ಪೂಂಚ್ ದಾಳಿಗೆ ಸ್ಟಿಕ್ಕಿ ಬಾಂಬ್, ಚೀನಾ ನಿರ್ಮಿತ ಉಕ್ಕಿನ ಗುಂಡು ಬಳಕೆ: ಉಗ್ರರ ಶೋಧಕ್ಕೆ 2,000 ಕಮಾಂಡೋ ನಿಯೋಜನೆ
ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ರಾಷ್ಟ್ರೀಯ ರೈಫಲ್ಸ್ ಪಡೆಯ ಐವರು ಸೈನಿಕರನ್ನು ಬಲಿ ಪಡೆದ ಭಯೋತ್ಪಾದಕ ದಾಳಿ ನಡೆಸಿದ ಉಗ್ರರನ್ನು ಪತ್ತೆಹಚ್ಚಲು ಡ್ರೋನ್ ಹಾಗೂ ಶ್ವಾನಗಳ ಮೂಲಕ ನಡೆಸುತ್ತಿರುವ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಜಮ್ಮು (ಏಪ್ರಿಲ್ 23, 2023): 5 ಸೈನಿಕರ ಬಲಿ ಪಡೆದ ಕಳೆದ ಗುರುವಾರ ನಡೆದ ಪೂಂಚ್ ದಾಳಿ ವೇಳೆ ಉಗ್ರರು ಸ್ಟಿಕ್ಕಿ ಬಾಂಬ್ ಬಳಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ ಯೋಧರ ಮೇಲೆ ನಡೆಸಿದ ಗುಂಡಿನ ದಾಳಿಗೆ ಚೀನಾ ನಿರ್ಮಿತ 7.62 ಎಂ.ಎಂ. ಗಾತ್ರದ ಉಕ್ಕಿನ ಗುಂಡುಗಳು ಬಳಕೆಯಾಗಿರುವುದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ವಿಧಿ ವಿಜ್ಞಾನ ತಜ್ಞರು, ದಾಳಿಗೆ ತುತ್ತಾದ ಸೇನಾ ಟ್ರಕ್‌ನಿಂದ 36 ಸುತ್ತು ಗುಂಡು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಎರಡು ಗ್ರೆನೇಡ್ ಪಿನ್ ಕೂಡಾ ಪತ್ತೆಯಾಗಿದೆ. ಅಲ್ಲದೆ ವಾಹನದಲ್ಲಿ ಸೀಮೆಎಣ್ಣೆಯ ಆವಿ ಅಂಶ ಕೂಡಾ ಪತ್ತೆಯಾಗಿದೆ. ಹೀಗಾಗಿ ಘಟನೆಯ ಹಿಂದೆ ಅತ್ಯಂತ ದೊಡ್ಡ ಷಡ್ಯಂತ್ರವಿದ್ದು, ದೊಡ್ಡ ಮಟ್ಟದ ಸ್ಫೋಟಕ್ಕೆ ಎಲ್ಲಾ ಸಿದ್ಧತೆ ನಡೆಸಲಾಗಿತ್ತು ಎಂಬುದರ ಸುಳಿವು ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಜಿ20 ಶೃಂಗಸಭೆಗೆ ಭೀತಿ ಸೃಷ್ಟಿಗೆ ಪೂಂಚ್‌ನಲ್ಲಿ ಉಗ್ರ ದಾಳಿ? ಪಾಕ್ ಕೈವಾಡ ಶಂಕೆ
ಈ ನಡುವೆ ಉಗ್ರರ ಪತ್ತೆಯಾಗಿ ಘಟನೆ ನಡೆದ ಸ್ಥಳದ ಸುತ್ತಮುತ್ತಲೂ 2000 ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಈ ಮೂಲಕ ಉಗ್ರರು ತಪ್ಪಿಸಿಕೊಳ್ಳದಂತೆ ಜಾಲ ರೂಪಿಸಲಾಗಿದೆ. ಜೊತೆಗೆ ಜಮ್ಮು- ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಸಂಘಟನೆಗಳು ಸ್ಥಳೀಯರ ಸಹಾಯದಿಂದ ದಾಳಿ ನಡೆಸಿವೆ ಎಂದು ಗುಪ್ತಚರಗಳು ತಿಳಿಸಿವೆ.
ಉಗ್ರರ ಪತ್ತೆಗೆ ಡ್ರೋನ್, ಶ್ವಾನ ದಳ ಬಳಸಿ ಕಾರ್ಯಾಚರಣೆ
ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ರಾಷ್ಟ್ರೀಯ ರೈಫಲ್ಸ್ ಪಡೆಯ ಐವರು ಸೈನಿಕರನ್ನು ಬಲಿ ಪಡೆದ ಭಯೋತ್ಪಾದಕ ದಾಳಿ ನಡೆಸಿದ ಉಗ್ರರನ್ನು ಪತ್ತೆಹಚ್ಚಲು ಡ್ರೋನ್ ಹಾಗೂ ಶ್ವಾನಗಳ ಮೂಲಕ ನಡೆಸುತ್ತಿರುವ ಶೋಧ ಕಾರ್ಯಾಚರಣೆಯು ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿತು. ದಾಳಿ ನಡೆಸಿ ಪರಾರಿಯಾಗಿರುವ ಕನಿಷ್ಠ 7 ಉಗ್ರರು ಸಮೀಪದ ಅರಣ್ಯ ಅಥವಾ ಕಂದಕ ಪ್ರದೇಶದಲ್ಲಿ ಆಡಗಿರುವ ಶಂಕೆ ಇರುವ ಹಿನ್ನೆಲೆ ಡ್ರೋನ್, ಶ್ವಾನಗಳನ್ನು ಬಳಸಿ ಬೃಹತ್ ಕಾರ್ಯಾಚರಣೆ ಆರಂಭಿಸಲಾಗಿದ್ದು ಸುತ್ತಮುತ್ತಲಿನ ಸಂಪೂರ್ಣ ಪ್ರದೇಶವನ್ನು ಸುತ್ತುವರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಭಿಂಬರ್ ಗಲಿ ಹಾಗೂ ಪೂಂಚ್ ರಸ್ತೆ ಮಾರ್ಗವನ್ನು ಸ್ಥಗಿತಗೊಳಿಸಲಾಗಿದ್ದು ಮೆಂಧರ್ ಮಾರ್ಗವಾಗಿ ಪೂಂಚ್‌ಗೆ ತೆರಳುವಂತೆ ಜನರಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಉಗ್ರ ದಾಳಿ ಖಚಿತಪಡಿಸಿದ ಭಾರತೀಯ ಸೇನೆ, ಗ್ರೆನೇಡ್ ಆ್ಯಟಾಕ್‌ಗೆ ಐವರು ಯೋಧರು ಹುತಾತ್ಮ!
ಬಿಎಸ್‌ಎಫ್ ಡಿಜಿ ಪೂಂಚ್‌ಗೆ ಭೇಟಿ
ಉಗ್ರರ ದಾಳಿಗೆ 5 ಯೋಧರು ಬಲಿಯಾದ ಬೆನ್ನಲ್ಲೇ ಬಿಎಸ್‌ಎಫ್‌ನ ಪ್ರಧಾನ ನಿರ್ದೇಶಕ ಎಸ್.ಎಲ್.ತಾವೋಸೇನ್ ಶನಿವಾರ ರಾಜೌರಿ ಮತ್ತು ಪೂಂಚ್ ಬಳಿಯ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜೌರಿ, ಪೂಂಚ್ ಜಿಲ್ಲೆಯಲ್ಲಿ 2 ದಿನದ ಪ್ರವಾಸದಲ್ಲಿರುವ ಅವರು ಭದ್ರತಾ ಪರಿಶೀಲನೆ ನಡೆಸಿ ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಇದನ್ನೂ ಓದಿ: ಯೋಧನಿಂದಲೇ ಕರ್ನಾಟಕದ ಇಬ್ಬರು ಸೈನಿಕರು ಸೇರಿ ನಾಲ್ವರ ಹತ್ಯೆ: ಕಾರಣ ಬಹಿರಂಗ..