ಬೆಂಗಳೂರು[ಜು.15]: ಲಾರ್ಡ್ಸ್ ಮೈದಾನದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದೃಷ್ಟದಾಟದಲ್ಲಿ ಇಂಗ್ಲೆಂಡ್ ತಂಡ ಜಯಭೇರಿ ಬಾರಿಸಿದೆ. ಸೂಪರ್ ಓವರ್ ನಲ್ಲೂ ಪಂದ್ಯ ಟೈ ಆಗಿದ್ದರಿಂದ ಅತಿ ಹೆಚ್ಚು ಬೌಂಡರಿ ಬಾರಿಸಿದ್ದ ಇಂಗ್ಲೆಂಡ್ ತಂಡವನ್ನು ಐಸಿಸಿ ನಿಯಮದಂತೆ ಚಾಂಪಿಯನ್ ಎಂದು ಘೋಷಿಸಲಾಯಿತು. ಈ ನಿಯಮ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ನಿಜವಾಯ್ತು ಟಾಸ್ ಭವಿಷ್ಯ: ಟೀಂ ಇಂಡಿಯಾ ಮುಂದಿನ ಚಾಂಪಿಯನ್..?

ಹೌದು, ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಇನ್ನು ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ಆರಂಭಿಕ ಆಘಾತದ ಹೊರತಾಗಿಯೂ ಬೆನ್ ಸ್ಟೋಕ್ಸ್-ಜೋಸ್ ಬಟ್ಲರ್ ಶತಕದ ಜತೆಯಾಟದ ನೆರವಿನಿಂದ 241 ರನ್ ಬಾರಿಸಿ ಆಲೌಟ್ ಆಯಿತು. ಪರಿಣಾಮ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಮೊರೆಹೋಗಲಾಯಿತು.  ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 15 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕೂಡಾ 15 ರನ್ ಬಾರಿಸಿತು. ಹೀಗಾಗಿ ಐಸಿಸಿ ಟೈ ಬ್ರೇಕರ್ ನಿಯಮಕ್ಕೆ ಮುಂದಾಯಿತು. ಹೀಗಾಗಿ ಇನ್ನಿಂಗ್ಸ್’ನಲ್ಲಿ ಗರಿಷ್ಠ ಬೌಂಡರಿ ಬಾರಿಸಿದ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇಂಗ್ಲೆಂಡ್ 27 ಬೌಂಡರಿ ಬಾರಿಸಿದ್ದರೆ, ಕಿವೀಸ್ ಬಾರಿಸಿದ್ದು 17 ಬೌಂಡರಿಗಳು ಮಾತ್ರ. ಈ ನಿಯಮದಂತೆ ಇಂಗ್ಲೆಂಡ್ ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತಿಹಿಡಿಯಿತು.

ಐಸಿಸಿಯ ಈ ನಿಯಮದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಕಟು ಶಬ್ಧಗಳಿಂದ ಖಂಡಿಸಿದ್ದಾರೆ. ಮಾಜಿ ಕ್ರಿಕೆಟಿಗ ಕಂ ಸಂಸದ ಗೌತಮ್ ಗಂಭೀರ್, ಇದೊಂದು ಹಾಸ್ಯಾಸ್ಪದ ನಿರ್ಧಾರ ಎಂದಿದ್ದರೆ, ರೋಹಿತ್ ಶರ್ಮಾ, ಕ್ರಿಕೆಟ್’ನಲ್ಲಿ ಕೆಲವೊಂದು ನಿಯಮಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದಿದ್ದಾರೆ.

ಇನ್ನು ಮಾಜಿ ಕ್ರಿಕೆಟಿಗ ಡೀನ್ಸ್ ಜೋನ್ಸ್ ಫೈನಲ್ ಪಂದ್ಯದ ಫಲಿತಾಂಶವನ್ನು ಬೌಂಡರಿಗಳ ಮೂಲಕ ನಿರ್ಧರಿಸುವುದು ಸರಿಯಲ್ಲ ಎಂದರೆ, ಕಿವೀಸ್ ಮಾಜಿ ನಾಯಕ ಸ್ಟಿಫನ್ ಫ್ಲೆಮಿಂಗ್, ಈ ನಿಯಮ ಕ್ರೂರವಾದದ್ದು ಎಂದಿದ್ದಾರೆ.