ವಾರಂಗಲ್‌ನಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ 800 ವರ್ಷಗಳಷ್ಟು ಹಳೆಯ ಕಾಕತೀಯ ಕಾಲದ ಶಿವ ದೇಗುಲವನ್ನು ಧ್ವಂಸಗೊಳಿಸಲಾಗಿದೆ. ಈ ಘಟನೆಯು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ದೇಗುಲವನ್ನು ಮರುನಿರ್ಮಿಸುವ ಭರವಸೆ ನೀಡಿದ್ದಾರೆ.

  • ಭುಗಿಲೆದ್ದ ಆಕ್ರೋಶ, ಪ್ರಕರಣ ದಾಖಲು
  • ಕೆಡವಿದ ಗುಡಿ ಮರುನಿರ್ಮಾಣ: ಡೀಸಿ
  • ಪುರಾತತ್ವ, ದತ್ತಿ ಇಲಾಖೆಯ ಒಪ್ಪಿಗೆ ಪಡೆದಿಲ್ಲ: ದೂರು
  • ಸಂಸ್ಕೃತಿ ಸಚಿವಾಲಯವನ್ನು ಹೊಣೆ ಮಾಡಿ: ಆಗ್ರಹ

ವಾರಂಗಲ್‌ (ಮೇ.9): ಸರ್ಕಾರಿ ಶಾಲೆಯ ನಿರ್ಮಾಣಕ್ಕಾಗಿ ಕಾಕತಿಯ ಕಾಲದ 800 ವರ್ಷ ಪುರಾತನ ಶಿವನ ದೇಗುಲವೊಂದನ್ನು ಇಲ್ಲಿನ ಖಾನಾಪುರ ಮಂಡಲದ ಅಶೋಕ ನಗರದಲ್ಲಿ ಧ್ವಂಸಗೊಳಿಸಲಾಗಿದೆ. ಇದಕ್ಕೆ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದೂರು ದಾಖಲಾಗಿದೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ವಕೀಲ ರಾಮರಾವ್‌ ಇಮ್ಮನೇನಿ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದಲ್ಲಿ ದೂರು ದಾಖಲಿಸಿದ್ದಾರೆ. ಪುರಾತತ್ವ ಮತ್ತು ದತ್ತಿ ಇಲಾಖೆಗಳಿಂದ ಅನುಮೋದನೆ ಪಡೆಯದೆ ಈ ಯೋಜನೆಗೆ ಅನುಮತಿಸಿದ ಅಧಿಕಾರಿಗಳ ವಿರುದ್ಧ ತೆಲಂಗಾಣ ಪರಂಪರೆ ಕಾಯ್ದೆಯ 30ನೇ ಸೆಕ್ಷನ್‌ನ ಅಡಿ ಕಾನೂನು ಕ್ರಮ ಜರುಗಿಸಬೇಕು. ಇದಕ್ಕೆ ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಇತಿಹಾಸಕಾರರನ್ನು ಹೊಣೆ ಮಾಡಬೇಕು ಎಂದು ಕೋರಿದ್ದಾರೆ.

ಜಿಲ್ಲಾಧಿಕಾರಿ ಸ್ಪಷ್ಟನೆ

ದೇಗುಲ ಧ್ವಂಸಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಾರಂಗಲ್‌ ಜಿಲ್ಲಾಧಿಕಾರಿ ಡಾ. ಸತ್ಯ ಶಾರದಾ ಮತ್ತು ನರಸಂಪೇಟೆ ಶಾಸಕ ದೊಂತಿ ಮಾಧವ ರೆಡ್ಡಿ ಮೇ 6ರಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ, ‘ಆ 30 ಎಕರೆಯಲ್ಲಿ ಪೊದೆಗಳನ್ನು ತೆರವುಗೊಳಿಸುವಾಗ ಹಳೆಯ ಶಿಥಿಲಗೊಂಡ ರಚನೆಯ ಅವಶೇಷಗಳಷ್ಟೇ ಕಂಡುಬಂದಿದ್ದವು ಹಾಗೂ ಅವುಗಳು ಸಂರಕ್ಷಿತ ಸ್ಮಾರಕವೆಂದು ದಾಖಲಾಗಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಜತೆಗೆ, ಅದೇ ಸ್ಥಳದಲ್ಲಿ ದೇವಸ್ಥಾನವನ್ನು ಮರುನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.

13ನೇ ಶತಮಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಕಾಕತೀಯ ದೊರೆ ಗಣಪತಿದೇವನ ಕಾಲದ ಈ ದೇವಾಲಯದ ಸ್ಥಳವು ಫೆಬ್ರವರಿ ಕ್ರಿ.ಶ. 1231ರ ಅಪರೂಪದ 7 ಸಾಲುಗಳ ತೆಲುಗು ಶಾಸನವನ್ನು ಹೊಂದಿದ್ದು, ಅದರಲ್ಲಿ ರಾಜನನ್ನು ‘ಮಹಾರಾಜ’ ಮತ್ತು ‘ರಾಜಾಧಿರಾಜುಲು’ ಎಂದು ಸಂಬೋಧಿಸಲಾಗಿತ್ತು.