ಕೇರಳ-ಕರ್ನಾಟಕ ಗಡಿಯ ತೋಲ್ಪೆಟ್ಟಿಯಲ್ಲಿ, ದಾಖಲೆಗಳಿಲ್ಲದೆ ಬಸ್‌ನಲ್ಲಿ ಸಾಗಿಸುತ್ತಿದ್ದ ₹30.93 ಲಕ್ಷ ಸಮೇತ ಕೋಯಿಕ್ಕೋಡ್‌ನ ಯುವಕನನ್ನು ಅಬಕಾರಿ ಇಲಾಖೆ ಬಂಧಿಸಿದೆ. ಬೆಂಗಳೂರಿನಿಂದ ಕೋಯಿಕ್ಕೋಡ್‌ಗೆ ತೆರಳುತ್ತಿದ್ದ ಈತನನ್ನು ತಪಾಸಣೆ ವೇಳೆ ಹಿಡಿಯಲಾಗಿದೆ.
ಮಾನಂತವಾಡಿ: ವಯನಾಡಿನ ಕೇರಳ-ಕರ್ನಾಟಕ ಗಡಿಯ ತೋಲ್ಪೆಟ್ಟಿಯಲ್ಲಿ ದಾಖಲೆಗಳಿಲ್ಲದೆ ಲಕ್ಷಾಂತರ ರೂಪಾಯಿ ಸಾಗಿಸುತ್ತಿದ್ದ ಯುವಕನೊಬ್ಬ ಅಬಕಾರಿ ಇಲಾಖೆ ತಂಡದ ಬಲೆಗೆ ಬಿದ್ದಿದ್ದಾನೆ. ಕೋಯಿಕ್ಕೋಡ್‌ನ ಕೊಡುವಳ್ಳಿಯ ಮೊಹಮ್ಮದ್ ಸಾಮಿರ್ ಬಂಧಿತ ಯುವಕ. ಈತ 30,93,900 ರೂಪಾಯಿ ಸಾಗಿಸುತ್ತಿದ್ದ. ಬೆಂಗಳೂರಿನಿಂದ ಕೋಯಿಕ್ಕೋಡ್‌ಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಈತ ಪ್ರಯಾಣಿಸುತ್ತಿದ್ದನು.
ಅಧಿಕಾರಿಗಳನ್ನು ನೋಡುತ್ತಿದ್ದಂತೆ ಭಯಗೊಂಡ ಯುವಕ!
ಬಸ್ ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಚೆಕ್‌ಪೋಸ್ಟ್‌ಗೆ ಬಂದಿತ್ತು. ಅಬಕಾರಿ ಇಲಾಖೆ ತಂಡ ಮಾದಕವಸ್ತು ಸಾಗಾಟದ ಬಗ್ಗೆ ತಪಾಸಣೆ ನಡೆಸುತ್ತಿದ್ದಾಗ ಯುವಕ ಗಾಬರಿಗೊಂಡಿದ್ದಾನೆ. ಅನುಮಾನದ ಮೇಲೆ ಆತನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಿದಾಗ ನೋಟಿನ ಕಂತೆಗಳು ಪತ್ತೆಯಾಗಿವೆ.
ಹಣವನ್ನು ಯಾರಿಗೆ, ಎಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂಬುದಕ್ಕೆ ದಾಖಲೆಗಳನ್ನು ತೋರಿಸಲು ಕೇಳಿದಾಗ, ಆತನ ಬಳಿ ಯಾವುದೇ ದಾಖಲೆ ಇರಲಿಲ್ಲ. ಹೀಗಾಗಿ, ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡು ಎಣಿಕೆ ಮಾಡಿದರು. ಯುವಕನನ್ನೂ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಲ್ಲಿ ನಡೆದ ಗೋಲ್ಮಾಲ್, ಖಾಸಗಿ ಸಂಸ್ಥೆ ಟ್ರಸ್ಟಿಗಳ ₹19 ಕೋಟಿ ಆಸ್ತಿ ಜಪ್ತಿ
ಆದಾಯ ತೆರಿಗೆ ಇಲಾಖೆಗೆ ಹಣ ಹಸ್ತಾಂತರ
ರೇಂಜ್ ಇನ್ಸ್‌ಪೆಕ್ಟರ್ ಕೆ. ಶಶಿ, ಪ್ರಿವೆಂಟಿವ್ ಆಫೀಸರ್‌ಗಳಾದ ಕೆ. ಜಾನಿ, ವಿ. ಬಾಬು, ಸಿಕೆ. ರಂಜಿತ್, ಮತ್ತು ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪಿಎಸ್. ಸುಶಾದ್, ಕೆ. ರಶೀದ್ ಅವರು ಬಸ್‌ನೊಳಗೆ ತಪಾಸಣೆ ನಡೆಸಿದರು. ವಶಪಡಿಸಿಕೊಂಡ ಹಣವನ್ನು ಮುಂದಿನ ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಚಿನ್ನದ ಸರವನ್ನು ನಂಗೇ ಕೊಟ್ಟಿದ್ದು ಅಂದ್ಕೊಂಡುಬಿಟ್ಟಿದ್ದೆ, ಆದ್ರೆ ಆಗಿದ್ದೇ ಬೇರೆ: ಗಿಲ್ಲಿ ನಟನ ಬೇಸರ ನುಡಿ


