ಮುಂಬೈ(ಜು.13): ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ ಹಂತದಿಂದ ಹೊರಬಿದ್ದ ಬೆನ್ನಲ್ಲೇ ಇದೀಗ ನಾಯಕತ್ವ ಬದಲಾವಣೆ ಕೂಗು ಎದ್ದಿದೆ.  ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲೋದು ಕಷ್ಟ. ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್, ಆದೆರೆ ಉತ್ತಮ ನಾಯಕನಲ್ಲ ಅನ್ನೋ ಆರೋಪಗಳು ಕೇಳಿಬಂದಿದೆ. ಹೀಗಾಗಿ ರೋಹಿತ್ ಶರ್ಮಾಗೆ ನಿಗದಿತ ಓವರ್ ನಾಯಕತ್ವ ನೀಡಿ ಅನ್ನೋ ಅಭಿಯಾನ ಆರಂಭಗೊಂಡಿದೆ.

ಇದನ್ನೂ ಓದಿ: ವಿದಾಯದ ಬಳಿಕ ಧೋನಿ ಬಿಜೆಪಿಗೆ; ತಲ್ಲಣ ಸೃಷ್ಟಿಸಿದೆ ಕೇಂದ್ರ ಮಾಜಿ ಸಚಿವನ ಹೇಳಿಕೆ!

ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ದ ಸೋಲು ಅನುಭವಿಸಿ ಪ್ರಶಸ್ತಿ ಗೆಲ್ಲೋ ಅತ್ಯುತ್ತಮ ಅವಕಾಶವನ್ನು ಕೈಚೆಲಿತ್ತು. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಐಸಿಸಿ ಟ್ರೋಫಿ ಗೆಲುವು ಮರೀಚಿಕೆಯಾಗುತ್ತಿದೆ. ಹೀಗಾಗಿ  ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಾಯಕತ್ವ ಪ್ರದರ್ಶಿಸಿರುವ ರೋಹಿತ್ ಶರ್ಮ ಸೂಕ್ತ ಆಯ್ಕೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಧನಿಗೂಡಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಫೈನಲ್‌: ಇಂಗ್ಲೆಂಡ್-ನ್ಯೂಜಿಲೆಂಡ್ ನಡುವೆ ಫೈಟ್

ರೋಹಿತ್ ಶರ್ಮಾಗೆ  ನಿಗದಿತ ಓವರ್ ಕ್ರಿಕೆಟ್ ನಾಯಕತ್ವ ನೀಡಲು ಇದು ಸೂಕ್ತ ಸಮಯ. ನಾನು 2023ರ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್‌ನ್ನು ನಾಯಕನಾಗಿ ನೋಡಬಯಸುತ್ತೇನೆ ಎಂದು ವಾಸಿಮ್ ಜಾಫರ್ ಟ್ವೀಟ್ ಮಾಡಿದ್ದಾರೆ. ಜಾಫರ್ ಟ್ವೀಟ್ ಬಳಿಕ ಇದೀಗ ಹಲವು ಅಭಿಮಾನಿಗಳು ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ್ದಾರೆ.

 

ನಾಯಕತ್ವ ಬದಲಾವಣೆಗೆ ಕೆಲ ಕಾರಣಗಳನ್ನು ನೀಡಿದ್ದಾರೆ. ಟೀಂ ಇಂಡಿಯಾ, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿ ಪ್ರಶಸ್ತಿ ಮಿಸ್ ಮಾಡಿಕೊಂಡಿತ್ತು. ಇದೀಗ ವಿಶ್ವಕಪ್ ಟ್ರೋಫಿ ಕೂಡ ಕೈತಪ್ಪಿದೆ. ಹೀಗಾಗಿ ಕೊಹ್ಲಿ ನಾಯಕತ್ವದಲ್ಲಿ ಪ್ರಶಸ್ತಿ ಮಾತ್ರ ಸಿಗುತ್ತಿಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.