ಲಾರ್ಡ್ಸ್(ಜೂ.೩೦): ಮಿಚೆಲ್ ಸ್ಟಾರ್ಕ್(26/5) ಮಾರಕ ದಾಳಿಗೆ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ ಕೇವಲ 157 ರನ್ ಗಳಿಗೆ ಸರ್ವಪತನ ಆಗುವುದರೊಂದಿಗೆ 86 ರನ್ ಗಳ ಹೀನಾಯ ಸೋಲು ಕಂಡಿದೆ. ಇದರೊಂದಿಗೆ 2015ರ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಉತ್ಸಾಹದೊಂದಿಗೆ ಕಣಕ್ಕಿಳಿದಿದ್ದ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಮ್ಮೆ ನಿರಾಸೆ ಎದುರಾಗಿದೆ.

ಆಸ್ಟ್ರೇಲಿಯಾ ನೀಡಿದ್ದ 244 ರನ್ ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕಾಲಿನ್ ಮನ್ರೋ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿದ್ದಹೆನ್ರಿ ನಿಕೋಲಸ್ ಜತೆ ಮಾರ್ಟಿನ್ ಗಪ್ಟಿಲ್ ಇನಿಂಗ್ಸ್ ಆರಂಭಿಸಿದರು. ರಕ್ಷಣಾತ್ಮಕ ಆಟದ ಮೊರೆಹೋದ ಈ ಜೋಡಿ 9.2 ಓವರ್ ಗಳಲ್ಲಿ ಕೇವಲ 29 ರನ್ ಬಾರಿಸಿತ್ತು. ಈ ವೇಳೆ ಜೇಸನ್ ಬೆಹ್ರನ್'ಡ್ರಾಪ್, ನಿಕೋಲಸ್ ವಿಕೆಟ್ ಕಬಳಿಸುವ ಮೂಲಕ ಆರಂಭಿಕ ಯಶಸ್ಸು ಒದಗಿಸಿಕೊಟ್ಟರು. ಇದಾದ ಕೆಲಹೊತ್ತಿನಲ್ಲೇ ಮತ್ತೋರ್ವ ಆರಂಭಿಕ ಬ್ಯಾಟ್ಸ್'ಮನ್ ಮಾರ್ಟಿನ್ ಗಪ್ಟಿಲ್'ಗೂ ಆಸೀಸ್ ಎಡಗೈ ವೇಗಿ ಬೆಹ್ರನ್'ಡ್ರಾಪ್ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ಮೂರನೇ ವಿಕೆಟ್ ಗೆ ಜತೆಯಾದ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಜೋಡಿ 55 ರನ್ ಗಳ ಜತೆಯಾಟವಾಡುವ ಮೂಲಕ, ಆರಂಭಿಕ ಆಘಾತದಿಂದ ತಂಡವನ್ನು ಹೊರಬರುವಂತೆ ಮಾಡಲು ಪ್ರಯತ್ನಿಸಿದರು. ಈ ವೇಳೆ ದಾಳಿಗಿಳಿದ ಮಿಚೆಲ್ ಸ್ಟಾರ್ಕ್, ಉತ್ತಮ ಇನಿಂಗ್ಸ್ ಕಟ್ಟುವ ಮುನ್ಸೂಚನೆ ತೋರಿದ್ದ ನಾಯಕ ಕೇನ್ ವಿಲಿಯಮ್ಸನ್(40) ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ರಾಸ್ ಟೇಲರ್(30)ಗೆ ಪ್ಯಾಟ್ ಕಮ್ಮಿನ್ಸ್ ಪೆವಿಲಿಯನ್ ಹಾದಿ ತೋರಿಸಿದರು. ವಿಕೆಟ್ ಕೀಪಿಂಗ್ ಬ್ಯಾಟ್ಸ್'ಮನ್ ಟಾಮ್ ಲಾಥಮ್ ಆಟ ಕೇವಲ 14 ರನ್ ಗಳಿಗೆ ಸೀಮಿತವಾಯಿತು. ಟಾಮ್ ಲಾಥಮ್ ವಿಕೆಟ್ ಬೀಳುತ್ತಿದ್ದಂತೆ ಮಿಚೆಲ್ ಸ್ಟಾರ್ಕ್ ಮಾರಕ ದಾಳಿಗೆ ತತ್ತರಿಸಿದ ಕಿವೀಸ್ ಪಡೆ ಅಲ್ಪಮೊತ್ತಕ್ಕೆ ಆಲೌಟ್ ಆಯಿತು. ಕಳೆದ ಪಂದ್ಯದ ಹೀರೋಗಳಾದ ಜೇಮ್ಸ್ ನೀಶಮ್ ಹಾಗೂ ಕಾಲಿನ್ ಡಿ ಗ್ರಾಂಡ್'ಹೋಮ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು ಕಿವೀಸ್ ಪಡೆಗೆ ಹಿನ್ನಡೆಯಾಗಿ ಪರಿಣಮಿಸಿತು. ಕೊನೆಯಲ್ಲಿ ಸ್ಟಾರ್ಕ್ ಕಿವೀಸ್ ಬಾಲಂಗೋಚಿಗಳ ವಿಕೆಟ್ ಕಬಳಿಸುವುದರೊಂದಿಗೆ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ ಆಸೀಸ್ ಗೆಲುವಿನ ನಗೆ ಬೀರುವಂತೆ ಮಾಡಿದರು.

ವಿಶ್ವಕಪ್ 2019: ಬೌಲ್ಟ್ ಬಿರುಗಾಳಿಗೆ ತತ್ತರಿಸಿದ ಆಸೀಸ್

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ಉಸ್ಮಾನ್ ಖವಾಜ ಹಾಗೂ ಅಲೆಕ್ಸ್ ಕ್ಯಾರಿ ಸಮಯೋಚಿತ ಅರ್ಧಶತಕಗಳ ನೆರವಿನಿಂದ 243 ರನ್ ಬಾರಿಸಿತ್ತು.