ಟಾಂಟನ್‌[ಜೂ.17]: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸೋಮವಾರ ವೆಸ್ಟ್‌ಇಂಡೀಸ್‌ ವಿರುದ್ಧ ವಿರುದ್ಧ ಸೆಣಸಲಿರುವ ಬಾಂಗ್ಲಾದೇಶ ಮಾನಸಿಕವಾಗಿ ಮುನ್ನಡೆ ಹೊಂದಿದೆ. ಕಾರಣ, ವಿಶ್ವಕಪ್‌ಗೂ ಮುನ್ನ ಐರ್ಲೆಂಡ್‌ನಲ್ಲಿ ನಡೆದಿದ್ದ ತ್ರಿಕೋನ ಏಕದಿನ ಸರಣಿಯಲ್ಲಿ ವಿಂಡೀಸ್‌ ವಿರುದ್ಧ ಬಾಂಗ್ಲಾದೇಶ ಹ್ಯಾಟ್ರಿಕ್‌ ಗೆಲುವು ಸಾಧಿಸಿತ್ತು. ಆ ಸರಣಿಯಲ್ಲಿ ವಿಂಡೀಸ್‌ ತಂಡಕ್ಕೆ ಕ್ರಿಸ್‌ ಗೇಲ್‌ ಹಾಗೂ ಆ್ಯಂಡ್ರೆ ರಸೆಲ್‌ ಅನುಪಸ್ಥಿತಿ ಕಾಡಿತ್ತು. ಈ ಪಂದ್ಯಕ್ಕೆ ಇಬ್ಬರು ತಾರಾ ಆಟಗಾರರ ಸೇವೆ ಲಭ್ಯವಾಗಲಿದೆಯಾದರೂ, ಬಾಂಗ್ಲಾದೇಶವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.

ಎರಡೂ ತಂಡಗಳು 4 ಪಂದ್ಯಗಳಿಂದ 3 ಅಂಕ ಕಲೆಹಾಕಿವೆ. ಬಾಂಗ್ಲಾದೇಶ ಜೂ.8ರಂದು ಕೊನೆ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಸೋಲುಂಡಿತ್ತು. ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದ್ದ ಲಂಕಾಕ್ಕೆ ವರುಣದೇವ ಅಡ್ಡಿಯಾದ. ಟೂರ್ನಿಯಲ್ಲಿ ಬಾಂಗ್ಲಾದೇಶ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ಪ್ರಮುಖವಾಗಿ ಶಕೀಬ್‌ ಅಲ್‌ ಹಸನ್‌ 3ನೇ ಕ್ರಮಾಂಕದಲ್ಲಿ ಮಿಂಚುತ್ತಿದ್ದು, ಬಾಂಗ್ಲಾ ಯಶಸ್ಸು ಕಾಣಬೇಕಿದ್ದರೆ ಶಕೀಬ್‌ ತಮ್ಮ ಲಯ ಮುಂದುವರಿಸಬೇಕಿದೆ. ಆದರೆ ಬೌಲಿಂಗ್‌ನಲ್ಲಿ ತಂಡ ಸುಧಾರಣೆ ಕಾಣಬೇಕಿದೆ. ತಂಡದ ಪ್ರಮುಖ ವೇಗಿಗಳು ಪಂದ್ಯದಿಂದ ಪಂದ್ಯಕ್ಕೆ ದುಬಾರಿಯಾಗುತ್ತಿದ್ದಾರೆ.

ಪ್ರಧಾನಿಯ ಮಾತನ್ನೇ ಕಡೆಗಣಿಸಿದ ಪಾಕ್ ಕ್ರಿಕೆಟಿಗರು!

ಮತ್ತೊಂದೆಡೆ ವೆಸ್ಟ್‌ಇಂಡೀಸ್‌ ಆಟಗಾರರು ಟಿ20 ಗುಂಗಿನಲ್ಲೇ ಇದ್ದಾರೆ. ತಂಡದ ಬ್ಯಾಟಿಂಗ್‌ ಶೈಲಿ ಬದಲಾಗಬೇಕಿದೆ. ಗೇಲ್‌, ಶಾಯ್‌ ಹೋಪ್‌, ಎವಿನ್‌ ಲೆವಿಸ್‌, ನಿಕೋಲಸ್‌ ಪೂರನ್‌, ಶಿಮ್ರೊನ್‌ ಹೆಟ್ಮೇಯರ್‌, ಆ್ಯಂಡ್ರೆ ರಸೆಲ್‌ರಂತಹ ಘಟಾನುಘಟಿಗಳ ಬಲವಿದ್ದು, ವಿಂಡೀಸ್‌ 50 ಓವರ್‌ ಮಾದರಿಗೆ ತಕ್ಕಂತೆ ಆಡಬೇಕಿದೆ. ತಂಡದ ವೇಗಿಗಳು ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಆದರೆ ಅನುಭವಿ ಸ್ಪಿನ್ನರ್‌ನ ಕೊರತೆ ಕೆರಿಬಿಯನ್ನರನ್ನು ಬಲವಾಗಿ ಕಾಡುತ್ತಿದೆ.

ಪಿಚ್‌ ರಿಪೋರ್ಟ್‌

ಟಾಂಟನ್‌ ಕ್ರೀಡಾಂಗಣದ ಪಿಚ್‌ ಸ್ವಿಂಗ್‌ ಬೌಲಿಂಗ್‌ಗೆ ಹೆಚ್ಚು ನೆರವು ನೀಡಲಿದ್ದು, ಉತ್ತಮ ಬೌನ್ಸ್‌ ಸಹ ಇರಲಿದೆ. ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು. ಕಳೆದ ಪಂದ್ಯದಲ್ಲಿ ಆಸ್ಪ್ರೇಲಿಯಾ 307 ರನ್‌ ಗಳಿಸಿ , ಆ ಮೊತ್ತವನ್ನು ಸುಲಭವಾಗಿ ರಕ್ಷಿಸಿಕೊಂಡಿತ್ತು.


ಒಟ್ಟು ಮುಖಾಮುಖಿ: 37

ವೆಸ್ಟ್‌ಇಂಡೀಸ್‌: 21

ಬಾಂಗ್ಲಾದೇಶ: 14

ಫಲಿತಾಂಶವಿಲ್ಲ: 02

ವಿಶ್ವಕಪ್‌ನಲ್ಲಿ ವಿಂಡೀಸ್‌ vs ಬಾಂಗ್ಲಾ

ಪಂದ್ಯ: 04

ವಿಂಡೀಸ್‌: 03

ಬಾಂಗ್ಲಾ: 00

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ವಿಂಡೀಸ್‌: ಕ್ರಿಸ್‌ ಗೇಲ್‌, ಎವಿನ್‌ ಲೆವಿಸ್‌, ಶಾಯ್‌ ಹೋಪ್‌, ನಿಕೋಲಸ್‌ ಪೂರನ್‌, ಶಿಮ್ರೊನ್‌ ಹೆಟ್ಮೇಯರ್‌, ಜೇಸನ್‌ ಹೋಲ್ಡರ್‌ (ನಾಯಕ), ಆ್ಯಂಡ್ರೆ ರಸೆಲ್‌, ಕಾರ್ಲೋಸ್‌ ಬ್ರಾಥ್‌ವೇಟ್‌, ಶ್ಯಾನನ್‌ ಗೇಬ್ರಿಯಲ್‌, ಒಶೇನ್‌ ಥಾಮಸ್‌, ಶೆಲ್ಡನ್‌ ಕಾಟ್ರೆಲ್‌.

ಬಾಂಗ್ಲಾದೇಶ: ತಮೀಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಶಕೀಬ್‌ ಅಲ್‌ ಹಸನ್‌, ಮುಷ್ಫಿಕುರ್‌ ರಹೀಂ, ಲಿಟನ್‌ ದಾಸ್‌, ಮಹಮದ್ದುಲ್ಲಾ, ಮೊಸಾದೆಕ್‌ ಹುಸೇನ್‌, ಮೊಹಮದ್‌ ಸೈಫುದ್ದೀನ್‌, ಮೆಹಿದಿ ಹಸನ್‌, ಮಶ್ರಫೆ ಮೊರ್ತಜಾ, ಮುಸ್ತಾಫಿಜುರ್‌ ರಹಮಾನ್‌.

ಸ್ಥಳ: ಟಾಂಟನ್‌ 
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1