Telangana model internal reservation policy ತೆಲಂಗಾಣ ಮಾದರಿಯ ಒಳಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮತ್ತು ಅಸ್ತಿತ್ವದಲ್ಲಿರುವ ಲೋಪಗಳನ್ನು ಸರಿಪಡಿಸಲು ಸರ್ಕಾರವನ್ನು ಒತ್ತಾಯಿಸಲು ಮಾದಿಗರ ಚಿಂತಕರ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. 

ಬೆಂಗಳೂರು (ಮೇ.4): ತೆಲಂಗಾಣ ಮಾದರಿ ಒಳಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಬೇಕು. ರಾಜ್ಯ ಒಳಮೀಸಲಾತಿಯಲ್ಲಿರುವ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಮಾದಿಗರ ಚಿಂತಕರ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

Add Asianetnews Kannada as a Preferred SourcegooglePreferred

ಭಾನುವಾರ ಶಾಸಕರ ಭವನದಲ್ಲಿ ಮಾದಿಗ ಸಮುದಾಯದ ಮಾಜಿ ಸಚಿವರು, ಮಾಜಿ ಸಂಸದರು, ನಿವೃತ್ತ ಅಧಿಕಾರಿಗಳು, ಚಿಂತಕರು, ಸಾಹಿತಿಗಳು ಒಳಗೊಂಡಂತೆ ಅನೇಕರು ದುಂಡು ಮೇಜಿನ ಸಭೆ ನಡೆಸಿ ಚರ್ಚೆ ನಡೆಸಿದರು.

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳಿಗೆ ಬರುವ ಹುದ್ದೆಗಳ ಸಂಖ್ಯೆ 3ಕ್ಕಿಂತ ಕಡಿಮೆ ಇದ್ದರೆ ಎಸ್ಸಿ ಸಾಮಾನ್ಯ ಎಂದು ಪರಿಗಣಿಸುವ ಆದೇಶ ಹಿಂಪಡೆಯಬೇಕು. ರೋಸ್ಟರ್ ಬಿಂದುವಿನಲ್ಲಿ ಇರುವ ದೋಷಗಳನ್ನು ಸರಿಪಡಿಸಲು ಸಮಾಜ ಕಲ್ಯಾಣ ಇಲಾಖೆಗೆ ವಹಿಸಿರುವ ಜವಾಬ್ದಾರಿ ವಾಪಸ್‌ ಪಡೆಯಬೇಕು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಹಿಸಬೇಕು. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಆದ್ದರಿಂದ ಎರಡೂ ಕಡೆ ಒಳಮೀಸಲಾತಿ ನೀತಿ ಒಂದೇ ರೀತಿ ಇರಬೇಕು. ತೆಲಂಗಾಣ ಮಾದರಿ ಒಳಮೀಸಲಾತಿ ನೀತಿ ರಾಜ್ಯದಲ್ಲಿ ಅನುಷ್ಠಾನಗೊಳಿಸಬೇಕು.

ಕಳ್ಳದಾರಿಯಲ್ಲಿ ದುರ್ಬಳಕೆ ತಡೆಯಬೇಕು:

ರಾಜ್ಯದಲ್ಲಿ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂಧ್ರ ಜಾತಿ ಸೂಚಕದಡಿ ಮಾದಿಗರು, ಛಲವಾದಿಗರು ಇಬ್ಬರೂ ಪ್ರಮಾಣ ಪತ್ರ ಪಡೆಯುತ್ತಿದ್ದು, ಪ್ರಸ್ತುತ ಎ, ಬಿ, ಸಿ ಎಂದು ಒಳಮೀಸಲಾತಿ ವರ್ಗೀಕರಣ ಮಾಡಲಾಗಿದೆ. ವರ್ಗ 1 ಗುಂಪಿನಲ್ಲಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿದ್ದು, ಈ ಗುಂಪಿಗೆ ಕಳ್ಳದಾರಿಯಲ್ಲಿ ಅನೇಕರು ನುಸುಳುವ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮಕೈಗೊಳ್ಳಬೇಕೆಂದು ಸಭೆ ನಿರ್ಣಯ ಕೈಗೊಂಡಿದೆ.

ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ಮಾದಿಗರ ಚಿಂತಕರ ದುಂಡು ಮೇಜಿನ ಸಭೆಯನ್ನು ಗೋನಾಳ್ ಭೀಮಪ್ಪ ಉದ್ಘಾಟಿಸಿದರು. ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಇತರರಿದ್ದರು.

ಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ:

ಇದೇ ಸಂದರ್ಭದಲ್ಲಿ ಒಳಮೀಸಲಾತಿ ಅನುಷ್ಠಾನದಲ್ಲಿ ಲೋಪ, ವರ್ಗ 1 ಗುಂಪಿಗೆ ನುಳುಸುವುದು ಸೇರಿ ವಿವಿಧ ಸಮಸ್ಯೆಗಳಿಗೆ ಕಡಿವಾಣ ಹಾಕಲು ಮಾದಿಗರ ಒಳಮೀಸಲಾತಿ ಸಂರಕ್ಷಣಾ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಎಚ್.ಆಂಜನೇಯ, ಗೌರವಾಧ್ಯಕ್ಷರಾಗಿ ಡಾ.ಎಲ್.ಹನುಮಂತಯ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜೊತೆಗೆ ಜಿಲ್ಲಾ-ತಾಲೂಕು ಮಟ್ಟದಲ್ಲಿ ಸಮಿತಿ ರಚಿಸುವ ಅಧಿಕಾರವನ್ನು ಮಾಜಿ ಸಚಿವ ಎಚ್.ಆಂಜನೇಯವರಿಗೆ ವಹಿಸಲಾಯಿತು.

ಒಳಮೀಸಲಾತಿಯಲ್ಲಿರುವ ಲೋಪಗಳನ್ನು ಸರಿಪಡಿಸುವಂತೆ ಸಚಿವರಾದ ಕೆ.ಎಚ್.ಮುನಿಯಪ್ಪ, ತಿಮ್ಮಾಪುರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ನಿಯೋಗ ತೆರಳಿ ಒತ್ತಾಯಿಸಲು ಸಭೆ ನಿರ್ಣಯಿಸಿತು.

ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್‌.ಆಂಜನೇಯ, ಯಾರೊಂದಿಗೂ ಸ್ಪರ್ಧೆ ಮಾಡಲು ಶಕ್ತರಲ್ಲವೆಂದೇ ಒಳಮೀಸಲಾತಿ ಜಾರಿಗೆ ಮಾದಿಗರು ಹೋರಾಟ ನಡೆಸಿರುವುದು. ಚಪ್ಪಲಿ ಹೊಲಿಯುವ, ಕಸ ಗುಡಿಸುವ, ಕೃಷಿ-ಕಟ್ಟಡ ಕಾರ್ಮಿಕರಾಗಿರುವ ಮಾದಿಗರ ಬದುಕು ನಿಕೃಷ್ಟವಾಗಿದೆ. ಆದ್ದರಿಂದ ಸಂಪೂರ್ಣವಾಗಿ ಒಳಮೀಸಲಾತಿ ಜಾರಿಗೊಳಿಸಬೇಕು. ಯಾವುದೇ ಹುದ್ದೆಗಳನ್ನು ಒಳಮೀಸಲಾತಿ ಇಲ್ಲದೆ ತುಂಬುವಂತಿಲ್ಲ. ಆಗ ಮಾತ್ರ ಮಾದಿಗರಿಗೆ ನ್ಯಾಯ ಕಲ್ಪಿಸಲು ಸಾಧ್ಯ ಎಂದರು.

ಕಾರ್ಯಕ್ರಮವನ್ನು ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್‌ ಭೀಮಪ್ಪ ಉದ್ಘಾಟಿಸಿದರು. ಸಭೆಯಲ್ಲಿ ಮಾಜಿ ಸದಸ್ಯ ಎಚ್.ದುಗ್ಗಪ್ಪ, ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಸಾಹಿತಿ ದಾಸನೂರು ಕೂಸಣ್ಣ, ಮಾದಿಗ ನೌಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಹೊಣಿಕೇರಿ ಸೇರಿ ಇತತರರು ಇದ್ದರು.