ವಿಶ್ವಕಪ್ ಟೂರ್ನಿಯ ಪ್ರತಿಕ್ಷಣದ ಸ್ಕೋರ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲಾರ್ಡ್ಸ್[ಜೂ.29]: ಟ್ರೆಂಟ್ ಬೌಲ್ಟ್ ಹ್ಯಾಟ್ರಿಕ್ ಬೌಲಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಕೇವಲ 243 ರನ್ ಗಳಿಗೆ ನಿಯಂತ್ರಿಸುವಲ್ಲಿ ರನ್ನರ್ ಅಪ್ ನ್ಯೂಜಿಲೆಂಡ್ ತಂಡ ಯಶಸ್ವಿಯಾಗಿದೆ. ಪ್ರಸಕ್ತ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಎರಡನೇ ಹ್ಯಾಟ್ರಿಕ್ ವಿಕೆಟ್ ಇದಾಗಿದ್ದು, ಈ ಮೊದಲು ಭಾರತದ ಮೊಹಮ್ಮದ್ ಶಮಿ ಆಫ್ಘನ್ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 
ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜ[88] ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಅಲೆಕ್ಸ್ ಕ್ಯಾರಿ[71] ಸಮಯೋಚಿತ ಅರ್ಧಶತಕ ಆಸ್ಟ್ರೇಲಿಯಾ ತಂಡವನ್ನು ಗೌರವಾನ್ವಿತ ಮೊತ್ತ ಕಲೆಹಾಕುವಂತೆ ಮಾಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಫಿಂಚ್[08] 5ನೇ ಓವರ್’ನಲ್ಲಿ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್[16] ಹತ್ತನೇ ಓವರ್’ನಲ್ಲಿ ಲೂಕಿ ಫರ್ಗ್ಯೂಸನ್ ಗೆ ವಿಕೆಟ್ ಒಪ್ಪಸಿದರು. ಇದರ ಬೆನ್ನಲ್ಲೇ ಸ್ಟೀವ್ ಸ್ಮಿತ್ ಕೂಡಾ ಫರ್ಗ್ಯೂಸನ್’ಗೆ ವಿಕೆಟ್ ಒಪ್ಪಿಸಿದಾಗ ಆಸ್ಟ್ರೇಲಿಯಾ 46 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸ್ಟೋನಿಸ್-ಖವಾಜ ಜೋಡಿ ನಾಲ್ಕನೇ ವಿಕೆಟ್’ಗೆ ಉಪಯುಕ್ತ 35 ರನ್ ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 80ರ ಗಡಿ ದಾಟಿಸಿದರು. ಉತ್ತಮ ಇನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದ ಸ್ಟೋನಿಸ್ 21ರನ್ ಬಾರಿಸಿ ನೀಶಮ್’ಗೆ ವಿಕೆಟ್ ಒಪ್ಪಿಸಿರು. ಇದರ ಬೆನ್ನಲ್ಲೇ ಮ್ಯಾಕ್ಸ್’ವೆಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.

ಆಸರೆಯಾದ ಖವಾಜ-ಕ್ಯಾರಿ: ಒಂದು ಹಂತದಲ್ಲಿ 95 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ ಉಸ್ಮಾನ್ ಖವಾಜ ಹಾಗೂ ಅಲೆಕ್ಸ್ ಕ್ಯಾರಿ ಜೋಡು ಆಸರೆಯಾದರು. ಆರನೇ ವಿಕೆಟ್’ಗೆ ಈ ಜೋಡಿ 107 ರನ್ ಗಳ ಜತೆಯಾಟವಾಡಿತು. ಕ್ಯಾರಿ 72 ಎಸೆತಗಳಲ್ಲಿ 11 ಬೌಂಡರಿ ಸಹಿತ 71 ರನ್ ಬಾರಿಸಿ ವಿಲಿಯಮ್ಸನ್’ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಸಾಕಷ್ಟು ಎಚ್ಚರಿಕೆಯ ಆಟವಾಡಿದ ಖವಾಜ 129 ಎಸೆತಗಳಲ್ಲಿ 88 ರನ್ ಬಾರಿಸಿ ಬೌಲ್ಟ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಮಿಂಚಿನ ದಾಳಿ ನಡೆಸಿದ ಟ್ರೆಂಟ್ ಬೌಲ್ಟ್ ಒಟ್ಟು 4 ವಿಕೆಟ್ ಕಬಳಿಸಿ ಆಸೀಸ್ ತಂಡವನ್ನು 250ರೊಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಕೊನೆಯ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್:
ಪಂದ್ಯದ ಕೊನೆಯ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ಟ್ರೆಂಟ್ ಬೌಲ್ಟ್ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ನ್ಯೂಜಿಲೆಂಡ್’ನ ಮೊದಲ ಬೌಲರ್ ಎನ್ನುವ ಶ್ರೇಯಕ್ಕೆ ಭಾಜನರಾದರು. ಖವಾಜ ಹಾಗೂ ಸ್ಟಾರ್ಕ್’ರನ್ನು ಕ್ಲೀನ್ ಬೌಲ್ಡ್ ಮಾಡಿದ ಬೌಲ್ಟ್ ಕೊನೆಯ ಎಸೆತದಲ್ಲಿ ಬೆಹ್ರನ್’ಡ್ರಾಪ್ ಎಲ್’ಬಿ ಬಲೆಗೆ ಕೆಡವಿ ಹ್ಯಾಟ್ರಿಕ್ ಸಾಧನೆ ಮಾಡಿದರು.

ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 4 ವಿಕೆಟ್ ಪಡೆದರೆ, ಲೂಕಿ ಫರ್ಗ್ಯೂಸನ್ ಹಾಗೂ ಜೇಮ್ಸ್ ನೀಶಮ್ ತಲಾ 2 ಮತ್ತು ಕೇನ್ ವಿಲಿಯಮ್ಸನ್ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 243/9
ಉಸ್ಮಾನ್ ಖವಾಜ: 88
ಟ್ರೆಂಟ್ ಬೌಲ್ಟ್: 51/4