ಕರಾಚಿ (ಜು.21): ಭಾರತ ವಿರುದ್ಧ ವಿಶ್ವಕಪ್‌ ಪಂದ್ಯದಲ್ಲಿ ಆಕಳಿಸಿ ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪಾಕ್‌ ನಾಯಕ ಸರ್ಫರಾಜ್‌ ಖಾನ್‌ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಮುಂದುವರಿದಿದೆ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಚಕ್ವಾಲ್‌ ನಗರದ ಟ್ರಾಫಿಕ್‌ ಪೊಲೀಸ್‌ ಇಲಾಖೆ ಸರ್ಫರಾಜ್‌ರ ಕಾಲೆಳೆದಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

 

 

ಸರ್ಫರಾಜ್‌ ಆಳಕಿಸುತ್ತಾ ಕಾರು ಚಲಾಯಿಸುತ್ತಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಾಕಿರುವ ಚಕ್ವಾಲ್‌ ಟ್ರಾಫಿಕ್‌ ಪೊಲೀಸ್‌ ಇಲಾಖೆ, ‘ನಿದ್ದೆ ಬರುವಾಗ ವಾಹನ ಚಲಾಯಿಸಬೇಡಿ. ಅದು ಅಪಾಯಕಾರಿ’ ಎನ್ನುವ ಸಂದೇಶವನ್ನು ಬರೆದಿದೆ.

ಈ ವರೆಗೂ ಅಭಿಮಾನಿಗಳು ಸರ್ಫರಾಜ್‌ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿ ಟ್ರೋಲ್‌ ಮಾಡುತ್ತಿದ್ದರು. ಆದರೆ ಇದೀಗ ಪಾಕಿಸ್ತಾನದ ಟ್ರಾಫಿಕ್‌ ಪೊಲೀಸರೇ ತಮ್ಮ ದೇಶದ ಕ್ರಿಕೆಟ್‌ ತಂಡದ ನಾಯಕನ ಕಾಲೆಳೆದಿದ್ದಾರೆ. 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಜಸ್‌ಪ್ರೀತ್‌ ಬೂಮ್ರಾ ನೋಬಾಲ್‌ ಎಸೆದು ಸೋಲಿಗೆ ಕಾರಣವಾಗಿದ್ದಾಗ, ಅವರ ಚಿತ್ರವನ್ನೂ ಟ್ರಾಫಿಕ್‌ ಜಾಗೃತಿಗಾಗಿ ಬಳಸಿಕೊಳ್ಳಲಾಗಿತ್ತು.