ಬರ್ಮಿಂಗ್‌ಹ್ಯಾಮ್‌[ಜೂ.30]: ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಕಂಗೊಳಿಸಲಿರುವ ಭಾರತ, ಭಾನುವಾರ ಐಸಿಸಿ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ ಪ್ರವೇಶಿಸುವ ಉತ್ಸಾಹದಲ್ಲಿದೆ. ಇಲ್ಲಿನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಸೆಣಸಲಿರುವ ಭಾರತ, ತನ್ನ ಅಜೇಯ ಓಟ ಮುಂದುವರಿಸಲು ಎದುರು ನೋಡುತ್ತಿದೆ.

ನೂತನ ಜರ್ಸಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಕಂಡಿದ್ದು ಹೀಗೆ!

6 ಪಂದ್ಯಗಳಲ್ಲಿ 5 ಗೆಲುವುಗಳನ್ನು ಸಾಧಿಸಿರುವ ಭಾರತ, 11 ಅಂಕಗಳೊಂದಿಗೆ ನಾಕೌಟ್‌ ಹಂತದಲ್ಲಿ ಈಗಾಗಲೇ ಒಂದು ಹೆಜ್ಜೆ ಇರಿಸಿದೆ. ಈ ಪಂದ್ಯದಲ್ಲಿ ಗೆದ್ದರೆ ಉಪಾಂತ್ಯಕ್ಕೆ ಅಧಿಕೃತ ಪ್ರವೇಶವಾಗಲಿದೆ.  ಕಳೆದ ವಾರದ ವರೆಗೂ ಟ್ರೋಫಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದೆನಿಸಿಕೊಳ್ಳುತ್ತಿದ್ದ ಇಂಗ್ಲೆಂಡ್‌ ಸತತ 2 ಪಂದ್ಯಗಳಲ್ಲಿ ಸೋಲುಂಡು ಒತ್ತಡಕ್ಕೆ ಸಿಲುಕಿದೆ. ರೌಂಡ್‌ ರಾಬಿನ್‌ ಹಂತದಲ್ಲೇ ನಿರ್ಗಮಿಸುವ ಆತಂಕಕ್ಕೂ ಸಿಲುಕಿದೆ. ಶ್ರೀಲಂಕಾ, ಆಸ್ಪ್ರೇಲಿಯಾಗೆ ಶರಣಾಗಿದ್ದ ಇಂಗ್ಲೆಂಡ್‌, ಭಾರತದ ಮುಂದೆಯೂ ಮಂಡಿಯೂರಿದರೆ ಅಚ್ಚರಿಯಿಲ್ಲ. ಕಾರಣ, ಭಾರತ ಪ್ರಚಂಡ ಲಯದಲ್ಲಿದೆ. ಜತೆಗೆ ಇಲ್ಲಿನ ವಾತಾವರಣ ಭಾರತೀಯ ಉಪಖಂಡದಂತೆ ಇರಲಿದ್ದು, ಕೊಹ್ಲಿ ಪಡೆ ಇದರ ಸಂಪೂರ್ಣ ಲಾಭ ಪಡೆಯಲು ಕಾಯುತ್ತಿದೆ.

ಹೊಸ ಜೆರ್ಸಿಗೆ ಕೊಹ್ಲಿ ನೀಡಿದ ಮಾರ್ಕ್ ಇದು...!

ಇಬ್ಬರು ಮಣಿಕಟ್ಟು ಸ್ಪಿನ್ನರ್‌ಗಳಾದ ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ ಜತೆ ಅಪಾಯಕಾರಿ ವೇಗಿಗಳಾದ ಜಸ್ಪ್ರೀತ್‌ ಬುಮ್ರಾ ಹಾಗೂ ಮೊಹಮದ್‌ ಶಮಿಯನ್ನು ಎದುರಿಸುವುದು ಇಂಗ್ಲೆಂಡ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಜಾನಿ ಬೇರ್‌ಸ್ಟೋವ್‌, ಜೋ ರೂಟ್‌, ಇಯಾನ್‌ ಮಾರ್ಗನ್‌, ಜೋಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ಮೋಯಿನ್‌ ಅಲಿಯಂತಹ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರೂ, ಇಂಗ್ಲೆಂಡ್‌ ಪಾಳಯದಲ್ಲಿ ಆತಂಕ ಹೆಚ್ಚುತ್ತಿದೆ.

ಮತ್ತೊಂದೆಡೆ ಟೂರ್ನಿಯಲ್ಲಿ ಭಾರತ ಇನ್ನೂ ತನ್ನ ಶ್ರೇಷ್ಠ ಪ್ರದರ್ಶನವನ್ನು ನೀಡಿಲ್ಲ. ಆದರೂ ಪಂದ್ಯಗಳನ್ನು ಗೆಲ್ಲುತ್ತಾ ಬಂದಿದೆ. ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆರಂಭಿಕರು ವೇಗವಾಗಿ ರನ್‌ ಗಳಿಸಲು ವಿಫಲರಾಗುತ್ತಿದ್ದಾರೆ. 4ನೇ ಕ್ರಮಾಂಕಕ್ಕೆ ವಿಜಯ್‌ ಶಂಕರ್‌ ಸೂಕ್ತ ಆಯ್ಕೆಯೇ ಎನ್ನುವ ಬಗ್ಗೆ ಇನ್ನೂ ಗೊಂದಲವಿದೆ. ಹೀಗಿದ್ದರೂ, ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿ ತೋರುತ್ತಿದೆ. ಜೋಫ್ರಾ ಆರ್ಚರ್‌ ನೇತೃತ್ವದ ಇಂಗ್ಲೆಂಡ್‌ ಬೌಲಿಂಗ್‌ ಪಡೆ ಭಾರತೀಯರನ್ನು ನಿಯಂತ್ರಿಸಬೇಕಿದ್ದರೆ ಅಸಾಧಾರಣ ಪ್ರದರ್ಶನ ತೋರಬೇಕಿದೆ.

ಪಿಚ್‌ ರಿಪೋರ್ಟ್‌

ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದ ಪಿಚ್‌ ಬೌಲರ್‌ಗಳಿಗೆ ನೆರವು ನೀಡಲಿದ್ದು, ಇಲ್ಲಿ ನಡೆದಿರುವ ಈ ವಿಶ್ವಕಪ್‌ನ 2 ಪಂದ್ಯಗಳಲ್ಲಿ ಬೌಲರ್‌ಗಳೇ ಪ್ರಾಬಲ್ಯ ಮೆರೆದಿದ್ದಾರೆ. ಎರಡೂ ಪಂದ್ಯಗಳಲ್ಲಿ ಮೊದಲು ಫೀಲ್ಡ್‌ ಮಾಡಿದ ತಂಡ ಗೆಲುವು ಸಾಧಿಸಿದೆ. ಎರಡೂ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ 250 ರನ್‌ ದಾಟಿರಲಿಲ್ಲ. ಗುರಿ ಬೆನ್ನತ್ತಿದ ತಂಡಗಳು ಕೊನೆ ಓವರ್‌ನಲ್ಲಿ ಪಂದ್ಯ ಗೆದ್ದಿದ್ದವು. ಹೀಗಾಗಿ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.


ಒಟ್ಟು ಮುಖಾಮುಖಿ: 99

ಭಾರತ: 53

ಇಂಗ್ಲೆಂಡ್‌: 41

ಟೈ: 02

ಫಲಿತಾಂಶವಿಲ್ಲ: 03

ವಿಶ್ವಕಪ್‌ನಲ್ಲಿ ಭಾರತ vs ಇಂಗ್ಲೆಂಡ್‌

ಪಂದ್ಯ: 07

ಭಾರತ: 03

ಇಂಗ್ಲೆಂಡ್‌: 03

ಟೈ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ವಿಜಯ್‌ ಶಂಕರ್‌, ಎಂ.ಎಸ್‌.ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಮೊಹಮದ್‌ ಶಮಿ, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬೂಮ್ರಾ, ಯಜುವೇಂದ್ರ ಚಹಲ್‌.

ಇಂಗ್ಲೆಂಡ್‌: ಜಾನಿ ಬೇರ್‌ಸ್ಟೋವ್‌, ಜೇಮ್ಸ್‌ ವಿನ್ಸ್‌, ಜೋ ರೂಟ್‌, ಇಯಾನ್‌ ಮಾರ್ಗನ್‌ (ನಾಯಕ), ಜೋಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ಮೋಯಿನ್‌ ಅಲಿ, ಕ್ರಿಸ್‌ ವೋಕ್ಸ್‌, ಜೋಫ್ರಾ ಆರ್ಚರ್‌, ಆದಿಲ್‌ ರಶೀದ್‌, ಮಾರ್ಕ್ ವುಡ್‌.

ಸ್ಥಳ: ಬರ್ಮಿಂಗ್‌ಹ್ಯಾಮ್‌
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1