ಮುಗ್ಧ ವ್ಯಕ್ತಿಯನ್ನು ಕೊಲ್ಲಬಾರದು ಎಂದು ಮಾನವೀಯತೆ ಒತ್ತಾಯಿಸುತ್ತದೆ. ನನ್ನ ಕುಟುಂಬ ಮತ್ತು ಗ್ರಾಮಸ್ಥರು ನಮ್ಮ ದೇಶವನ್ನು ರಕ್ಷಿಸುತ್ತಾರೆ ಮತ್ತು ಸೇನಾ ಪಡೆಗಳೊಂದಿಗೆ ಸಹಕರಿಸುತ್ತಾರೆ ಎಂದು ಹೇಳಿ ಆತ ವಿಷ ಸೇವಿಸಿದ್ದಾನೆ.
ನಾನು ಎಲ್ಲಾ ಮುಸಲ್ಮಾನರಿಗೆ ಮನವಿ ಮಾಡುತ್ತೇನೆ. ನಾವೆಲ್ಲರೂ ಒಂದಾಗಿ ಸೇನೆಯನ್ನು ಬೆಂಬಲಿಸಬೇಕು. ಈ ರಕ್ತಪಾತವನ್ನು ಕೊನೆಗೊಳಿಸಿ ಕಿರುಕುಳದಿಂದ ಮುಕ್ತರಾಗಬೇಕು. ಶಾಂತಿಗಾಗಿ ಎಲ್ಲರೂ ಒಂದಾಗಿ, ನಮಗೆ ಸರ್ಕಾರ ಎಲ್ಲವನ್ನು ನೀಡಿದೆ. ಆದರೆ ಕೆಲವೇ ಕೆಲವು ವ್ಯಕ್ತಿಗಳಿಂದ ನಾವು ತೊಂದರೆ ಅನುಭವಿಸುತ್ತಿದ್ದೇವೆ. ನಾವು ಅವರ ಬಗ್ಗೆ ಬಹಿರಂಗಪಡಿಸಬೇಕು ಎಂದು ಆತ ವಿಡಿಯೋದಲ್ಲಿ ಹೇಳಿದ್ದಾನೆ.
ತನ್ನ ಸಂಬಂಧಿಗಳು ಗ್ರಾಮಸ್ಥರನ್ನು ಕಿರುಕುಳದಿಂದ ಮುಕ್ತಗೊಳಿಸುವುದಕ್ಕಾಗಿ ತಾನು ಜೀವ ಬಿಡುತ್ತಿದ್ದೇನೆ ಎಂದು ಆತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಮಂಗಳವಾರ ಸಂಜೆ ಮುಖ್ತಾರ್ ಹುಸೈನ್ ಶಾ (Mukhtar Hussain Shah), ವಿಷ ಸೇವಿಸಿದ್ದ, ಈತನನ್ನು ರಜೌರಿಯಲ್ಲಿರುವ (Rajouri) ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಆತ ಸಾವನ್ನಪ್ಪಿದ್ದಾನೆ. ಈತನ ಸಾವು ಖಂಡಿಸಿ ಸಂಬಂಧಿಗಳು ಹಾಗೂ ಕುಟುಂಬದವರು ಪ್ರತಿಭಟನೆ ನಡೆಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಸೇನೆಯನ್ನು ಬೆಂಬಲಿಸಿ ಹಾಗೂ ಸ್ಥಳೀಯ ಪೊಲೀಸರನ್ನು ವಿರೋಧಿಸಿ ಘೋಷಣೆ ಕೂಗಿದ್ದಾರೆ.