ಮ್ಯಾಂಚೆಸ್ಟರ್‌(ಜೂ.27): ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅಜೇಯ ಓಟ ಮುಂದುವರಿಸಿರುವ ಭಾರತಕ್ಕೆ ಗುರುವಾರ ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ವೆಸ್ಟ್‌ಇಂಡೀಸ್‌ ತಂಡದ ಸವಾಲು ಎದುರಾಗಲಿದೆ. ರೌಂಡ್‌ ರಾಬಿನ್‌ ಹಂತದಲ್ಲಿ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಭಾರತ, ತನ್ನ 6ನೇ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿ ಸೆಮಿಫೈನಲ್‌ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ಕಾತರಿಸುತ್ತಿದೆ.

ವೆಸ್ಟ್‌ಇಂಡೀಸ್‌ ಸೆಮೀಸ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದು, ತಂಡದ ಪಾಲಿಗೆ ಅಷ್ಟೊಂದು ಮಹತ್ವದ ಪಂದ್ಯ ಎನಿಸುತ್ತಿಲ್ಲ. ಆದರೂ ನಿರ್ಣಾಯಕ ಹಂತದಲ್ಲಿ ಭಾರತ ಯಾವುದೇ ಎದುರಾಳಿಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದ್ದಲ್ಲ ಎನ್ನುವುದನ್ನು ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೇ ತಿಳಿದುಕೊಂಡಿದ್ದ ಭಾರತ, ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕಿದೆ.

ವಿಶ್ವಕಪ್ 2019: ಕಿವೀಸ್ ಗೆಲುವಿನ ನಾಗಾಲೋಟಕ್ಕೆ ಪಾಕ್ ಬ್ರೇಕ್

ಜಾಧವ್‌ಗೆ ಬಡ್ತಿ?: ತಂಡದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಕೆಲ ಬದಲಾವಣೆಗಳಾಗುವ ನಿರೀಕ್ಷೆ ಇದೆ. ಆಫ್ಘನ್‌ ವಿರುದ್ಧ ಎಂ.ಎಸ್‌.ಧೋನಿ 52 ಎಸೆತಗಳಲ್ಲಿ 28 ರನ್‌ ಗಳಿಸಿದ್ದು, ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆಗಳನ್ನು ಎತ್ತಿ ತೋರಿಸಿದೆ. ಕೇದಾರ್‌ ಜಾಧವ್‌ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿ ತಂಡ ಗೌರವ ಮೊತ್ತ ತಲುಪಲು ನೆರವಾಗಿದ್ದರು. ಹೀಗಾಗಿ, ಜಾಧವ್‌ ಮೇಲ್ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಹಾರ್ದಿಕ್‌ ಪಾಂಡ್ಯಗೆ ಸರಿಯಾದ ಬೆಂಬಲ ಸಿಗುತ್ತಿಲ್ಲ. ಪ್ರತಿ ಎಸೆತದಲ್ಲೂ ಸಿಕ್ಸರ್‌ ಬಾರಿಸುವ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಮಧ್ಯ ಓವರ್‌ಗಳಲ್ಲಿ ರನ್‌ ರೇಟ್‌ ಕಾಯ್ದುಕೊಳ್ಳುವ ಒತ್ತಡ ಭಾರತದ ಮೇಲಿದ್ದು, ಸೆಮೀಸ್‌ಗೂ ಮುನ್ನ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

ಭುವಿ ವಾಪಸ್‌?: ಸ್ನಾಯು ಸೆಳೆತದ ಕಾರಣ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಭುವನೇಶ್ವರ್‌ ಕುಮಾರ್‌, ಫಿಟ್ನೆಸ್‌ ಕಂಡುಕೊಂಡಿದ್ದು ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಕ್ರಿಸ್‌ ಗೇಲ್‌ ವಿರುದ್ಧ ಭುವನೇಶ್ವರ್‌ ಉತ್ತಮ ದಾಖಲೆ ಹೊಂದಿದ್ದು, ಅವರನ್ನು ಆಯ್ಕೆ ಮಾಡಲು ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ಸಹ ಒಲವು ತೋರಿದ್ದಾರೆ ಎನ್ನಲಾಗಿದೆ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಮೊಹಮದ್‌ ಶಮಿಯನ್ನು ಕೈಬಿಡಲಾಗುತ್ತದೆಯೇ ಇಲ್ಲವೇ ವಿಜಯ್‌ ಶಂಕರ್‌ರನ್ನು ಹೊರಗಿಡಲು ನಿರ್ಧರಿಸಲಾಗುತ್ತದೆಯೇ ಎನ್ನುವ ಬಗ್ಗೆ ಕುತೂಹಲವಿದೆ.

ವಿಂಡೀಸ್‌ ವೇಗಿಗಳ ಭೀತಿ: ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌, ಜೇಸನ್‌ ಹೋಲ್ಡರ್‌ ಸೇರಿದಂತೆ ವಿಂಡೀಸ್‌ ವೇಗಿಗಳು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಾಡುವ ವಿಶ್ವಾಸದಲ್ಲಿದ್ದಾರೆ. ಬೌನ್ಸ್‌ ಹಾಗೂ ವೇಗದಿಂದಲೇ ಟೂರ್ನಿಯಲ್ಲಿ ಆರಂಭಿಕ ಯಶಸ್ಸು ಕಂಡಿದ್ದ ವಿಂಡೀಸ್‌, ಬಳಿಕ ಮಂಕಾಯಿತು. ಇದೀಗ ದಿಢೀರನೆ ಲಯ ಕಂಡುಕೊಂಡರೆ ಭಾರತೀಯರಿಗೆ ಸಮಸ್ಯೆಯಾಗಲಿದೆ. ಟೂರ್ನಿಯಲ್ಲಿ ಕ್ರಿಸ್‌ ಗೇಲ್‌ ಅಬ್ಬರದ ಇನ್ನಿಂಗ್ಸ್‌ ಇನ್ನೂ ಬಾಕಿ ಇದ್ದು, ತಮ್ಮ ವಿರುದ್ಧ ಅವರ ಆರ್ಭಟ ನಡೆಯದಿರಲಿ ಎಂದು ಕೊಹ್ಲಿ ಪ್ರಾರ್ಥಿಸುತ್ತಿದ್ದರೆ ಅಚ್ಚರಿಯಿಲ್ಲ. ಶಾಯ್‌ ಹೋಪ್‌, ಶಿಮ್ರೊನ್‌ ಹೆಟ್ಮೇಯರ್‌ ಮೇಲೆ ವಿಂಡೀಸ್‌ ಹೆಚ್ಚಿನ ವಿಶ್ವಾಸವಿಟ್ಟಿದ್ದು, ಈ ಇಬ್ಬರು ಕುಲ್ದೀಪ್‌ ಹಾಗೂ ಚಹಲ್‌ ವಿರುದ್ಧ ಹೇಗೆ ಆಡಲಿದ್ದಾರೆ ಎನ್ನುವುದು ಸಹ ಕುತೂಹಲಕ್ಕೆ ಕಾರಣವಾಗಿದೆ. ಆ್ಯಂಡ್ರೆ ರಸೆಲ್‌ ಟೂರ್ನಿಯಿಂದ ಹೊರಬಿದ್ದಿರುವ ಕಾರಣ, ಅವರ ಅನುಪಸ್ಥಿತಿ ವಿಂಡೀಸ್‌ ಪಡೆಯನ್ನು ಕಾಡಲಿದೆ.

ಆಫ್ಘಾನಿಸ್ತಾನ ತೋರಿದ ಹೋರಾಟಕ್ಕಿಂತ ಹೆಚ್ಚಿನ ಹೋರಾಟವನ್ನು ವಿಂಡೀಸ್‌ನಿಂದ ನಿರೀಕ್ಷೆ ಮಾಡಲಾಗಿದೆ. ಆದರೂ ಭಾರತವೇ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

ಪಿಚ್‌ ರಿಪೋರ್ಟ್‌

ಓಲ್ಡ್‌ ಟ್ರಾಫರ್ಡ್‌ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಈ ವಿಶ್ವಕಪ್‌ನಲ್ಲಿ ಇಲ್ಲಿ ನಡೆದಿರುವ ಮೂರು ಪಂದ್ಯಗಳಲ್ಲಿ ಉತ್ತಮ ಮೊತ್ತ ದಾಖಲಾಗಿದೆ. ಮೂರೂ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡವೇ ಗೆಲುವು ಸಾಧಿಸಿದೆ. 3 ಪಂದ್ಯಗಳ ಪೈಕಿ 2ರಲ್ಲಿ 300ಕ್ಕೂ ಹೆಚ್ಚು ಮೊತ್ತ ದಾಖಲಾಗಿದೆ.

ಒಟ್ಟು ಮುಖಾಮುಖಿ: 126

ಭಾರತ: 59

ವಿಂಡೀಸ್‌: 62

ಟೈ: 02

ಫಲಿತಾಂಶವಿಲ್ಲ: 03

ವಿಶ್ವಕಪ್‌ನಲ್ಲಿ ಭಾರತ vs ವಿಂಡೀಸ್‌

ಪಂದ್ಯ: 08

ಭಾರತ: 05

ವಿಂಡೀಸ್‌: 03

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ವಿಜಯ್‌ ಶಂಕರ್‌, ಎಂ.ಎಸ್‌.ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಮೊಹಮದ್‌ ಶಮಿ, ಕುಲ್ದೀಪ್‌ ಯಾದವ್‌, ಜಸ್ಪ್ರೀತ್‌ ಬುಮ್ರಾ, ಯಜುವೇಂದ್ರ ಚಹಲ್‌.

ವಿಂಡೀಸ್‌: ಕ್ರಿಸ್‌ ಗೇಲ್‌, ಎವಿನ್‌ ಲೆವಿಸ್‌, ಶಾಯ್‌ ಹೋಪ್‌, ನಿಕೋಲಸ್‌ ಪೂರನ್‌, ಶಿಮ್ರೊನ್‌ ಹೆಟ್ಮೇಯರ್‌, ಜೇಸನ್‌ ಹೋಲ್ಡರ್‌(ನಾಯಕ), ಕಾರ್ಲೋಸ್‌ ಬ್ರಾಥ್‌ವೇಟ್‌, ಆಶ್ಲೆ ನರ್ಸ್‌, ಕೀಮಾರ್‌ ರೋಚ್‌, ಶೆಲ್ಡನ್‌ ಕಾಟ್ರೆಲ್‌, ಓಶೇನ್‌ ಥಾಮಸ್‌.

ಸ್ಥಳ: ಮ್ಯಾಂಚೆಸ್ಟರ್‌
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1