ಟೀಂ ಇಂಡಿಯಾ ಸೋತಿದ್ದೆಲ್ಲಿ..? ಇಲ್ಲಿವೆ ನೋಡಿ 5 ಕಾರಣಗಳು
ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು 18 ರನ್‌ಗಳಿಂದ ನ್ಯೂಜಿಲೆಂಡ್‌ಗೆ ಶರಣಾಗುವ ಮೂಲಕ ಕ್ರಿಕೆಟ್ ಮಹಾಸಂಗ್ರಾಮದಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿಕೊಂಡಿದೆ. ಟೀಂ ಇಂಡಿಯಾ ಸೋಲಿಗೆ 5 ಕಾರಣಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. ನಿಮಗೇನು ಅನಿಸುತ್ತಿದೆ ಕಾಮೆಂಟ್ ಮಾಡಿ...
ಬೆಂಗಳೂರು: ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 18 ರನ್ ಗಳ ರೋಚಕ ಸೋಲು ಕಾಣುವುದರೊಂದಿಗೆ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ. ಯುಜುವೇಂದ್ರ ಚಹಲ್ ವಿಕೆಟ್ ಪತನವಾಗುತ್ತಿದ್ದಂತೆ ಶತಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ವಿಶ್ವಕಪ್ ಗೆಲ್ಲುವ ಕನಸು ಭಗ್ನವಾಯಿತು. ಧೋನಿ-ಜಡೇಜಾ ಕೆಚ್ಚೆದೆಯ ಶತಕದ ಜತೆಯಾಟ ಕೂಡಾ ವ್ಯರ್ಥವಾಯಿತು.
ಧೋನಿ ಟೀಕಿಸುವ ಮುನ್ನ ಕೇನ್ ವಿಲಿಯಮ್ಸನ್ ಮಾತನ್ನೊಮ್ಮೆ ಕೇಳಿ...
ಲೀಗ್ ಹಂತದಲ್ಲಿ ಇಂಗ್ಲೆಂಡ್ ಹೊರತುಪಡಿಸಿ ಆಡಿದ ಉಳಿದೆಲ್ಲಾ ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಭಾರತ, ಸೆಮಿಫೈನಲ್ ನಲ್ಲಿ ಆಘಾತಕಾರಿ ಸೋಲು ಕಂಡು ವಿಶ್ವಕಪ್ ಮಹಾಸಂಗ್ರಾಮದಿಂದ ಹೊರಬಿದ್ದಿದೆ. ಆರಂಭದಿಂದಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆಂದು ಗುರುತಿಸಿಕೊಂಡಿದ್ದ ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ಸೋತಿದ್ದೆಲ್ಲಿ ಎಂದರೆ ಹಲವಾರು ಕಾರಣಗಳನ್ನು ನೀಡಬಹುದು. ಈ ಸಂದರ್ಭದಲ್ಲಿ ಸೆಮಿಫೈನಲ್’ನಲ್ಲಿ ಟೀಂ ಇಂಡಿಯಾ ಸೋಲಲು ಕಾರಣವೇನು ಎನ್ನುವುದಕ್ಕೆ 5 ಕಾರಣಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
ದಡ ಸೇರೋ ಮುನ್ನ ಮುಳುಗಿದ ಭಾರತದ ಕ್ರಿಕೆಟ್ ಟೈಟಾನಿಕ್!
1. ಟಾಸ್: ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸುತ್ತಲೇ ಬಂದಿದೆ. ಅದೇ ರೀತಿ ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲೂ ಟಾಸ್ ಫಲಿತಾಂಶದ ಮೇಲೆ ಪ್ರಭಾವ ಬೀರಿತು. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಈ ವಿಶ್ವಕಪ್ ಟೂರ್ನಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಜಯಭೇರಿ ಬಾರಿಸಿದೆ. ಸೆಮೀಸ್‌ಗೂ ಮುನ್ನ ಲೀಗ್ ಹಂತದಲ್ಲಿ ಆಡಿದ 5 ಪಂದ್ಯಗಳಲ್ಲೂ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ತಂಡ ಜಯಗಳಿಸಿತ್ತು. ಅದೇ ರೀತಿ ಸೆಮಿಫೈನಲ್ ನಲ್ಲೂ ಟಾಸ್ ಗೆದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ದುಕೊಂಡರು. ಬಳಿಕ ಅಲ್ಪಮೊತ್ತವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು.
2. ಮಳೆ: ಈ ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟಿಗರಿಗಿಂತ ಹೆಚ್ಚು ಫಲಿತಾಂಶ ನಿರ್ಧರಿಸಿದ್ದು ಮಳೆ ಎಂದರೆ ತಪ್ಪಾಗಲಾರದು. ಸೆಮಿಫೈನಲ್ ನಲ್ಲೂ ಮಳೆ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಿತು. ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 46.1 ಓವರ್ ಗಳಲ್ಲಿ ಕೇವಲ 211 ರನ್ ಬಾರಿಸಿ 5 ವಿಕೆಟ್ ಕಳೆದುಕೊಂಡಿತ್ತು. ಮಳೆಯಿಂದಾಗಿ ಪಂದ್ಯ ಮೀಸಲು ದಿನಕ್ಕೆ ಮುಂದೂಡಲ್ಪಟ್ಟಿತು. ಮಳೆ ಬರದಿದ್ದರೆ, ಬೌಲರ್ ಗಳಿಗೆ ಹೆಚ್ಚು ಸ್ವಿಂಗ್ ದೊರಕುತ್ತಿರಲಿಲ್ಲ. ಆದರೆ ಮೀಸಲು ದಿನದಲ್ಲಿ ಪಿಚ್ ಲಾಭ ಪಡೆದ ಕಿವೀಸ್ ಬೌಲರ್ ಗಳು ಭಾರತೀಯ ಬ್ಯಾಟ್ಸ್ ಮನ್ ಗಳ ಮೇಲೆ ಸವಾರಿ ಮಾಡಿದರು.
3. ಆರಂಭಿಕ ಆಘಾತ: ಟೀಂ ಇಂಡಿಯಾಗೆ ಆಧಾರವಾಗಿದ್ದೇ ಅಗ್ರಕ್ರಮಾಂಕದ ಬ್ಯಾಟ್ಸ್ ಮನ್ ಗಳು. ಆದರೆ ಸೆಮಿಫೈನಲ್ ನಲ್ಲಿ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ತಲಾ ಒಂದು ರನ್ ಬಾರಿಸುವ ಮೂಲಕ ಪೆವಿಲಿಯನ್ ಸೇರಿದ್ದು ತಂಡದ ಲೆಕ್ಕಾಚಾರವನ್ನೇ ಬುಡಮೇಲು ಆಗುವಂತೆ ಮಾಡಿತು. ಟೀಂ ಇಂಡಿಯಾ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್ ಮನ್ ಗಳು ಕೇವಲ ಒಂದು ರನ್ ಗೆ ವಿಕೆಟ್ ಒಪ್ಪಿಸಿದರು. ಕೇವಲ 5 ರನ್ ಗಳಿಗೆ ಮೂರು ವಿಕೆಟ್ ಪತನ ಟೀಂ ಇಂಡಿಯಾ ಜಂಘಾಬಲವೇ ಉಡುಗಿಹೋಗುವಂತೆ ಮಾಡಿತು.
4. ಬ್ಯಾಟಿಂಗ್ ಕ್ರಮಾಂಕದಲ್ಲಿ ಎಡವಟ್ಟು: ಟೀಂ ಇಂಡಿಯಾದ ಆರಂಭಿಕ ಆಘಾತದ ಬೆನ್ನಲ್ಲೇ ಧೋನಿಯನ್ನು ನಾಲ್ಕು ಇಲ್ಲವೇ 5ನೇ ಕ್ರಮಾಂಕದಲ್ಲಿ ಆಡಿಸುವ ಬದಲು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಮೂಲಕ ಮತ್ತೆ ಎಡವಿತು. ಒಂದು ವೇಳೆ ಧೋನಿ ಮೇಲ್ಪಂಕ್ತಿಯಲ್ಲಿ ಆಡಿದ್ದರೆ, ನಿಧಾನವಾಗಿ ಇನ್ನಿಂಗ್ಸ್ ಕಟ್ಟುವುದರ ಜತೆಗೆ ಪಂತ್ ಗೂ ಮಾರ್ಗದರ್ಶನ ಮಾಡುತ್ತಿದ್ದರು. ತಡವಾಗಿ ಧೋನಿ ಕಣಕ್ಕಿಳಿದದ್ದು ಹಾಗೂ ತಡವಾಗಿ ರನ್ ವೇಗಕ್ಕೆ ಚುರುಕು ಮುಟ್ಟಿಸಿದ್ದು, ಕೊನೆಯ ಧೋನಿ ರನೌಟ್ ಫಲಿತಾಂಶ ನ್ಯೂಜಿಲೆಂಡ್ ಪರ ವಾಲುವಂತೆ ಮಾಡಿತು.
5.ಪಾಂಡ್ಯ-ಪಂತ್ ಕೆಟ್ಟ ಹೊಡೆತ: ತಂಡದ ಮೊತ್ತ 24 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ 5ನೇ ವಿಕೆಟ್’ಗೆ 47 ರನ್ ಗಳ ಜತೆಯಾಟ ಆಡಿದರು. ಈ ವೇಳೆ ದೊಡ್ಡ ಹೊಡೆತಕ್ಕೆ ಕೈಹಾಕಿದ ಪಂತ್ ಸ್ಯಾಂಟ್ನರ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಹಾರ್ದಿಕ್ ಪಾಂಡ್ಯ ಕೂಡಾ ಸ್ಯಾಂಟ್ನರ್ ಬೌಲಿಂಗ್ ನಲ್ಲೇ ಸಿಕ್ಸರ್ ಬಾರಿಸುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದ್ದು ಭಾರತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.