ಬೆಂಗಳೂರು[ಜೂ.16]: ವಿಶ್ವಕಪ್ ಟೂರ್ನಿಯಲ್ಲಿಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಆಡಿದ 4 ಪಂದ್ಯಗಳಲ್ಲೂ ಭರ್ಜರಿ ಜಯಭೇರಿ ಬಾರಿಸಿರುವ ಟೀಂ ಇಂಡಿಯಾ ಇದೀಗ ಏಳನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆದರೆ ಚಾಂಪಿಯನ್ಸ್ ಟ್ರೋಫಿ ಫೈನಲ್’ನಲ್ಲಿ ಭಾರತಕ್ಕೆ ಶಾಕ್ ನೀಡಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿದ್ದ ಪಾಕಿಸ್ತಾನ ಅಂತಹದ್ದೇ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ.

ಪಾಕ್ ವಿರುದ್ಧ ಸಪ್ತ ಗೆಲುವಿನತ್ತ ಟೀಂ ಇಂಡಿಯಾ ಚಿತ್ತ

ಇನ್ನು ಮೇಲ್ನೋಟಕ್ಕೆ ಈ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರೇಟ್ ಎನಿಸಿದ್ದರೂ, ಪಾಕಿಸ್ತಾನ ಕೂಡಾ ಭಾರತಕ್ಕೆ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದೆ. ಈ ಪಂದ್ಯದಲ್ಲಿ ಭಾರತ-ಪಾಕಿಸ್ತಾನದ ಈ ಐವರು ಕ್ರಿಕೆಟಿಗರ ಕಾದಾಟವನ್ನು ನೋಡಲು ಮಿಸ್ ಮಾಡ್ಕೋಬೇಡಿ..

* ರೋಹಿತ್ ಶರ್ಮಾ vs ಮೊಹಮದ್‌ ಆಮೀರ್‌

ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ ಹಾಗೂ ಪಾಕ್ ವೇಗಿ ಮೊಹಮ್ಮದ್ ಆಮೀರ್ ನಡುವಿನ ಕಾದಾಟ ಸಾಕಷ್ಟು ರೋಚಕತೆ ಹುಟ್ಟುಹಾಕಿದೆ. ಆಮೀರ್‌ ಪಾಕಿಸ್ತಾನದ ಪ್ರಮುಖ ಅಸ್ತ್ರವೆನಿಸಿದ್ದು, ಅವರ ವೇಗ ಹಾಗೂ ಸ್ವಿಂಗ್‌ ಎದುರಿಸುವುದು ಸವಾಲಾಗಿ ಪರಿಣಮಿಸಲಿದೆ.

* ವಿರಾಟ್‌ ಕೊಹ್ಲಿ vs ವಹಾಬ್‌ ರಿಯಾಜ್‌

ಕೊಹ್ಲಿ ಪಾಕಿಸ್ತಾನದ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಕಳೆದ ಪಂದ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ ಪಾಕ್‌ ವೇಗಿ ವಹಾಬ್ ರಿಯಾಜ್‌ ಪ್ರಚಂಡ ಬೌಲಿಂಗ್‌ ನಡೆಸಿದ್ದರು. ಈ ಇಬ್ಬರ ಪೈಪೋಟಿ ಕುತೂಹಲ ಹೆಚ್ಚಿಸಿದೆ.

* ಜಸ್ಪ್ರೀತ್‌ ಬುಮ್ರಾ vs ಫಖರ್‌ ಜಮಾನ್‌

2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಬೂಮ್ರಾ ನೋಬಾಲ್‌ ಎಸೆದು ಫಖರ್‌ಗೆ ಜೀವದಾನ ನೀಡಿದ್ದರು. ಫಖರ್‌ ಶತಕ ಬಾರಿಸಿ ಪಾಕ್‌ ಗೆಲ್ಲಿಸಿದ್ದರು. ಪಾಕ್‌ ಆರಂಭಿಕ ವಿರುದ್ಧ ಬೂಮ್ರಾ ಸೇಡಿಗೆ ಕಾಯುತ್ತಿದ್ದಾರೆ.

* ಭುವನೇಶ್ವರ್‌ ಕುಮಾರ್‌ vs ಬಾಬರ್‌ ಆಜಂ

ಭುವನೇಶ್ವರ್‌ ಆಫ್‌ ಸ್ಟಂಪ್‌ನಿಂದ ಆಚೆ ಬೌಲ್‌ ಮಾಡಿ ಎದುರಾಳಿಯನ್ನು ಕಟ್ಟಿಹಾಕಬಲ್ಲರು. ಪಾಕ್‌ನ ಕೊಹ್ಲಿ ಎಂದೇ ಕರೆಸಿಕೊಳ್ಳುವ ಬಾಬರ್‌ ಆಜಂ ಹಾಗೂ ಭುವನೇಶ್ವರ್‌ ನಡುವೆ ಪೈಪೋಟಿ ಏರ್ಪಡಲಿದೆ.

* ಹಾರ್ದಿಕ್‌ ಪಾಂಡ್ಯ vs ಮೊಹಮದ್‌ ಹಫೀಜ್‌

ಆಲ್ರೌಂಡರ್‌ಗಳ ನಡುವೆ ಸ್ಪರ್ಧೆ ಇದ್ದು, ಮೊಹಮದ್‌ ಹಫೀಜ್‌ರ ದಶಕಗಳ ಅನುಭವ ಹಾರ್ದಿಕ್‌ ಪಾಂಡ್ಯರ ಆಕ್ರಮಣಕಾರಿ ಆಟದ ಮುಂದೆ ನಡೆಯಲಿದೆಯೇ ಎನ್ನುವುದು ಎಲ್ಲರ ಕುತೂಹಲ ಕೆರಳಿಸಿದೆ.