ಲಂಡನ್[ಜು.07]: ಏಕದಿನ ವಿಶ್ವಕಪ್ ಉಪಖಂಡಕ್ಕೆ ಬರಬೇಕು. ಹೀಗಾಗಿ ಈ ಬಾರಿಯ ವಿಶ್ವಕಪ್ ಟ್ರೋಫಿಯನ್ನು ಭಾರತ ಗೆಲ್ಲಬೇಕು. ಭಾರತಕ್ಕೇ ನಮ್ಮ ಬೆಂಬಲವಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್’ನಲ್ಲಿ ಮಾತನಾಡಿದ ಅಖ್ತರ್, ಇಲ್ಲಿಯವರೆಗೂ ಭಾರತ ತಂಡವು ಅದ್ಭುತ ಪ್ರದರ್ಶನ ತೋರಿದೆ. ಆಡಿದ 8 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿದ್ದು, ಆತಿಥೇಯ ಇಂಗ್ಲೆಂಡ್ ವಿರುದ್ಧ ಮಾತ್ರ ಸೋಲು ಕಂಡಿದೆ. ನ್ಯೂಜಿಲೆಂಡ್ ಒತ್ತಡಕ್ಕೆ ಒಳಗಾಗಬಾರದು. ನನಗನಿಸುತ್ತದೆ ಈ ಬಾರಿ ಕಿವೀಸ್ ’ಚೋಕ್’[ಮಹತ್ವದ ಪಂದ್ಯದಲ್ಲಿ ಎಡವುದು]ಆಗುವುದಿಲ್ಲ. ಆದರೆ ಉಪಖಂಡಕ್ಕೆ ವಿಶ್ವಕಪ್ ಬರಬೇಕು. ಹೀಗಾಗಿ ಭಾರತಕ್ಕೆ ತಮ್ಮ ಬೆಂಬಲ ಎಂದು ಹೇಳಿದ್ದಾರೆ.

11 ವರ್ಷಗಳ ಬಳಿಕ ಸೆಮಿಫೈನಲ್‌ನಲ್ಲಿ ಕೊಹ್ಲಿ-ವಿಲಿಯಮ್ಸನ್ ಮುಖಾಮುಖಿ!

ನ್ಯೂಜಿಲೆಂಡ್’ಗೆ ಒತ್ತಡ ನಿಭಾಯಿಸುವ ಕಲೆ ಕರಗತವಾಗಿಲ್ಲ. ಕಿವೀಸ್’ಗೆ ಹೋಲಿಸಿದರೆ ಏಷ್ಯಾದ ತಂಡಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ತಂಡಗಳು ಒತ್ತಡದ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿವೆ. ಪಾಕಿಸ್ತಾನವು ನ್ಯೂಜಿಲೆಂಡ್ ಗಿಂತ ಚೆನ್ನಾಗಿ ಆಡಿತು. ಆದರೆ ನೆಟ್ ರನ್ ರೇಟ್ ಕೊರತೆಯಿಂದಾಗಿ ಅಂತಿಮ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯಲು ವಿಫಲವಾಯಿತು ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಅಖ್ತರ್ ಏನಂದ್ರು..? ಅವರ ಮಾತುಗಳಲ್ಲೇ ಕೇಳಿ...

ಇನ್ನು ರೋಹಿತ್ ಶರ್ಮಾ ಅದ್ಭುತ ಫಾರ್ಮ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ವಿಶ್ವಕಪ್ ಟೂರ್ನಿಯಲ್ಲಿನ ಚೊಚ್ಚಲ ಶತಕದ ಪ್ರದರ್ಶನವನ್ನು ಅಖ್ತರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದು, ಏಷ್ಯಾದ ಏಕೈಕ ತಂಡ ಅಂತಿಮ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಜುಲೈ 09ರಂದು ನಡೆಯಲಿರುವ ಮೊದಲ ಸೆಮೀಸ್ ಪಂದ್ಯದಲ್ಲಿ ಭಾರತ ತಂಡವು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.