ಲೀಡ್ಸ್(ಜೂ.21): ಈ ವಿಶ್ವಕಪ್ ಟೂರ್ನಿಯಲ್ಲಿ 5 ಪಂದ್ಯದಲ್ಲಿ ಕೇವಲ 1 ಗೆಲುವು ಸಾಧಿಸಿ ಟೂರ್ನಿಯಿಂದ ಹೊರಬೀಳೋ ಆತಂಕ ಎದುರಿಸುತ್ತಿದ್ದ ಶ್ರೀಲಂಕಾ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಬಲಿಷ್ಠ ಇಂಗ್ಲೆಂಡ್ ವಿರುದ್ಧ  ಅದ್ಭುತ ಪ್ರದರ್ಶನ ನೀಡೋ ಮೂಲಕ ಶ್ರೀಲಂಕಾ 20 ರನ್ ಗೆಲುವು ಸಾಧಿಸಿದೆ. ಈ ಮೂಲಕ 2 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.

ಗೆಲುವಿಗೆ 233 ರನ್ ಸುಲಭ ಟಾರ್ಗೆಟ್ ಪಡೆದ ಇಂಗ್ಲೆಂಡ್ ನಿರೀಕ್ಷಿತ  ಆರಂಭ ಪಡೆಯಲಿಲ್ಲ. ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಶ್ರೀಲಂಕಾ, ಆಂಗ್ಲರಿಗೆ ಶಾಕ್ ನೀಡಿತು. ಜಾನಿ ಬೈರ್‌ಸ್ಟೋ ಶೂನ್ಯ ಸುತ್ತಿದರು. ಜೇಮ್ಸ್ ವಿನ್ಸ್ 14 ರನ್ ಸಿಡಿಸಿ ಔಟಾದರು. ಆದರೆ ಜೂ ರೂಟ್ ತಂಡಕ್ಕೆ ಆಸರೆಯಾದರು.

ನಾಯಕ ಇಯಾನ್ ಮಾರ್ಗನ್ 21 ರನ್ ಸಿಡಿಸಿ ನಿರ್ಗಮಿಸಿದರು. ರೂಟ್ ಹಾಗೂ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಉಸಿರಾಡಿತು. ರೂಟ್ 57 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಇಂಗ್ಲೆಂಡ್  ಕುಸಿತ ಆರಂಭಗೊಂಡಿತು. ಜೋಸ್ ಬಟ್ಲರ್ 10, ಮೊಯಿನ್ ಆಲಿ 16 ಹಾಗೂ ಕ್ರಿಸ್ ವೋಕ್ಸ್ 2 ರನ್ ಸಿಡಿಸಿ ನಿರ್ಗಮಿಸಿದರು.

ಸ್ಟೋಕ್ಸ್ ಹಾಫ್ ಸೆಂಚುರಿ ಸಿಡಿಸಿ ಇಂಗ್ಲೆಂಡ್ ತಂಡಕ್ಕೆ ನೆರವಾದರು. ಆದರೆ ಸ್ಟೊಕ್ಸ್‌ಗೆ ಉತ್ತಮ ಸಾಥ್ ಸಿಗಲಿಲ್ಲ. ಆದಿಲ್ ರಶೀದ್ 1 ರನ್ ಸಿಡಿಸಿ ಔಟಾದರು. ಜೋಫ್ರಾ ಅರ್ಚರ್ 3 ರನ್ ಸಿಡಿಸಿ ಔಟಾದರು. ಅಷ್ಟರಲ್ಲಿ ಇಂಗ್ಲೆಂಡ್ ಗೆಲುವಿಗೆ 36 ಎಸೆತದಲ್ಲಿ 47 ರನ್ ಅವಶ್ಯಕತೆ ಇದ್ದರೆ, ಇತ್ತ ಲಂಕಾ ಗೆಲುವಿಗೆ ಕೇವಲ 1 ವಿಕೆಟ್ ಬೇಕಿತ್ತು.

ಬೆನ್ ಸ್ಟೋಕ್ಸ್ ಹೋರಾಟ ಮುಂದುವರಿಸಿದರು. ಆದರೆ ಮಾರ್ಕ್ ವುಡ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ 47 ಓವರ್‌ಗಳಲ್ಲಿ 212 ರನ್‌ಗೆ ಆಲೌಟ್ ಆಯಿತು. ಇತ್ತ ಬೆನ್ ಸ್ಟೋಕ್ಸ್ ಅಜೇಯ 82 ರನ್ ಸಿಡಿಸಿ ಹೋರಾಟ ನೀಡಿದರೂ ಗೆಲುವು ಸಿಗಲಿಲ್ಲ. ಶ್ರೀಲಂಕಾ 20 ರನ್‌ಗಳ ರೋಚಕ ಗೆಲುವು ಸಾಧಿಸಿತು. 4 ವಿಕೆಟ್ ಕಬಳಿಸಿದ ಲಸಿತ್ ಮಲಿಂಗ ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.