ಬರ್ಮಿಂಗ್ ಹ್ಯಾಮ್[ಜೂ.26]: ಸತತ ಆರು ಪಂದ್ಯಗಳನ್ನು ಗೆದ್ದು ಗೆಲುವಿನ ನಾಗಾಲೋಟ ಮುಂದುವರೆಸಿದ್ದ ನ್ಯೂಜಿಲೆಂಡ್ ತಂಡಕ್ಕೆ ಆಘಾತ ನೀಡುವಲ್ಲಿ ಪಾಕಿಸ್ತಾನ ತಂಡ ಯಶಸ್ವಿಯಾಗಿದೆ. ಕಿವೀಸ್ ಪಡೆಯನ್ನು 6 ವಿಕೆಟ್ ಗಳಿಂದ ಮಣಿಸಿದ ಸರ್ಫರಾಜ್ ಅಹ್ಮಮದ್ ಪಡೆ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಶ್ರೀಲಂಕಾ ತಂಡವನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೇರಿದೆ. 

ವಿಶ್ವಕಪ್ 2019: ಧವನ್ ದಾಖಲೆ ಅಳಿಸಿಹಾಕಿದ ಬಾಬರ್ ಅಜಂ..!

ಮೊದಲಿಗೆ ನ್ಯೂಜಿಲೆಂಡ್ ತಂಡವನ್ನು ಕೇವಲ 237 ರನ್ ಗಳಿಗೆ ನಿಯಂತ್ರಿಸಿದ್ದ ಪಾಕಿಸ್ತಾನ ಆಬಳಿಕ ಅನಾಯಾಸವಾಗಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು. ಬಾಬರ್ ಅಜಂ[101], ಹ್ಯಾರಿಸ್ ಸೋಹೆಲ್[68]  ಜೋಡಿ ಭರ್ಜರಿ ಶತಕ[126]ದ ಜತೆಯಾಟವಾಡುವ ಮೂಲಕ ಪಾಕ್ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಆರಂಭಿಕ ಆಘಾತದ ಹೊರತಾಗಿಯೂ ಮೂರನೇ ವಿಕೆಟ್ ಗೆ ಬಾಬರ್ ಅಜಂ ಹಾಗೂ ಮೊಹಮ್ಮದ್ ಹಫೀಜ್ ಜೋಡಿ 66 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ನೆಲಕಚ್ಚಿ ಆಡುತ್ತಿದ್ದ ಹಫೀಜ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಫರ್ಗ್ಯೂಸನ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ದಡ ಸೇರಿಸಿದ ಬಾಬರ್-ಹ್ಯಾರಿಸ್: ಆಲ್ರೌಂಡರ್ ಹಫೀಜ್ ವಿಕೆಟ್ ಒಪ್ಪಿಸುವಾಗ ಪಾಕಿಸ್ತಾನ 3 ವಿಕೆಟ್ ಕಳೆದುಕೊಂಡು 110 ರನ್ ಬಾರಿಸಿತ್ತು. ಈ ವೇಳೆ ಜತೆಯಾದ ಕಳೆದ ಪಂದ್ಯದ ಹೀರೋ ಹ್ಯಾರಿಸ್ ಸೋಹೆಲ್- ಬಾಬರ್ ಅಜಂ ನ್ಯೂಜಿಲೆಂಡ್ ಬೌಲರ್’ಗಳನ್ನು ಮನಬಂದಂತೆ ದಂಡಿಸಿದರು. ಪಂದ್ಯದ ಕೊನೆಯವರೆಗೂ ಎಚ್ಚರಿಕೆಯ ಆಟವಾಡಿದ ಈ ಜೋಡಿ ನಾಲ್ಕನೇ ವಿಕೆಟ್ ಗೆ 126 ರನ್ ಗಳ ಜತೆಯಾಟ ನಿಭಾಯಿಸಿದರು. ಬಾಬರ್ ಅಜಂ 124 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಬಾಬರ್ ಅಜಂ ವೃತ್ತಿ ಜೀವನದ 10ನೇ ಶತಕವಾಗಿದೆ. ಬಾಬರ್ ಸೊಗಸಾದ ಇನಿಂಗ್ಸ್ ನಲ್ಲಿ 11 ಸೊಗಸಾದ ಬೌಂಡರಿಗಳು ಸೇರಿದ್ದವು. ಬಾಬರ್’ಗೆ ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಹ್ಯಾರಿಸ್ ಸೋಹೆಲ್ 68 ರನ್ ಸಿಡಿಸಿ ಕೊನೆಯಲ್ಲಿ ರನೌಟ್ ಆದರು.  

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭದಲ್ಲೇ ಶಾಹೀನ್ ಅಫ್ರಿದಿ ಆಘಾತ ನೀಡಿದರು. ಒಂದು ಹಂತದಲ್ಲಿ 83 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಿವೀಸ್ ತಂಡಕ್ಕೆ ಜೇಮ್ಸ್ ನೀಶಮ್ ಅಜೇಯ 97 ರನ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್ ಹೋಮ್ [64] ಆಕರ್ಷಕ ಅರ್ಧಶತಕಗಳ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. 

ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್: 237/6
ಜೇಮ್ಸ್ ನೀಶಮ್:97*
ಶಾಹೀನ್ ಅಫ್ರಿದಿ: 28/3

ಪಾಕಿಸ್ತಾನ: 241/4
ಬಾಬರ್ ಅಜಂ: 101*
ಕೇನ್ ವಿಲಿಯಮ್ಸನ್: 39/1