ನಾಟಿಂಗ್‌ಹ್ಯಾಮ್‌(ಜೂ.12): 2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಒಂದು ವಾರ ತಡವಾಗಿ ಆಡಿದ್ದಕ್ಕೆ ನಿರಾಸೆಗೊಂಡಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ಮತ್ತೊಂದು ನಿರಾಸೆ ಕಾದಿದೆ. ಜೂನ್‌ 16ರಂದು ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯಬೇಕಿರುವ ಈ ವಿಶ್ವಕಪ್‌ನ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಟೂರ್ನಿಯಲ್ಲಿ ಮಳೆ ಸಮಸ್ಯೆ ಹೆಚ್ಚಾಗುತ್ತಿದ್ದು, ವಿಶ್ವಕಪ್‌ ಬಗ್ಗೆ ಅಭಿಮಾನಿಗಳಲ್ಲಿ ಆಸಕ್ತಿ ಕಡಿಮೆಯಾದಂತಿದೆ.

ಇದನ್ನೂ ಏದಿ: ವಿಶ್ವಕಪ್ 2019: ಟೀಂ ಇಂಡಿಯಾದ ಕುಚುಕು ಸ್ನೇಹಿತರ ನಡುವೆ ವಾರ್!

ಮ್ಯಾಂಚೆಸ್ಟರ್‌ನಲ್ಲಿ ಈ ಶನಿವಾರದ ವರೆಗೂ ಸತತವಾಗಿ ಮಳೆ ಬೀಳುವ ಮುನ್ಸೂಚನೆ ಇದೆ. ಭಾನುವಾರ ಮಧ್ಯಾಹ್ನದ ವರೆಗೂ ಬಿಡುವು ಸಿಗಲಿದ್ದು, ಮಧ್ಯಾಹ್ನದ ನಂತರ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದಾಗಿ ವರದಿಯಾಗಿದೆ. ಹೀಗಾಗಿ ಪಂದ್ಯ ಆರಂಭಗೊಂಡರೂ, ಪದೇ ಪದೇ ಮಳೆಯಿಂದಾಗಿ ಸ್ಥಗಿತಗೊಳ್ಳಬಹುದು. ಓವರ್‌ಗಳು ಕಡಿತಗೊಳ್ಳುವ ಸಾಧ್ಯತೆ ಹೆಚ್ಚು, ಪೂರ್ಣ ಪಂದ್ಯ ನಿರೀಕ್ಷೆ ಮಾಡುವುದು ಕಷ್ಟಎಂದು ಸ್ಥಳೀಯ ಆಯೋಜಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಏದಿ: ಪೈಲೆಟ್ ಅಭಿನಂದನ್ ಬಳಸಿ ಪಾಕಿಸ್ತಾನ ಚೀಪ್ ಗಿಮಿಕ್ - ವಿಶ್ವಕಪ್ ಫ್ಯಾನ್ಸ್ ಗರಂ!

ರಾಜಕೀಯ ಜಟಾಪಟಿ ನಡುವೆ ಪಂದ್ಯ: ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕು ಎನ್ನುವ ಕೂಗು ಕೇಳಿಬಂದಿತ್ತು. ಕೇಂದ್ರ ಸರ್ಕಾರದ ಅನುಮತಿ ಸಿಗುವ ವರೆಗೂ ಪಾಕಿಸ್ತಾನ ವಿರುದ್ಧ ಪಂದ್ಯವಾಡುವ ಬಗ್ಗೆ ಬಿಸಿಸಿಐಗೂ ಖಚಿತತೆ ಇರಲಿಲ್ಲ. ರಾಜಕೀಯ ಜಂಜಾಟದ ನಡುವೆಯೂ ಭಾರತ-ಪಾಕ್‌ ಪಂದ್ಯಕ್ಕೆ ಹಸಿರು ನಿಶಾನೆ ದೊರೆತಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ. ಅದಲ್ಲದೇ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ಗಳಲ್ಲಿ ಭಾರತ ಸೋತೇ ಇಲ್ಲ. ಈ ಬಾರಿಯೂ ಪಾಕಿಸ್ತಾನವನ್ನು ಬಗ್ಗಬಡಿದು ಭಾರತ ತನ್ನ ದಾಖಲೆಯನ್ನು ಉತ್ತಮಗೊಳಿಸಿಕೊಳ್ಳಲಿದೆ ಎನ್ನುವ ಭರವಸೆ ಭಾರತೀಯ ಅಭಿಮಾನಿಗಳಲ್ಲಿದೆ. ಒಂದೊಮ್ಮೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಲಿದೆ.

ಪಂದ್ಯ ರದ್ದಾದರೆ ನಷ್ಟವೇನು?
ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಟಿಕೆಟ್‌ ಮಾರಾಟ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಸೋಲ್ಡ್‌ ಔಟ್‌ ಆಗಿತ್ತು. ಪ್ರಾಯೋಜಕರು, ಪ್ರಸಾರ ಹಕ್ಕು ಹೊಂದಿರುವ ವಾಹಿನಿಗಳು ಈ ಪಂದ್ಯದಿಂದ ನೂರಾರು ಕೋಟಿ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧ ವಿಶ್ವಕಪ್‌ ಪಂದ್ಯ ಗೆದ್ದರೆ ನಾಯಕ ವಿರಾಟ್‌ ಕೊಹ್ಲಿ ಹಾಗೂ ಈಗಿನ ಭಾರತ ತಂಡದ ಘನತೆ ಹೆಚ್ಚಲಿದೆ. ಜತೆಗೆ ಟ್ರೋಫಿ ಗೆಲ್ಲಲು ಸ್ಫೂರ್ತಿಯಾಗಬಹುದು. ಆಟ ಹಾಗೂ ವ್ಯಾವಹಾರಿಕವಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯ ಮಹತ್ವದೆನಿಸಿದೆ.

ನಾಳಿನ ಪಂದ್ಯಕ್ಕೂ ಮಳೆ ಅಡ್ಡಿ?
ಸತತ 3 ಗೆಲುವುಗಳನ್ನು ಕಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್‌ ಹಾಗೂ ಎರಡು ಭರ್ಜರಿ ಗೆಲುವುಗಳೊಂದಿಗೆ ಯಶಸ್ವಿ ಅಭಿಯಾನ ನಡೆಸುತ್ತಿರುವ ಭಾರತ ನಡುವಿನ ಪಂದ್ಯ ಗುರುವಾರ ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ ಬ್ರಿಡ್ಜ್‌ ಮೈದಾನದಲ್ಲಿ ನಡೆಯಬೇಕಿದೆ. ಆದರೆ ಗುರುವಾರ ನಾಟಿಂಗ್‌ಹ್ಯಾಮ್‌ನಲ್ಲಿ ಭಾರಿ ಮಳೆ ಮುನ್ಸೂಚನೆ ಇದ್ದು, ಪಂದ್ಯ ರದ್ದುಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತ್ತಿಲ್ಲ ಎನ್ನಲಾಗಿದೆ.

ಅಭ್ಯಾಸ ರದ್ದು: ಮಂಗಳವಾರ ಭಾರತ ತಂಡ ಟ್ರೆಂಟ್‌ ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಬೇಕಿತ್ತು. ಆದರೆ ಮಳೆಯಿಂದಾಗಿ ಅಭ್ಯಾಸ ಅವಧಿಯನ್ನು ರದ್ದುಗೊಳಿಸಲಾಯಿತು. ಕೆಲ ಆಟಗಾರರು ಹೋಟೆಲ್‌ನಲ್ಲೇ ಉಳಿದರೆ, ಇನ್ನೂ ಕೆಲವರು ಒಳಾಂಗಣ ಅಭ್ಯಾಸ ನಡೆಸಿದರು ಎಂದು ವರದಿಯಾಗಿದೆ.