ಕೇರಳ ಲಾಟರಿ ಕಲ್ಯಾಣ ನಿಧಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯು, ತಾನು ಲಪಟಾಯಿಸಿದ್ದ ₹14 ಕೋಟಿಗಳಲ್ಲಿ ₹6 ಕೋಟಿಯನ್ನು ಸುಟ್ಟುಹಾಕಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. 2016ರ ನೋಟು ರದ್ದತಿ ಬಳಿಕ ಹಳೆಯ ನೋಟುಗಳನ್ನು ಬದಲಾಯಿಸಲು ಸಾಧ್ಯವಾಗದ ಕಾರಣ ಈ ಕೃತ್ಯ ಎಸಗಿರುವುದಾಗಿ ಆತ ಬಾಯಿಬಿಟ್ಟಿದ್ದಾನೆ.
ತಿರುವನಂತಪುರಂ: ‘2016ರ ನೋಟು ರದ್ದತಿ ನಂತರ ಲಾಟರಿ ಕಲ್ಯಾಣ ನಿಧಿಯಿಂದ ಲಪಟಾಯಿಸಿದ ಹಣವನ್ನು ಬಳಸಲು ಸಾಧ್ಯವಾಗಲಿಲ್ಲ. ಹೀಗಾಗಿ 6 ಕೋಟಿ ರು. ಮೌಲ್ಯದ ನೋಟುಗಳನ್ನು ಸುಟ್ಟುಹಾಕಿದೆ’ ಎಂಬ ಆಘಾತಕಾರಿ ಮಾಹಿತಿಯನ್ನು ಕೇರಳ ಲಾಟರಿ ಕಲ್ಯಾಣ ನಿಧಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ.
ಸಂಗೀತ್ ಲಾಟರಿ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾದ ಸುಮಾರು 14 ಕೋಟಿ ರು.ಗಳನ್ನು ನಕಲಿ ಸಹಿಗಳನ್ನು ಬಳಸಿ ಸ್ವಂತ ಖಾತೆಗೆ ವರ್ಗಾಯಿಸಿಕೊಂಡ ಆರೋಪ ಹೊತ್ತಿದ್ದಾನೆ.
ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದ ಈತ, ‘ನೋಟು ರದ್ದತಿಗೂ ಮುನ್ನ ಕಲ್ಯಾಣ ನಿಧಿ ಖಾತೆಗಳಿಂದ 500 ಮತ್ತು 1,000 ರು. ನೋಟುಗಳನ್ನು ಪಡೆದಿದ್ದೆ. ಕೇಂದ್ರ ಸರ್ಕಾರ ನೋಟುಗಳನ್ನು ರದ್ದುಗೊಳಿಸಿತು. ಆ ನಂತರ ಹಣವನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ 2017ರಲ್ಲಿ ಪೊಂಗುಮ್ಮೂಡುವಿನ ಮನೆಯಲ್ಲಿ ಹಣವನ್ನು ಸುಟ್ಟುಹಾಕಿದೆ’ ಎಂದು ಒಪ್ಪಿಕೊಂಡಿದ್ದಾನೆ.
ಕೇರಳ ಲಾಟರಿ ಬಹುಮಾನದ ಹೆಸರಿನಲ್ಲಿ ನಗದು ವಂಚನೆ
ಮಂಗಳೂರು: ಕೇರಳ ಲಾಟರಿ ಬಹುಮಾನ ಬಂದಿದೆ ಎಂದು ನಂಬಿಸಿ ಅಪರಿಚಿತರು ಸುರತ್ಕಲ್‌ನ ವ್ಯಕ್ತಿಗೆ ವಂಚಿಸಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 50 ವರ್ಷದ ವ್ಯಕ್ತಿ ಮೇ 29ರಂದು ತನ್ನ ಮೊಬೈಲ್‌ನಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದ ವೇಳೆ ಅದರಲ್ಲಿ ಕೇರಳ ಲಾಟರಿ ಜಾಹೀರಾತು ಬಂದಿದ್ದು 50 ರು. ಟಿಕೆಟ್ ಸಂಜೆ ಡ್ರಾ ಆಗುವ ಬಗ್ಗೆ ಇದ್ದು, ಲಿಂಕ್‌ನಲ್ಲಿದ್ದ ನಂಬರ್‌ಗೆ ಕರೆ ಮಾಡಿ ಅಪರಿಚಿತ ವ್ಯಕ್ತಿಯಿಂದ 2 ಲಾಟರಿ ಟಿಕೆಟ್ ನಂಬರ್ ಆಯ್ಕೆ ಮಾಡಿ 100 ರೂಪಾಯಿ ಸ್ಕ್ಯಾನರ್ ಮುಖೇನ ಹಣ ಹಾಕಿದ್ದರು.
ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಅತೃಪ್ತ ಆತ್ಮಗಳು ತುಂಬಿವೆ: ರಾಮಲಿಂಗಾ ರೆಡ್ಡಿ ಬಗ್ಗೆ ಕೆ.ಎಸ್.ಈಶ್ವರಪ್ಪ ವ್ಯಂಗ್ಯ
ಅಪರಿಚಿತ ವ್ಯಕ್ತಿ ಸಂಜೆ ಕರೆ ಮಾಡಿ ಲಾಟರಿ ಡ್ರಾ ಆಗಿ 1 ನಂಬರ್‌ಗೆ 12 ಲಕ್ಷ ರು. ಬಹುಮಾನ ಬಂದಿದೆ. ಮತದಾರರ ಗುರುತು ಕಾರ್ಡ್, ಬ್ಯಾಂಕ್ ಖಾತೆ ನಂಬರ್ ಹಾಗೂ ಐಎಫ್‌ಎಸ್‌ಸಿ ಕೋಡ್ ಕಳುಹಿಸಲು ಹೇಳಿದ್ದು, ಅದರಂತೆ ಸುರತ್ಕಲ್ ವ್ಯಕ್ತಿ ಕಳುಹಿಸಿರುತ್ತಾರೆ. ನಂತರ ವಿವಿಧ ಹಂತಗಳಲ್ಲಿ 1,85,636 ರು. ಲಪಟಾಯಿಸಿ ಮೋಸ ಮಾಡಿದ್ದಾರೆ. ಇದರ ಅರಿವಾಗಿ ಸಂತ್ರಸ್ತರು ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನುಕ್ರಮ ಕೈಗೊಳ್ಳುವಂತೆ ಸುರತ್ಕಲ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಣ್ಣಾಮಲೈ ರಾಜೀನಾಮೆಯಿಂದ ನಮಗೇನೂ ನಷ್ಟವಿಲ್ಲ, ನಮ್ಮದು ವಿಶ್ವದ ಅತಿದೊಡ್ಡ ಪಕ್ಷ ಎಂದ ಬಿಜೆಪಿ


