ವಿಶ್ವಕಪ್ ಟೂರ್ನಿಯ ಕ್ಷಣ-ಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲಂಡನ್[ಜು.04]: 12ನೇ ಆವೃತ್ತಿಯ ವಿಶ್ವಕಪ್ ಟೂರ್ನಿ ನಿರ್ಣಾಯಕಘಟ್ಟದತ್ತ ಬಂದು ನಿಂತಿದೆ. ನ್ಯೂಜಿಲೆಂಡ್ ತಂಡವನ್ನು 119 ರನ್ ಗಳಿಂದ ಮಣಿಸಿದ ಆತಿಥೇಯ ಇಂಗ್ಲೆಂಡ್ ಬರೋಬ್ಬರಿ 27 ವರ್ಷಗಳ ಬಳಿಕ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಪಾಕಿಸ್ತಾನದ ಸೆಮೀಸ್ ಕನಸು ಬಹುತೇಕ ನುಚ್ಚುನೂರಾಗಿದೆ.

ನ್ಯೂಜಿಲೆಂಡ್ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಇಂಗ್ಲೆಂಡ್

ಇದರ ಹೊರತಾಗಿಯೂ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಆದರೆ ಇದು ಸಾಧ್ಯವಾಗಬೇಕಿದ್ದರೆ ಪವಾಡವೇ ನಡೆಯಬೇಕು. ಪಾಕಿಸ್ತಾನ ತಂಡ ಇದುವರೆಗೂ ಆಡಿದ 8 ಪಂದ್ಯಗಳಲ್ಲಿ 4 ಗೆಲುವು, ಮೂರು ಸೋಲು ಮತ್ತು ಒಂದು ಪಂದ್ಯ ರದ್ದಾಗಿದ್ದರಿಂದ ಒಟ್ಟು 9 ಅಂಕ ಗಳಿಸಿದ್ದು, ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ಸಾಕಷ್ಟು ಬೆವರು ಹರಿಸಬೇಕಿದೆ. ನ್ಯೂಜಿಲೆಂಡ್ ತಂಡ ಸದ್ಯ 11 ಅಂಕ ಗಳಿಸಿದ್ದು, ಇದನ್ನು ಸರಿಗಟ್ಟಲು ಪಾಕಿಸ್ತಾನ ತಂಡ ಬಾಂಗ್ಲಾ ವಿರುದ್ಧ ಕಂಡು-ಕೇಳರಿಯದ ರೀತಿಯಲ್ಲಿ ಜಯ ಸಾಧಿಸಬೇಕಿದೆ. 

ನ್ಯೂಜಿಲೆಂಡ್ ಹೊರದಬ್ಬಿ ಸೆಮೀಸ್ ಪ್ರವೇಶಿಸಲು ಪಾಕಿಸ್ತಾನ ಏನು ಮಾಡಬೇಕು?

ಇನ್ನುಳಿದ ಪಂದ್ಯಗಳಲ್ಲಿ ಏನಾದರೆ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲು ಸಾಧ್ಯ ಎನ್ನುವ ಲೆಕ್ಕಾಚಾರ ಕೇಳಲು ಚೆನ್ನಾಗಿದೆಯೇ ಹೊರತು ಪ್ರಾಯೋಗಿಕವಾಗಿ ಅಸಾಧ್ಯ ಎನ್ನುವುದು ಈ ಕೆಳಗಿನ ಅಂಕಿ ಅಂಶ ನೋಡಿದರೆ ನಿಮಗೂ ಅರ್ಥವಾಗಲಿದೆ. ಒಂದೊಮ್ಮೆ ಬಾಂಗ್ಲಾ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರೆ ಮೊದಲ ಎಸೆತಕ್ಕೂ ಮೊದಲೇ ಪಾಕಿಸ್ತಾನ ವಿಶ್ವಕಪ್ ನಿಂದ ಹೊರಬೀಳಲಿದೆ. 

ಹೀಗಾದರೆ ಮಾತ್ರ ಪಾಕ್ ಸೆಮೀಸ್ ಸಾಧ್ಯ:

ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿದರೆ:

* ಪಾಕಿಸ್ತಾನ 308 ರನ್ ಗಳಿಸಬೇಕು. ಆ ಬಳಿಕ ಬಾಂಗ್ಲಾದೇಶವನ್ನು ಶೂನ್ಯ[0] ರನ್ ಗಳಿಗೆ ಆಲೌಟ್ ಮಾಡಿ 308 ರನ್ ಗಳ ಗೆಲುವು ಸಾಧಿಸಬೇಕು. 308 ರನ್ ಗಳಿಗಿಂತ ಕಡಿಮೆ ರನ್ ಗಳಿಸಿದರೆ, ಪಾಕ್ ಸೆಮೀಸ್’ಗೇರಲು ಸಾಧ್ಯವಿಲ್ಲ.

* ಇನ್ನು ಪಾಕ್ 350 ರನ್ ಗಳಿಸಿದರೆ, ಬಾಂಗ್ಲಾವನ್ನು ಕೇವಲ 42 ರನ್ ಗಳಿಗೆ ಆಲೌಟ್ ಮಾಡುವುದರ ಮೂಲಕ 312 ರನ್’ಗಳಿಂದ ಜಯ ಸಾಧಿಸಿದರೆ ಸರ್ಫರಾಜ್ ಪಡೆಗೆ ಸೆಮೀಸ್ ಪ್ರವೇಶ ಸಾಧ್ಯ. 

* ಪಾಕಿಸ್ತಾನ ಒಂದುವೇಳೆ 400 ರನ್ ಬಾರಿಸಿದರೆ, ಬಾಂಗ್ಲಾವನ್ನು ಕೇವಲ 84 ರನ್’ಗಳಿಗೆ ಆಲೌಟ್ ಮಾಡುವ ಮೂಲಕ 316 ರನ್ ಗಳಿಂದ ಜಯ ಸಾಧಿಸಿದರೆ, ಪಾಕಿಸ್ತಾನವು ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಅಂತಿಮ ನಾಲ್ಕರಘಟ್ಟ ಪ್ರವೇಶಿಸಲಿದೆ.

ಒಂದು ವೇಳೆ ಬಾಂಗ್ಲಾ ಮೊದಲು ಬ್ಯಾಟ್ ಮಾಡಿದರೆ..?

* ಬಾಂಗ್ಲಾದೇಶ ಒಂದು ಸಾವಿರಕ್ಕೂ ಹೆಚ್ಚು ರನ್ ಬಾರಿಸಬೇಕು. ಆ ಗುರಿಯನ್ನು ಪಾಕಿಸ್ತಾನ ಒಂದೇ ಓವರ್’ನಲ್ಲಿ ಗುರಿಮುಟ್ಟಬೇಕು [*ಇವೆರಡೂ ಸಾಧ್ಯವೇ ಇಲ್ಲ] 

* ಪ್ರಸ್ತುತ ನ್ಯೂಜಿಲೆಂಡ್ +0.175 ನೆಟ್ ರನ್ ರೇಟ್ ಹೊಂದಿದೆ. ಪಾಕಿಸ್ತಾನ ಈಗ -0.792 ನೆಟ್ ರನ್ ರೇಟ್ ಹೊಂದಿದೆ. ಒಂದೇ ಪಂದ್ಯದಲ್ಲಿ ಇಷ್ಟೊಂದು ಅಂತರವನ್ನು ದಾಟುವುದು ಅಸಾಧ್ಯವಾದ ಮಾತು.