ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಲಂಡನ್[ಜು.13]: 2019ರ ಏಕದಿನ ವಿಶ್ವಕಪ್‌ನ ಮಾದರಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಬದಲಿಸಲು ಮುಖ್ಯ ಕಾರಣವೇ ಶ್ರೇಷ್ಠ ತಂಡಗಳು ಟ್ರೋಫಿಗಾಗಿ ಸೆಣಸಬೇಕು ಎನ್ನುವುದು. ಆದರೆ ಟೂರ್ನಿಯ ಶ್ರೇಷ್ಠ ತಂಡಗಳು ಎನಿಸಿಕೊಂಡ ಭಾರತ ಹಾಗೂ ಆಸ್ಪ್ರೇಲಿಯಾ, ಕೇವಲ ಒಂದೇ ಒಂದು ಕೆಟ್ಟಪ್ರದರ್ಶನದಿಂದಾಗಿ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿವೆ. ಕಷ್ಟಪಟ್ಟು ಸೆಮೀಸ್‌ಗೇರಿದ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳು ಭಾನುವಾರ ಟ್ರೋಫಿಗಾಗಿ ಸೆಣಸಾಡಲಿವೆ. ರೌಂಡ್‌ ರಾಬಿನ್‌ ಮಾದರಿಯನ್ನು ಅನುಸರಿಸಿದ ಹೊರತಾಗಿಯೂ ಉದ್ದೇಶ ಈಡೇರದೆ ಇರುವುದರಿಂದ ಐಸಿಸಿ ಆಶಯಕ್ಕೇ ಧಕ್ಕೆಯಾಯಿತೆ ಎಂಬ ಚರ್ಚೆಗೆ ಗ್ರಾಸವಾಗಿದೆ.

ವಿಶ್ವಕಪ್‌ನಲ್ಲಿ ಐಪಿಎಲ್‌ ಮಾದರಿ ಅಳವಡಿಸಲು ಕೊಹ್ಲಿ ಇಂಗಿತ!

1992ರ ಬಳಿಕ ಮೊದಲ ಬಾರಿಗೆ ರೌಂಡ್‌ ರಾಬಿನ್‌ ಮಾದರಿಯನ್ನು ವಿಶ್ವಕಪ್‌ನಲ್ಲಿ ಅಳವಡಿಕೆ ಮಾಡಲಾಯಿತು. 2015ರಲ್ಲಿ 14 ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದವು. ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಆದರೆ ಈ ವರ್ಷ ಕೇವಲ 10 ತಂಡಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಯಿತು. ಆರಂಭಿಕ ಹಂತದಲ್ಲಿ ಪ್ರತಿ ತಂಡವೂ ಇನ್ನುಳಿದ ಎಲ್ಲಾ ತಂಡಗಳ ವಿರುದ್ಧ ಒಮ್ಮೆ ಮುಖಾಮುಖಿಯಾಯಿತು. ಪ್ರತಿ ತಂಡ ತಲಾ 9 ಪಂದ್ಯಗಳನ್ನು ಆಡಿತು.

ಅಗ್ರಸ್ಥಾನಿಗಳು ಔಟ್‌

15 ಅಂಕಗಳೊಂದಿಗೆ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆದರೆ, 14 ಅಂಕಗಳೊಂದಿಗೆ ಆಸ್ಪ್ರೇಲಿಯಾ 2ನೇ ಸ್ಥಾನ ಗಿಟ್ಟಿಸಿತು. ಇಂಗ್ಲೆಂಡ್‌ 3 ಹಾಗೂ ನ್ಯೂಜಿಲೆಂಡ್‌ 4ನೇ ಸ್ಥಾನ ಪಡೆದವು. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತ ಭಾರತ, ಇಂಗ್ಲೆಂಡ್‌ ವಿರುದ್ಧ ಸೋತ ಆಸ್ಪ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿವೆ. ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆದ ತಂಡಗಳ ಪ್ರಶಸ್ತಿ ಕನಸು ಭಗ್ನಗೊಂಡಿದೆ.

ತಿಣುಕಿದವರು ಸೆಮೀಸ್‌ಗೆ

ಟೂರ್ನಿ ಆರಂಭಕ್ಕೂ ಮೊದಲೇ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದ್ದ ಆತಿಥೇಯ ಇಂಗ್ಲೆಂಡ್‌, ಕೊನೆವರೆಗೂ ಸೆಮೀಸ್‌ಗೇರುವುದು ಖಚಿತವಾಗಿರಲಿಲ್ಲ. ರೌಂಡ್‌ ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್‌ ಹೀನಾಯ ಪ್ರದರ್ಶನ ತೋರಿದ ಕಾರಣ ಇಂಗ್ಲೆಂಡ್‌ ಅಂತಿಮ 4ರ ಸುತ್ತಿಗೆ ಪ್ರವೇಶಿಸಿತು. ಇನ್ನು ನ್ಯೂಜಿಲೆಂಡ್‌ ಆರಂಭದಲ್ಲಿ ಅಬ್ಬರಿಸಿದರೂ ಕೊನೆಯಲ್ಲಿ ಸತತ 3 ಸೋಲು ಕಂಡು, ಆರಂಭಿಕ ಸುತ್ತಿನಲ್ಲೇ ಹೊರಬೀಳುವ ಆತಂಕದಲ್ಲಿತ್ತು. ಶ್ರೀಲಂಕಾ, ಆಷ್ಘಾನಿಸ್ತಾನ ವಿರುದ್ಧ ದೊಡ್ಡ ಗೆಲುವು ಸಾಧಿಸಿ ಉತ್ತಮ ನೆಟ್‌ ರನ್‌ರೇಟ್‌ ಪಡೆದುಕೊಂಡಿತ್ತು. 9 ಪಂದ್ಯಗಳಲ್ಲಿ ನ್ಯೂಜಿಲೆಂಡ್‌ ಗಳಿಸಿದ್ದು 11 ಅಂಕ. ಪಾಕಿಸ್ತಾನ ಗಳಿಸಿದ್ದೂ 11 ಅಂಕ. ಆದರೆ ನೆಟ್‌ ರನ್‌ರೇಟ್‌ ಆಧಾರದಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿ ಸೆಮೀಸ್‌ ಪ್ರವೇಶ ಪಡೆದುಕೊಂಡಿತು.

ಐಪಿಎಲ್‌ ರೀತಿ ಪ್ಲೇ-ಆಫ್‌ ಮಾದರಿ ಪರಿಹಾರವೇ?

ಪಂದ್ಯಾವಳಿಯುದ್ದಕ್ಕೂ ಪ್ರಾಬಲ್ಯ ಮೆರೆದು ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ನಲ್ಲಿ ಕೆಟ್ಟಪ್ರದರ್ಶನ ನೀಡಿದ ಕಾರಣ ಟೂರ್ನಿಯಿಂದಲೇ ಹೊರಬಿದ್ದಿದ್ದು ವಿಶ್ವಕಪ್‌ ಪಂದ್ಯಾವಳಿಯ ಮಾದರಿ ಬಗ್ಗೆ ಪ್ರಶ್ನೆಗಳೇಳುವಂತೆ ಮಾಡಿದೆ. ಇದರಿಂದಾಗಿ, ವಿಶ್ವಕಪ್‌ ಟೂರ್ನಿ ಮತ್ತಷ್ಟುಸ್ಪರ್ಧಾತ್ಮಕಗೊಳಿಸಲು, ಅರ್ಹ ತಂಡಗಳಿಗೆ ಹೆಚ್ಚುವರಿ ಅವಕಾಶ ಸಿಗುವಂತೆ ಮಾಡಲು ಐಸಿಸಿ ಏನು ಮಾಡಬೇಕು ಎನ್ನುವ ಚರ್ಚೆಗೆ ನಾಂದಿ ಹಾಡಿದೆ. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಯೂ ಸೇರಿದಂತೆ ಹಲವರು ಐಪಿಎಲ್‌ ರೀತಿ ಪ್ಲೇ-ಆಫ್‌ ಮಾದರಿಯನ್ನು ವಿಶ್ವಕಪ್‌ನಲ್ಲೂ ಅಳವಡಿಸಲು ಸಲಹೆ ನೀಡಿದ್ದಾರೆ. ಐಪಿಎಲ್‌ನಲ್ಲಿ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳಿಗೆ, ಪ್ಲೇ-ಆಫ್‌ನಲ್ಲಿ ಒಂದು ಪಂದ್ಯ ಸೋತರೂ ಫೈನಲ್‌ಗೇರಲು ಮತ್ತೊಂದು ಅವಕಾಶ ಇರಲಿದೆ. ಅದೇ ರೀತಿ ವಿಶ್ವಕಪ್‌ನಲ್ಲೂ ಪ್ಲೇ-ಆಫ್‌ ಮಾದರಿ ಅನುಸರಿಸಿದರೆ ಐಸಿಸಿಯ ಆಶಯ ಈಡೇರಬಹುದು ಎಂದು ಅನೇಕರು ಅಭಿಪ್ರಾಯಿಸಿದ್ದಾರೆ.