ಕರಾಚಿ(ಜು.07): ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನ ತಂಡದಲ್ಲಿ ಕೆ ಬದಲಾವಣೆಗಳಾಗೋ ಸಾಧ್ಯತೆ ಕಂಡುಬರುತ್ತಿದೆ. ತವರಿಗೆ ವಾಪಾಸ್ಸಾದ ಪಾಕಿಸ್ತಾನ ತಂಡ ಕರಾಚಿಯಲ್ಲಿ ಸುದ್ದಿಗೋಷ್ಠಿ ನಡೆಸಿತು. ನಾಯಕ ಸರ್ಫರಾಜ್ ಅಹಮ್ಮದ್ ಪ್ರಶ್ನೆಗಳ ಸುರಿಮಳೆ ಎದುರಿಸಿದರು. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡಕ್ಕೆ ಸರ್ಜರಿ ನಡೆಸಲು ಸಿದ್ಧತೆ ನಡೆಸಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ಇದನ್ನೂ ಓದಿ: ಸೆಮೀಸ್ ಪ್ರವೇಶಿಸುವ ಹಾದಿಯಲ್ಲಿ ಪಾಕ್ ಎಡವಿದ್ದೆಲ್ಲಿ..?

ನಾಯಕತ್ವದ ಕುರಿತು ಕೇಳಿದ ಪ್ರಶ್ನೆಗೆ ಸರ್ಫರಾಜ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಾಯಕತ್ವ ನೀಡಿದೆ. ಇದೀಗ ಮಂಡಳಿಯೇ ತೀರ್ಮಾನ ತೆಗೆದುಕೊಳ್ಳಲಿದೆ. ರಾಜಿನಾಮೆ ನೀಡುವುದಿಲ್ಲ. ಮಂಡಳಿ ನಾಯಕತ್ವ ತ್ಯಜಿಸಲು ಸೂಚಿಸಿದರೆ ಸಿದ್ಧ ಎಂದು ಸರ್ಫರಾಜ್ ಹೇಳಿದ್ದಾರೆ. ಯಾರಲ್ಲೂ ಕ್ಷಮೆ ಕೇಳೋ ಅಗತ್ಯವಿಲ್ಲ. ಕಾರಣ ಉತ್ತಮ ಪ್ರದರ್ಶನ ನೀಡಿದ್ದೇವೆ. ರನ್ ರೇಟ್ ಆಧಾರದಲ್ಲಿ ಅವಕಾಶ ಕಳೆದುಕೊಂಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಗೆಲುವು; ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಗುಡ್ ಬೈ!

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಉತ್ತಮ ಪ್ರದರ್ಶನ ನೀಡಲಿದ್ದೇವೆ. ಇದಕ್ಕಾಗಿ ತಯಾರಿ ನಡೆಸುತ್ತೇವೆ ಎಂದು ಸರ್ಫರಾಜ್ ಹೇಳಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ 11 ಅಂಕ ಸಂಪಾದಿಸಿತು. ಆದರೆ ರನ್ ರೇಟ್ ಕೊರತೆಯಿಂದ 11 ಅಂಕ ಸಂಪಾದಿಸಿದ ನ್ಯೂಜಿಲೆಂಡ್ ಸೆಮಿಫೈನಲ್ ಅವಕಾಶ ಗಿಟ್ಟಿಸಿಕೊಂಡಿತು.