ವಿಶ್ವಕಪ್ 2019: ಪಂದ್ಯ ಸೋತರೂ ದಾಖಲೆ ಬರೆದ ರವೀಂದ್ರ ಜಡೇಜಾ!
ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ನ್ಯೂಜಿಲೆಂಡ್ ವಿರುದ್ದ ಕೊನೆಯವರೆಗೂ ಹೋರಾಡಿದ ಭಾರತ ಸೋಲಿಗೆ ಶರಣಾಯಿತು. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ದಾಖಲೆ ಬರೆದಿದ್ದಾರೆ.
ಮ್ಯಾಂಚೆಸ್ಟರ್(ಜು.10): ನ್ಯೂಜಿಲೆಂಡ್ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದೆ. ಆದರೆ ರವೀಂದ್ರ ಜಡೇಜಾ ಹೋರಾಟ ಎಲ್ಲರ ಹೃದಯ ಗೆದ್ದಿದೆ. 92 ರನ್‌ಗೆ 6 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಹೀನಾಯ ಸೋಲಿನತ್ತ ಹೆಜ್ಜೆ ಹಾಕಿತ್ತು. ಆದರೆ ಎಂ.ಎಸ್.ಧೋನಿ ಜೊತೆ ಸೇರಿ ಇನ್ನಿಂಗ್ಸ್ ಕಟ್ಟಿದ ಜಡೇಜಾ ಎಲ್ಲರ ಲೆಕ್ಕಾಚಾರ ಬದಲಿಸಿದರು. ಪಂದ್ಯ ಗೆಲ್ಲಿಸಿಕೊಡಲು ಸಾಧ್ಯವಾಗದಿದ್ದರೂ,ಜಡೇಜಾ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಕೊಹ್ಲಿ ಪಡೆ ಸಂತೈಸಿದ ಮೋದಿ!
ರವೀಂದ್ರ ಜಡೇಜಾ 59 ಎಸೆತದಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 77 ರನ್ ಸಿಡಿಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 11ನೇ ಅರ್ಧಶತಕ ಪೂರೈಸಿದರು. 8ನೇ ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ದಡ ಸೇರೋ ಮುನ್ನ ಮುಳುಗಿದ ಭಾರತದ ಕ್ರಿಕೆಟ್ ಟೈಟಾನಿಕ್!
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡೇಜಾ 39 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಜಡೇಜಾ ಹಾಗೂ ಧೋನಿ ಹೋರಾಟ ನೀಡಿದರೂ ಭಾರತ ಗೆಲುವಿನ ದಡ ಸೇರಲಿಲ್ಲ. ಟೀಂ ಇಂಡಿಯಾ 18 ರನ್ ಸೋಲು ಅನುಭವಿಸೋ ಮೂಲಕ ಟೂರ್ನಿಯಿಂದ ಹೊರಬಿತ್ತು.