ಲಂಡನ್‌[ಜು.14]: ಭಾನುವಾರ ಕ್ರಿಕೆಟ್‌ ಜಗತ್ತು ಹೊಸ ಚಾಂಪಿಯನ್‌ ತಂಡವನ್ನು ಕಾಣಲಿದೆ. 2019ರ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ ಪಂದ್ಯ ಕ್ರಿಕೆಟ್‌ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದ್ದು, ಚೊಚ್ಚಲ ಬಾರಿಗೆ ಚಾಂಪಿಯನ್‌ ಪಟ್ಟಅಲಂಕರಿಸಲು ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳು ಕಾತರಿಸುತ್ತಿವೆ.

1979, 87, 92ರಲ್ಲಿ ಫೈನಲ್‌ ಪ್ರವೇಶಿಸಿದರೂ ಇಂಗ್ಲೆಂಡ್‌ ಟ್ರೋಫಿ ಗೆಲ್ಲಲು ಮಾತ್ರ ಸಾಧ್ಯವಾಗಿರಲಿಲ್ಲ. ಬರೋಬ್ಬರಿ 27 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿರುವ ಇಂಗ್ಲೆಂಡ್‌, ತವರಿನಲ್ಲಿ ಟ್ರೋಫಿ ಗೆದ್ದು ಸಂಭ್ರಮಿಸುವ ಉತ್ಸಾಹದಲ್ಲಿದೆ. ಹಲವು ಬಾರಿ ಸೆಮಿಫೈನಲ್‌ನಲ್ಲಿ ಎಡವಿದರೂ, 2015ರಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿದ್ದ ನ್ಯೂಜಿಲೆಂಡ್‌, ಆಸ್ಪ್ರೇಲಿಯಾಕ್ಕೆ ಮಣಿದು ನಿರಾಸೆ ಅನುಭವಿಸಿತ್ತು. ಕಳೆದ ವಿಶ್ವಕಪ್‌ನಲ್ಲಿ ಕಿವೀಸ್‌ ತಂಡವನ್ನು ಮುನ್ನಡೆಸಿದ್ದ ಬ್ರೆಂಡನ್‌ ಮೆಕ್ಕಲಂರಿಂದ ಸಾಧ್ಯವಾಗದ್ದನ್ನು ಈ ವರ್ಷ ಕೇನ್‌ ವಿಲಿಯಮ್ಸನ್‌ ಸಾಧಿಸಲಿದ್ದಾರೆಯೇ ಎನ್ನುವ ಕುತೂಹಲ ಕ್ರಿಕೆಟ್‌ ಅಭಿಮಾನಿಗಳನ್ನು ಕಾಡುತ್ತಿದೆ.

ಇಂಗ್ಲೆಂಡ್‌ ಬ್ಯಾಟಿಂಗ್‌ vs ಕಿವೀಸ್‌ ಬೌಲಿಂಗ್‌

ಇಂಗ್ಲೆಂಡ್‌ ಈ ವಿಶ್ವಕಪ್‌ನಲ್ಲಿ ತನ್ನ ಬಲಿಷ್ಠ ಬ್ಯಾಟಿಂಗ್‌ ಪ್ರದರ್ಶನದಿಂದಲೇ ಫೈನಲ್‌ ಪ್ರವೇಶಿಸಿದೆ. ತಂಡದ ಅಗ್ರ 3 ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌ (426 ರನ್‌), ಜಾನಿ ಬೇರ್‌ಸ್ಟೋವ್‌ (496), ಜೋ ರೂಟ್‌ (549) ಅತ್ಯುತ್ತಮ ಲಯದಲ್ಲಿದ್ದಾರೆ. ಇಯಾನ್‌ ಮಾರ್ಗನ್‌, ಜೋಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌ ಬಲವೂ ತಂಡಕ್ಕಿದೆ. ಇಂಗ್ಲೆಂಡ್‌ ಈ ವಿಶ್ವಕಪ್‌ನಲ್ಲಿ ಆಡಿರುವ 10 ಪಂದ್ಯಗಳ ಪೈಕಿ 6ರಲ್ಲಿ 300ಕ್ಕೂ ಹೆಚ್ಚು ಮೊತ್ತ ಕಲೆಹಾಕಿದೆ. ನ್ಯೂಜಿಲೆಂಡ್‌ ವಿರುದ್ಧ ನಡೆದ ರೌಂಡ್‌ ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲೂ 305 ರನ್‌ ದಾಖಲಿಸಿತ್ತು. ಹೀಗಾಗಿ, ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ಅಂದುಕೊಂಡಷ್ಟು ಸುಲಭವಲ್ಲ.

ಭಾರತೀಯ ಅಭಿಮಾನಿಗಳಿಗೆ ನ್ಯೂಜಿಲೆಂಡ್ ಕ್ರಿಕೆಟಿಗನ ಮನವಿ!

ಇಂಗ್ಲೆಂಡ್‌ ರೌಂಡ್‌ ರಾಬಿನ್‌ ಹಂತದಲ್ಲಿ 6 ಪಂದ್ಯಗಳಲ್ಲಿ ಗೆಲುವು ಕಂಡಿತು. ಈ ಪೈಕಿ 5ರಲ್ಲಿ ಮೊದಲು ಬ್ಯಾಟ್‌ ಮಾಡಿದಾಗ ಗೆದ್ದಿದೆ. ಹೀಗಾಗಿ, ಫೈನಲ್‌ನಲ್ಲೂ ಆತಿಥೇಯ ತಂಡ, ಮೊದಲು ಬ್ಯಾಟ್‌ ಮಾಡಿ 300ಕ್ಕಿಂತಲೂ ಹೆಚ್ಚು ರನ್‌ ಗಳಿಸಲು ನಿರ್ಧರಿಸಿದರೆ ಅಚ್ಚರಿಯಿಲ್ಲ.

ನ್ಯೂಜಿಲೆಂಡ್‌ನ ವೇಗಿಗಳ ಮುಂದೆ ದೊಡ್ಡ ಸವಾಲಿದ್ದು ಟ್ರೆಂಟ್‌ ಬೌಲ್ಟ್‌, ಲ್ಯೂಕಿ ಫರ್ಗ್ಯೂಸನ್‌, ಮ್ಯಾಟ್‌ ಹೆನ್ರಿ ಹೆಚ್ಚುವರಿ ಪರಿಶ್ರಮ ವಹಿಸಬೇಕಿದೆ. ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ ಮೇಲೂ ನಿರೀಕ್ಷೆ ಹೆಚ್ಚಿದೆ.

ಕೇನ್‌ ಮೇಲೆ ಒತ್ತಡ: ನ್ಯೂಜಿಲೆಂಡ್‌ನ ಬ್ಯಾಟಿಂಗ್‌ ಪಡೆ ಸ್ಥಿರ ಪ್ರದರ್ಶನ ತೋರುತ್ತಿಲ್ಲ. ನಾಯಕ ಕೇನ್‌ ವಿಲಿಯಮ್ಸನ್‌ (548 ರನ್‌) ಹಾಗೂ ರಾಸ್‌ ಟೇಲರ್‌ (335) ಹೊರತು ಪಡಿಸಿ ಉಳಿದ್ಯಾರಿಂದಲೂ ಹೇಳಿಕೊಳ್ಳುವ ಪ್ರದರ್ಶನ ಮೂಡಿಬಂದಿಲ್ಲ. ಇಂಗ್ಲೆಂಡ್‌ನ ವೇಗಿಗಳಾದ ಜೋಫ್ರಾ ಆರ್ಚರ್‌ (19 ವಿಕೆಟ್‌), ಕ್ರಿಸ್‌ ವೋಕ್ಸ್‌ (13), ಲಿಯಾಮ್‌ ಪ್ಲಂಕೆಟ್‌ (8) ಹಾಗೂ ಮಾರ್ಕ್ ವುಡ್‌ (17) ಶಿಸ್ತುಬದ್ಧ ಬೌಲಿಂಗ್‌ ದಾಳಿ ನಡೆಸಿದರೆ, ನ್ಯೂಜಿಲೆಂಡ್‌ಗೆ ಸಂಕಷ್ಟ ಎದುರಾಗುವುದು ನಿಶ್ಚಿತ. ವಿಲಿಯಮ್ಸನ್‌ ದೊಡ್ಡ ಇನ್ನಿಂಗ್ಸ್‌ ಆಡಿದರಷ್ಟೇ ಕಿವೀಸ್‌ಗೆ ಉಳಿಗಾಲ.

ಲಾರ್ಡ್ಸ್’ನಲ್ಲಿ ಟಾಸ್‌ ಗೆದ್ದವರಿಗೆ ಸೋಲು!

5 ಬಾರಿಗೆ ಕ್ರಿಕೆಟ್‌ ಕಾಶಿ ಲಾರ್ಡ್ಸ್ ಮೈದಾನ ಏಕದಿನ ವಿಶ್ವಕಪ್‌ ಫೈನಲ್‌ಗೆ ಆತಿಥ್ಯ ವಹಿಸುತ್ತಿದೆ. 1975, 79, 83, 99ರ ವಿಶ್ವಕಪ್‌ನ ಫೈನಲ್‌ ಪಂದ್ಯಗಳು ಇಲ್ಲಿ ನಡೆದಿದ್ದವು. ಆ ನಾಲ್ಕೂ ಪಂದ್ಯಗಳಲ್ಲಿ ಟಾಸ್‌ ಗೆದ್ದ ತಂಡ ಸೋಲು ಕಂಡಿತ್ತು. ಆದರೆ ಈ ವಿಶ್ವಕಪ್‌ನಲ್ಲಿ ಲಾರ್ಡ್ಸ್’ನಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡಕ್ಕೇ ಗೆಲುವು ಸಿಕ್ಕಿದೆ. ಭಾನುವಾರದ ಪಂದ್ಯದಲ್ಲಿ ಟಾಸ್‌ ಗೆಲ್ಲುವ ನಾಯಕ ಗೊಂದಲಕ್ಕೀಡಾದರೆ ಆಶ್ಚರ್ಯವಿಲ್ಲ.

ಪಿಚ್‌ ರಿಪೋರ್ಟ್‌

ಲಾರ್ಡ್ಸ್ ಮೈದಾನದ ಪಿಚ್‌ ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ಹೆಚ್ಚಿನ ನೆರವು ನೀಡಲಿದೆ. 280-300 ರನ್‌ ದಾಖಲಿಸಿದರೆ, ಆ ಮೊತ್ತವನ್ನು ರಕ್ಷಿಸಿಕೊಳ್ಳುವುದು ಸುಲಭ. ಈ ವಿಶ್ವಕಪ್‌ನಲ್ಲಿ ಇಲ್ಲಿ ನಡೆದಿರುವ 4 ಪಂದ್ಯಗಳಲ್ಲೂ ಮೊದಲು ಬ್ಯಾಟ್‌ ಮಾಡಿದ ತಂಡವೇ ಗೆಲುವು ಸಾಧಿಸಿದೆ.

ಒಟ್ಟು ಮುಖಾಮುಖಿ: 90

ನ್ಯೂಜಿಲೆಂಡ್‌: 43

ಇಂಗ್ಲೆಂಡ್‌: 41

ಟೈ: 02

ಫಲಿತಾಂಶವಿಲ್ಲ: 04

ವಿಶ್ವಕಪ್‌ನಲ್ಲಿ ಕಿವೀಸ್‌ vs ಇಂಗ್ಲೆಂಡ್‌

ಪಂದ್ಯ: 09

ನ್ಯೂಜಿಲೆಂಡ್‌: 05

ಇಂಗ್ಲೆಂಡ್‌: 04

ಸಂಭವನೀಯ ಆಟಗಾರರ ಪಟ್ಟಿ

ಇಂಗ್ಲೆಂಡ್‌: ಜೇಸನ್‌ ರಾಯ್‌, ಜಾನಿ ಬೇರ್‌ಸ್ಟೋವ್‌, ಜೋ ರೂಟ್‌, ಇಯಾನ್‌ ಮಾರ್ಗನ್‌ (ನಾಯಕ), ಜೋಸ್‌ ಬಟ್ಲರ್‌, ಬೆನ್‌ ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌, ಜೋಫ್ರಾ ಆರ್ಚರ್‌, ಆದಿಲ್‌ ರಶೀದ್‌, ಮಾರ್ಕ್ ವುಡ್‌, ಲಿಯಾಮ್‌ ಪ್ಲಂಕೆಟ್‌.

ನ್ಯೂಜಿಲೆಂಡ್‌: ಮಾರ್ಟಿನ್‌ ಗಪ್ಟಿಲ್‌, ಹೆನ್ರಿ ನಿಕೋಲ್ಸ್‌, ಕೇನ್‌ ವಿಲಿಯಮ್ಸನ್‌(ನಾಯಕ), ರಾಸ್‌ ಟೇಲರ್‌, ಟಾಮ್‌ ಲೇಥಮ್‌, ಜೇಮ್ಸ್‌ ನೀಶಮ್‌, ಡಿ ಗ್ರಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಟ್ರೆಂಟ್‌ ಬೌಲ್ಟ್‌, ಲಾಕಿ ಫಗ್ರ್ಯೂಸನ್‌, ಮ್ಯಾಟ್‌ ಹೆನ್ರಿ.

ಸ್ಥಳ: ಲಂಡನ್‌ 

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್