ಸೌಥಾಂಪ್ಟನ್‌[ಜೂ.22]: ಭಾರತದ ಬಲಿಷ್ಠ ಬ್ಯಾಟಿಂಗ್‌ ಪಡೆ ಶನಿವಾರ ಕೆಲ ಬ್ಯಾಟಿಂಗ್‌ ದಾಖಲೆಗಳನ್ನು ಛಿದ್ರಗೊಳಿಸಬಹುದು. ಕಾರಣ, ಇಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಭಾರತ ದುರ್ಬಲ ಆಫ್ಘಾನಿಸ್ತಾನ ವಿರುದ್ಧ ಸೆಣಸಲಿದ್ದು, ಮತ್ತೊಂದು ಏಕಪಕ್ಷೀಯ ಪಂದ್ಯವಾಗುವ ಸಾಧ್ಯತೆ ಹೆಚ್ಚಿದೆ.

ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಭಾರತ ತಂಡಕ್ಕೆ ಈ ಪಂದ್ಯ ಹೆಚ್ಚುವರಿ ನೆಟ್ಸ್‌ ಅಭ್ಯಾಸ ಅವಧಿಯಾಗಲಿದೆ. ಪ್ರಚಂಡ ಲಯದಲ್ಲಿರುವ ಭಾರತ, ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಸೆಮಿಫೈನಲ್‌ ಹಾದಿ ಸುಗಮಗೊಳಿಸಿಕೊಳ್ಳಲು ಎದುರು ನೋಡುತ್ತಿದೆ. ಜತೆಗೆ ನೆಟ್‌ ರನ್‌ ಉತ್ತಮಗೊಳಿಸಿಕೊಳ್ಳಲು ಸಹ ಈ ಪಂದ್ಯ ಉತ್ತಮ ಅವಕಾಶವಾಗಲಿದೆ.

ಇಂಡೋ-ಅಫ್ಘಾನ್ ಪಂದ್ಯ:ಸಚಿನ್, ಲಾರಾ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿ!

ವಿವಾದಗಳು, ಮೈದಾನದೊಳಗೆ ಹಾಗೂ ಹೊರಗೆ ಕಳಪೆ ನಿರ್ಧಾರಗಳು, ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ವೈಫಲ್ಯ ಹೀಗೆ ಆಫ್ಘಾನಿಸ್ತಾನದ ಪ್ರದರ್ಶನ ಗುಣಮಟ್ಟ ಕಳಪೆಯಿಂದ ಹೀನಾಯ ಸ್ಥಿತಿಗೆ ತಲುಪಿದೆ. ಆಡಿರುವ 5 ಪಂದ್ಯಗಳಲ್ಲಿ ಬರೀ ಸೋಲುಗಳನ್ನೇ ಕಂಡಿರುವ ಆಫ್ಘನ್ನರಿಗೆ ವಿಶ್ವ ಶ್ರೇಷ್ಠ ತಂಡದ ವಿರುದ್ಧ ಕಠಿಣ ಸಮಯ ಎದುರಾಗಲಿದ್ದು, ಸತತ 6ನೇ ಸೋಲು ಸಿದ್ಧಗೊಳ್ಳಬೇಕಿದೆ.

ಭಾರತ ತಂಡ ಮೊದಲ ಪಂದ್ಯದಿಂದಲೇ ಕಠಿಣ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುತ್ತಾ ಬಂದಿದೆ. ದಕ್ಷಿಣ ಆಫ್ರಿಕಾ, ಆಸ್ಪ್ರೇಲಿಯಾ ಹಾಗೂ ಪಾಕಿಸ್ತಾನವನ್ನು ಬಗ್ಗುಬಡಿದಿರುವ ಭಾರತ, ರೌಂಡ್‌ ರಾಬಿನ್‌ ಹಂತದಲ್ಲಿ ಅಜೇಯವಾಗಿ ಉಳಿಯುವ ಗುರಿ ಹೊಂದಿದೆ. ತಂಡದ ಪ್ರಾಬಲ್ಯ ಎಷ್ಟಿದೆ ಎಂದರೆ ಇಬ್ಬರು ತಾರಾ ಆಟಗಾರರ ಸೇವೆ ಅಲಭ್ಯವಾದರೂ ಪ್ರದರ್ಶನದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ. ಶಿಖರ್‌ ಧವನ್‌ ಸ್ಥಾನವನ್ನು ಕೆ.ಎಲ್‌.ರಾಹುಲ್‌ ಸಮರ್ಥವಾಗಿ ತುಂಬಿದ್ದಾರೆ. ಭುವನೇಶ್ವರ್‌ ಕುಮಾರ್‌ ಜಾಗಕ್ಕೆ ಮೊಹಮದ್‌ ಶಮಿ ಬರಲಿದ್ದಾರೆ. ಆಲ್ರೌಂಡರ್‌ ವಿಜಯ್‌ ಶಂಕರ್‌ ಸಹ ಗಾಯದ ಸಮಸ್ಯೆ ಎದುರಿಸುತ್ತಿದ್ದು, ಒಂದೊಮ್ಮೆ ಈ ಪಂದ್ಯಕ್ಕೆ ಅಲಭ್ಯರಾದರೂ ಯಾವುದೇ ಆತಂಕವಿಲ್ಲ ಎಂದು ತಂಡದ ಮೂಲಗಳು ಸ್ಪಷ್ಟಪಡಿಸಿವೆ.

ಬಲಿಷ್ಠ ಇಂಗ್ಲೆಂಡ್‌ಗೆ ಲಂಕಾ ಶಾಕ್- ಟೂರ್ನಿಯಲ್ಲಿ ಭರ್ಜರಿ ಕಮ್‌ಬ್ಯಾಕ್!

ಪಂತ್‌-ಕಾರ್ತಿಕ್‌ ನಡುವೆ ಪೈಪೋಟಿ!: ವಿಜಯ್‌ ಶಂಕರ್‌ಗೆ ವಿಶ್ರಾಂತಿ ನೀಡಿದರೆ ಅವರ ಸ್ಥಾನದಲ್ಲಿ ರಿಷಭ್‌ ಪಂತ್‌ ಇಲ್ಲವೇ ದಿನೇಶ್‌ ಕಾರ್ತಿಕ್‌ರನ್ನು ಆಡಿಸುವ ಬಗ್ಗೆ ಭಾರತ ತಂಡಕ್ಕೆ ಗೊಂದಲವಿದೆ. ಆಫ್ಘನ್‌ ಬೌಲರ್‌ಗಳಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಕಡಿಮೆ ಇರುವ ಕಾರಣ, ಪಂತ್‌ಗೆ ಅವಕಾಶ ಸಿಕ್ಕರೂ ಸಿಗಬಹುದು. 3 ಪಂದ್ಯಗಳಲ್ಲಿ ಕೇವಲ 8 ಎಸೆತಗಳನ್ನು ಮಾತ್ರ ಎದುರಿಸಲು ಅವಕಾಶ ಪಡೆದಿರುವ ಕೇದಾರ್‌ ಜಾಧವ್‌ಗೂ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಡ್ತಿ ಸಿಗುವ ನಿರೀಕ್ಷೆ ಇದೆ. ಭಾರತದ ಅಗ್ರ ಕ್ರಮಾಂಕ ವೈಫಲ್ಯ ಕಂಡ ದಿನದಂದು ಕೇದಾರ್‌ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. ಹೀಗಾಗಿ ಅಭ್ಯಾಸದ ಕೊರತೆ ಎದುರಾಗದಂತೆ ಎಚ್ಚರ ವಹಿಸುವುದು ತಂಡದ ಆಡಳಿತದ ಜವಾಬ್ದಾರಿಯಾಗಿದೆ.

ಅನನುಭವಿ ಆಫ್ಘನ್ನರಿಗೆ ಕುಲ್ದೀಪ್‌ ಹಾಗೂ ಚಹಲ್‌ ಸ್ಪಿನ್‌ ದಾಳಿ ಎದುರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಜಸ್ಪ್ರೀತ್‌ ಬುಮ್ರಾರ ಭಯಾನಕ ಯಾರ್ಕರ್‌ಗಳ ಭಯವೂ ಆಫ್ಘಾನಿಸ್ತಾನವನ್ನು ಕಾಡುತ್ತಿದೆ.

ಪಿಚ್‌ ರಿಪೋರ್ಟ್‌

ರೋಸ್‌ ಬೌಲ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಭಾರತ ಮೊದಲು ಬ್ಯಾಟ್‌ ಮಾಡಿದರೆ ರನ್‌ ಹೊಳೆ ನಿರೀಕ್ಷಿಸಬಹುದು. ಆದರೆ ಇಲ್ಲಿ ನಡೆದಿರುವ 2 ವಿಶ್ವಕಪ್‌ ಪಂದ್ಯಗಳಲ್ಲಿ ಮೊದಲು ಫೀಲ್ಡ್‌ ಮಾಡಿದ ತಂಡ ಗೆಲುವು ಸಾಧಿಸಿದೆ. ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆ ಇದೆ.

ಒಟ್ಟು ಮುಖಾಮುಖಿ: 02

ಭಾರತ: 01

ಆಫ್ಘಾನಿಸ್ತಾನ: 00

ಟೈ: 01

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ರಿಷಭ್‌ ಪಂತ್‌, ಎಂ.ಎಸ್‌.ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿ.

ಆಫ್ಘಾನಿಸ್ತಾನ: ನೂರ್‌ ಅಲಿ, ಗುಲ್ಬದಿನ್‌ ನೈಬ್‌ (ನಾಯಕ), ರಹಮತ್‌ ಶಾ, ಹಶ್ಮತ್ತುಲ್ಲಾ ಶಾಹಿದಿ, ಅಸ್ಗರ್‌ ಆಫ್ಘನ್‌, ಮೊಹಮದ್‌ ನಬಿ, ನಜೀಬುಲ್ಲಾ ಜದ್ರಾನ್‌, ರಶೀದ್‌ ಖಾನ್‌, ಇಕ್ರಮ್‌ ಅಲಿಖಿಲ್‌, ದಾವ್ಲತ್‌ ಜದ್ರಾನ್‌, ಮುಜೀಬ್‌ ರಹಮಾನ್‌.

ಸ್ಥಳ: ಸೌಥಾಂಪ್ಟನ್‌ 
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್