ನಾಟಿಂಗ್‌ಹ್ಯಾಮ್(ಜೂ.20): ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ರನ್ ಮಳೆ ಸುರಿಸಿದೆ. ಡೇವಿಡ್ ವಾರ್ನರ್ ಸಿಡಿಸಿದ 166 ರನ್, ಉಸ್ಮಾನ್ ಖವಾಜ ಹಾಗೂ ಆರೋನ್ ಫಿಂಚ್ ಹಾಫ್ ಸೆಂಚುರಿ ನೆರವಿನಿಂದ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 381 ರನ್ ಸಿಡಿಸಿದೆ. ಇದರೊಂದಿಗೆ ಬಾಂಗ್ಲಾಗೆ 382 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.

ಇದನ್ನೂ ಓದಿ: ಪಾಕ್ ವಿರುದ್ದದ ಗೆಲುವಿನ ಬಳಿಕ ಹೇರ್ ಸ್ಟೈಲ್ ಬದಲಿಸಿದ ಕೊಹ್ಲಿ ಸೈನ್ಯ!

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ, ಬಾಂಗ್ಲಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ಆರಂಭಕ್ಕೆ ಬಾಂಗ್ಲಾ ತತ್ತರಿಸಿತು. ಮೊದಲ ವಿಕೆಟ್‌ಗೆ ಈ ಜೋಡಿ 121 ರನ್ ಜೊತೆಯಾಟ ನೀಡಿತು. ಫಿಂಚ್ 53 ರನ್ ಸಿಡಿಸಿ ನಿರ್ಗಮಿಸಿದರು.

ಉಸ್ಮಾನ್ ಖವಾಜ ಜೊತೆ ಸೇರಿದ ವಾರ್ನರ್ ಆರ್ಭಟಿಸಿದರು. ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ವಾರ್ನರ್ ಆಕರ್ಷಕ  ಶತಕ ಸಿಡಿಸಿದರು. ಇತ್ತ  ಖವಾಜ ಅಮೋಘ ಪ್ರದರ್ಶನದಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ವಾರ್ನರ್ 166 ರನ್ ಸಿಡಿಸಿ ಔಟಾದರು. ಖವಾಜ 89 ರನ್ ಸಿಡಿಸಿ ನಿರ್ಗಮಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 10 ಎಸೆತದಲ್ಲಿ 32 ರನ್ ಸಿಡಿಸಿದರು. 49 ಓವರ್ ಮುಕ್ತಾಯಕ್ಕೆ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು. ಕೆಲ ಹೊತ್ತಲ್ಲೇ ಪುನರ್ ಆರಂಭಗೊಂಡಿತು.  ಅಂತಿಮವಾಗಿ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 381 ರನ್ ಸಿಡಿಸಿತು.