ಬೆಂಗಳೂರು[ಜು.15]: ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗುವುದರೊಂದಿಗೆ ಲಾರ್ಡ್ಸ್ ಮೈದಾನದಲ್ಲಿ ಟಾಸ್ ಭವಿಷ್ಯ ಮತ್ತೊಮ್ಮೆ ನಿಜವಾಗಿದ್ದು, ಟಾಸ್ ಗೆದ್ದ ತಂಡ ವಿಶ್ವಕಪ್ ಗೆಲ್ಲುವುದಿಲ್ಲ ಎನ್ನುವ ಮಾತು ಮತ್ತೊಮ್ಮೆ ನಿಜವಾಗಿದೆ.

ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ ಕಾರಣವಾದ ಆ 5 ಅಂಶಗಳಿವು..!

ಹೌದು, ಲಾರ್ಡ್ಸ್’ನಲ್ಲಿ ವಿಶ್ವಕಪ್‌ ಫೈನಲ್‌ನಲ್ಲಿ ಟಾಸ್‌ ಗೆಲ್ಲುವವರು ಪಂದ್ಯ ಗೆಲ್ಲುವುದಿಲ್ಲ ಎನ್ನುವುದು ನಿಜವಾಗಿದೆ. ಟಾಸ್‌ ಗೆದ್ದ ಕಿವೀಸ್‌, ಎಷ್ಟೇ ಹೋರಾಡಿದರೂ ಕೊನೆಗೂ ಗೆಲ್ಲಲಿಲ್ಲ. 1975, 79, 83, 99ರ ವಿಶ್ವಕಪ್‌ ಫೈನಲ್‌ಗೂ ಲಾರ್ಡ್ಸ್ ಕ್ರೀಡಾಂಗಣವೇ ಆತಿಥ್ಯ ನೀಡಿತ್ತು. ಆ ಪಂದ್ಯಗಳಲ್ಲೂ ಟಾಸ್‌ ಗೆದ್ದಿದ್ದ ತಂಡಗಳು ಸೋತಿದ್ದವು.

2023ರಲ್ಲಿ ಭಾರತದಲ್ಲಿ ವಿಶ್ವಕಪ್‌: ಟೀಂ ಇಂಡಿಯಾ ಚಾಂಪಿಯನ್‌?

2019ರ ಏಕದಿನ ವಿಶ್ವಕಪ್‌ಗೆ ಅದ್ಧೂರಿ ತೆರೆ ಬಿದ್ದಿದ್ದು, ಮುಂದಿನ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್‌ 2023ರಲ್ಲಿ ಭಾರತದಲ್ಲಿ ನಡೆಯಲಿದೆ. 2011ರಲ್ಲಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದ ಭಾರತ, ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು. 2015ರಲ್ಲಿ ಟೂರ್ನಿಗೆ ಆತಿಥ್ಯ ನೀಡಿದ್ದ ಆಸ್ಪ್ರೇಲಿಯಾ, ಹಾಲಿ ಚಾಂಪಿಯನ್‌ ಭಾರತವನ್ನು ಸೆಮೀಸ್‌ನಲ್ಲಿ ಸೋಲಿಸಿ ಟ್ರೋಫಿ ಜಯಿಸಿತು. 2019ರಲ್ಲಿ ಆತಿಥೇಯ ಇಂಗ್ಲೆಂಡ್‌, ಸೆಮೀಸ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾವನ್ನು ಬಗ್ಗುಬಡಿದು ಪ್ರಶಸ್ತಿ ಜಯಿಸಿದೆ. 2023ರಲ್ಲಿ ಆತಿಥ್ಯ ನೀಡಲಿರುವ ಭಾರತ, ಚಾಂಪಿಯನ್‌ ಆಗಲಿದೆಯೇ ಎನ್ನುವ ಕುತೂಹಲ ಶುರುವಾಗಿದೆ.

ವಿಶ್ವಕಪ್ ಇತಿಹಾಸದಲ್ಲೇ ರೋಚಕ ಪಂದ್ಯ; ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ ಚಾಂಪಿಯನ್!

ಇದರ ಜತೆಗೆ ಕಳೆದ ಮೂರು ವಿಶ್ವಕಪ್ ಟೂರ್ನಿಗಳಲ್ಲೂ ಆತಿಥ್ಯ ವಹಿಸಿದ ತಂಡವೇ ಚಾಂಪಿಯನ್ ಆದ ಸಂಪ್ರದಾಯ ಮುಂದುವರೆದಿದೆ. 2011ರ ವಿಶ್ವಕಪ್’ಗೂ ಮೊದಲು ಆತಿಥ್ಯ ವಹಿಸಿದ ತಂಡ ಚಾಂಪಿಯನ್ ಆಗಿರಲಿಲ್ಲ. ಆದರೆ 2011ರ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದ್ದ ಭಾರತ ವಿಶ್ವಕಪ್ ಜಯಿಸಿತ್ತು. ಇದಾದ ಬಳಿಕ 2015ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಹಾಸಂಗ್ರಾಮಕ್ಕೆ ಆತಿಥ್ಯ ವಹಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಇಂಗ್ಲೆಂಡ್ ಕೂಡಾ ಆತಿಥ್ಯವಹಿಸಿ ಚಾಂಪಿಯನ್ ಆಗುವುದರ ಮೂಲಕ ತವರಿನ ಅಭಿಮಾನಿಗಳು ಖುಷಿಯ ಹೊನಲಿನಲ್ಲಿ ತೇಲುವಂತೆ ಮಾಡಿತು. ಇನ್ನು ಇದೇ ಸಂಪ್ರದಾಯ ಮುಂದುವರೆದರೆ, 2023ರಲ್ಲಿ ಭಾರತ ವಿಶ್ವಕಪ್ ಜಯಿಸಲಿದೆ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ.