ವಿಶ್ವಕಪ್ ಟೂರ್ನಿಯ ಕ್ಷಣ-ಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಚೆಸ್ಟರ್ ಲೆ ಸ್ಟ್ರೀಟ್(ಜು.03): ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್ ಸೆಮಿಫೈನಲ್ ಸ್ಥಾನ ಖಚಿತಪಡಿಸಿದೆ. ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ119 ರನ್ ಗೆಲುವು ಸಾಧಿಸಿದ ಇಂಗ್ಲೆಂಡ್ 12 ಅಂಕದೊಂದಿಗೆ ಸೆಮೀಸ್‌ಗೆ ಲಗ್ಗೆ ಇಟ್ಟಿದೆ. ಇತ್ತ ನ್ಯೂಜಿಲೆಂಡ್ 11 ಅಂಕದೊಂದಿಗೆ ಸದ್ಯ 4ನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ ಗೆಲುವಿನೊಂದಿಗೆ ಪಾಕಿಸ್ತಾನ  ಸೆಮಿಫೈನಲ್ ಕನಸು ಬಹುತೇಕ ಅಂತ್ಯಗೊಂಡಿದೆ.  ನ್ಯೂಜಿಲೆಂಡ್ ಹಿಂದಿಕ್ಕಿ ಸೆಮಿಫೈನಲ್‌ಗೇರಲು ಪಾಕಿಸ್ತಾನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕನಿಷ್ಠ 316 ರನ್‌ಗಳಿಂದ ಗೆಲುವು ಸಾಧಿಸಬೇಕು. ಇದು ಅಸಾಧ್ಯ.

ಗೆಲುವಿಗೆ 306 ರನ್ ಟಾರ್ಗೆಟ್ ಪಡೆದ  ನ್ಯೂಜಿಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತು. ಹೆನ್ರಿ ನಿಕೋಲ್ಸ್ ಶೂನ್ಯಕ್ಕೆ ಔಟಾಗಿದ್ದಾರೆ. ಮಾರ್ಟಿನ್ ಗಪ್ಟಿಲ್ 8 ರನ್ ಸಿಡಿಸಿ ಔಟಾದರು. 14 ರನ್‌ಗೆ 2 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ ಸಂಕಷ್ಟಕ್ಕೆ ಸಿಲುಕಿತು. 27 ರನ್ ಸಿಡಿಸಿ ಆಸರೆಯಾಗಿದ್ದ ನಾಯಕ ಕೇನ್ ವಿಲಿಯಮ್ಸನ್ ರನೌಟ್‌ಗೆ ಬಲಿಯಾದರು. ಅಷ್ಟರಲ್ಲೇ ನ್ಯೂಜಿಲೆಂಡ್ ಗೆಲುವಿನ ಹಾದಿ ಕಠಿಣವಾಯಿತು.

ನಾಯಕನ ಬೆನ್ನಲ್ಲೇ ರಾಸ್ ಟೇಲರ್ ಕೂಡ 28 ರನ್ ಸಿಡಿಸಿ ರನೌಟ್ ಆದರು. ಟಾಮ್ ಲಾಥಮ್ ಹೋರಾಟ ಮುಂದುವರಿಸಿದರೆ, ಜೇಮ್ಸ್ ನೀಶನ್ ಕೊಲಿನ್ ಡೆ ಗ್ರ್ಯಾಂಡ್‌ಹೊಮ್ಮೆ ಆಸರೆಯಾಗಲಿಲ್ಲ. ಟಾಮ್ ಲಾಥಮ್ 57 ರನ್ ಸಿಡಿಸಿ ಔಟಾದರು. ಮಿಚೆಲ್ ಸ್ಯಾಂಟ್ನರ್ ಮ್ಯಾಟ್ ಹೆನ್ರಿ ಅಬ್ಬರಿಸಲಿಲ್ಲ. ಟ್ರೆಂಟ್ ಬೌಲ್ಟ್ ವಿಕೆಟ್ ಪತನದೊಂದಿಗೆ ನ್ಯೂಜಿಲೆಂಡ್ 45 ಓವರ್‌ಗಳಲ್ಲಿ 186 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ 119 ರನ್ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿತು.