ಬೆಂಗಳೂರು[ಜು.10]: ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಒಂದಂಕಿ ರನ್ ಗಳಿಸಿ ಪೆವಿಲಿಯನ್ ಸೇರಿದ್ದಾರೆ.

ಇಂಡೋ-ಕಿವೀಸ್ ಸೆಮಿಫೈನಲ್; ಭಾರತದ 3 ವಿಕೆಟ್ ಪತನ, ಸಂಕಷ್ಟದಲ್ಲಿ ಕೊಹ್ಲಿ ಸೈನ್ಯ!

ನ್ಯೂಜಿಲೆಂಡ್ ನೀಡಿದ್ದ 240 ರನ್ ಗಳ ಗುರಿ ಬೆನ್ನತ್ತಿರುವ ಭಾರತಕ್ಕೆ ಕಿವೀಸ್ ವೇಗಿಗಳಾದ ಮ್ಯಾಟ್ ಹೆನ್ರಿ ಹಾಗೂ ಟ್ರೆಂಟ್ ಬೌಲ್ಟ್ ಆಘಾತ ನೀಡಿದ್ದಾರೆ. ಆರಂಭಿಕರಿಬ್ಬರು ತಲಾ ಒಂದು ರನ್ ಬಾರಿಸಿ ಮ್ಯಾಟ್ ಹೆನ್ರಿ ಬೌಲಿಂಗ್’ನಲ್ಲಿ ವಿಕೆಟ್ ಕೀಪರ್ ಟಾಪ್ ಲಾಥಮ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರೆ, ನಾಯಕ ವಿರಾಟ್ ಕೊಹ್ಲಿ ಕೂಡಾ ಒಂದು ರನ್ ಬಾರಿಸಿ ಟ್ರೆಂಟ್ ಬೌಲ್ಟ್ ಬೌಲಿಂಗ್’ನಲ್ಲಿ ಎಲ್ ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದ್ದಾರೆ. ಇದಾದ ಕೆಲಹೊತ್ತಿನಲ್ಲೇ ಕಾರ್ತಿಕ್ ಕೂಡಾ 6 ರನ್ ಬಾರಿಸಿ ಮ್ಯಾಟ್ ಹೆನ್ರಿಗೆ ಮೂರನೇ ಬಲಿ ಆಗಿದ್ದಾರೆ. 

ಕಿವೀಸ್ ಪರ ದಾಖಲೆ ಬರೆದು ವಿಕೆಟ್ ಒಪ್ಪಿಸಿದ ವಿಲಿಯಮ್ಸನ್

ಪ್ರಸಕ್ತ ವಿಶ್ವಕಪ್ ಟೂರ್ನಿಯುದ್ಧಕ್ಕೂ ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನುಲುಬು ಎನಿಸಿಕೊಂಡಿದ್ದ ಈ ಮೂವರು ಬ್ಯಾಟ್ಸ್’ಮನ್ ಗಳು ಆರಂಭದಲ್ಲೇ ಪೆವಿಲಿಯನ್ ಸೇರಿದ್ದು, ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಕರಾಳ ನೆನಪು ಮರುಕಳಿಸುವಂತೆ ಮಾಡಿದೆ. ಯಾಕೆಂದರೆ ಚಾಂಪಿಯನ್ಸ್ ಟ್ರೋಫಿ ಫೈನಲ್’ನಲ್ಲೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಆ ಪಂದ್ಯವನ್ನು ಭಾರತ 180 ರನ್ ಗಳಿಂದ ಮುಗ್ಗರಿಸಿತ್ತು.

2017ರ ಚಾಂಪಿಯನ್ಸ್ ಟ್ರೋಫಿಯ ಕರಾಳ: 

2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್’ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಮುಗ್ಗರಿಸಿತ್ತು. ಆ ಪಂದ್ಯದಲ್ಲಿ ರೋಹಿತ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರೆ, ನಾಯಕ ಕೊಹ್ಲಿ 5 ರನ್ ಬಾರಿಸಿ ಮೊಹಮ್ಮದ್ ಆಮೀರ್’ಗೆ ವಿಕೆಟ್ ಒಪ್ಪಿಸಿದ್ದರು. ಇದಾದ ಬಳಿಕ ಉಳಿದ ಬ್ಯಾಟ್ಸ್’ಮನ್’ಗಳು ಹೆಚ್ಚುಹೊತ್ತು ಕ್ರೀಸ್’ನಲ್ಲಿ ಉಳಿದಿರಲಿಲ್ಲ.

ಕಾಕತಾಳೀಯವೆಂದರೆ ಆ ಬಳಿಕ ವಿಶ್ವಕಪ್ ಸೆಮಿಫೈನಲ್ ಪಂದ್ಯದ ವರೆಗೂ ರೋಹಿತ್ ಹಾಗೂ ಕೊಹ್ಲಿ ಇಬ್ಬರೂ ಒಂದೇ ಇನಿಂಗ್ಸ್’ನಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿರಲಿಲ್ಲ. ಒಟ್ಟಾರೆ ಇದೀಗ ಪಂದ್ಯದ ಫಲಿತಾಂಶ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಜತೆಯಾಟದ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆಯಿದೆ.