ಲಂಡನ್[ಜು.11]: ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ಎದುರು 18 ರನ್ ಗಳಿಂದ ಮುಗ್ಗರಿಸುವುದರೊಂದಿಗೆ ಭಾರತ ತನ್ನ ಅಭಿಮಾನ ಅಂತ್ಯಗೊಳಿಸಿದೆ. ಧೋನಿ,ಜಡೇಜಾ ಶತಕ ಜತೆಯಾಟದ ಹೊರತಾಗಿಯೂ ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿತು. ಇದರ ಬೆನ್ನಲ್ಲೇ ಧೋನಿಯ ಮಂದಗತಿಯ ಬ್ಯಾಟಿಂಗ್ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ಹಲವರು ಮತ್ತೆ ಧೋನಿಯ ಮಂದಗತಿಯ ಬ್ಯಾಟಿಂಗ್ ಪ್ರಶ್ನಿಸಿದ್ದಾರೆ.

ದಡ ಸೇರೋ ಮುನ್ನ ಮುಳುಗಿದ ಭಾರತದ ಕ್ರಿಕೆಟ್ ಟೈಟಾನಿಕ್!

ಒಂದು ಹಂತದಲ್ಲಿ 92 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರವೀಂದ್ರ ಜಡೇಜಾ-ಮಹೇಂದ್ರ ಸಿಂಗ್ ಧೋನಿ 7ನೇ ವಿಕೆಟ್’ಗೆ 106 ರನ್ ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 208ಕ್ಕೆ ಕೊಂಡ್ಯೊಯ್ದರು. ಜಡೇಜಾ 59 ಎಸೆತಗಳಲ್ಲಿ 77 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಧೋನಿ 72 ಎಸೆತಗಳಲ್ಲಿ 50 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಇಬ್ಬರು ವಿಕೆಟ್ ಬೀಳುತ್ತಿದ್ದಂತೆ ಈ ಟೀಂ ಇಂಡಿಯಾ ಫೈನಲ್ ಕನಸು ಭಗ್ನವಾಯಿತು. ಒತ್ತಡದ ಪರಿಸ್ಥಿತಿಯಲ್ಲೂ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದ ಈ ಜೋಡಿ ಒಂದು ಹಂತದಲ್ಲಿ ಕಿವೀಸ್ ಪಾಳಯದಲ್ಲೂ ಸೋಲಿನ ನಡುಕ ಹುಟ್ಟುವಂತೆ ಮಾಡಿದರು.

ವಿಶ್ವಕಪ್ 2019: ಪಂದ್ಯ ಸೋತರೂ ದಾಖಲೆ ಬರೆದ ರವೀಂದ್ರ ಜಡೇಜಾ!

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಟೀಂ ಇಂಡಿಯಾ ಮಾಜಿ ನಾಯಕನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಒಂದು ವೇಳೆ ಧೋನಿ ತಮ್ಮ ರಾಷ್ಟ್ರೀಯತೆಯನ್ನು ಬದಲಿಸುವುದಾದರೇ, ನ್ಯೂಜಿಲೆಂಡ್ ತಂಡದಲ್ಲಿ ಅವರಿಗೆ ಸ್ಥಾನ ನೀಡುತ್ತೇವೆ ಎಂದಿದ್ದಾರೆ. ಅವರು ನ್ಯೂಜಿಲೆಂಡ್ ತಂಡದಲ್ಲಿ ಆಡುವುದು ಉಚಿತವಲ್ಲ[ಯೋಗ್ಯವಲ್ಲ], ಬದಲಾಗಿ ಅವರೊಬ್ಬ ವಿಶ್ವದರ್ಜೆಯ ಕ್ರಿಕೆಟಿಗ. ನಾಯಕನಾಗಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಂತಹ ಒತ್ತಡದ ಸಂದರ್ಭದಲ್ಲಿ ಅವರ ಅನುಭವ ತುಂಬಾನೆ ಅನುಕೂಲವಾಗುತ್ತದೆ. ಸೆಮಿಫೈನಲ್ ಮಾತ್ರವಲ್ಲ, ಈ ಟೂರ್ನಿಯುದ್ಧಕ್ಕೂ ತಂಡಕ್ಕೆ ಸಲಹೆ ನೀಡುವುದರ ಜತೆಗೆ ಟೀಂ ಇಂಡಿಯಾಗೆ ಆಸರೆಯಾಗಿದ್ದಾರೆ. ರವೀಂದ್ರ ಜಡೇಜಾ ಜತೆಗೆ ಧೋನಿ ಆಡಿದ ಇನ್ನಿಂಗ್ಸ್ ತುಂಬಾ ಅಮೂಲ್ಯವಾಗಿತ್ತು. ಅವರೊಬ್ಬ ವಿಶ್ವದರ್ಜೆಯ ಕ್ರಿಕೆಟಿಗ ಎಂದು ವಿಲಿಯಮ್ಸನ್ ಹೇಳಿದ್ದಾರೆ.