ವಿಶ್ವಕಪ್ 2019; ಆಫ್ಘನ್ ಮಣಿಸಿ ನಾಲ್ಕನೇ ಸ್ಥಾನಕ್ಕೇರಿದ ಪಾಕ್
ಆಫ್ಘಾನಿಸ್ತಾನವನ್ನು ರೋಚಕವಾಗಿ ಮಣಿಸಿದ ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಆಲ್ರೌಂಡ್ ಪ್ರದರ್ಶನ ತೋರಿದ ಇಮಾದ್ ವಾಸೀಂ ಪಾಕ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ವಿಶ್ವಕಪ್ ಟೂರ್ನಿಯ ಪ್ರತಿಕ್ಷಣದ ಸ್ಕೋರ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ...
ಬರ್ಮಿಂಗ್ ಹ್ಯಾನ್[ಜೂ.29]: ತೀವ್ರ ರೋಚಕತೆಯಿಂದ ಕೂಡಿದ್ದ ಪಂದ್ಯವನ್ನು ಕಡೆಗೂ ಕೈವಶ ಮಾಡಿಕೊಳ್ಳುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಪಾಕಿಸ್ತಾನ ನಾಲ್ಕನೇ ಸ್ಥಾನಕ್ಕೇರಿದೆ. ಇಮಾದ್ ವಾಸೀಂ ಆಲ್ರೌಂಡ್ ಪ್ರದರ್ಶನ ಪಾಕ್ ತಂಡಕ್ಕೆ ರೋಚಕ ಗೆಲುವು ತಂದಿತ್ತರು.
ಆಫ್ಘಾನಿಸ್ತಾನ ನೀಡಿದ್ದ 228 ರನ್ ಗಳ ಗುರಿ ಬೆನ್ನತ್ತಿದ ಪಾಕ್ ಮೊದಲ ಓವರ್’ನಲ್ಲೇ ಫಖರ್ ಜಮಾನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಆಬಳಿಕ ಇಮಾಮ್ ಉಲ್ ಹಕ್ ಹಾಗೂ ಬಾಬರ್ ಅಜಂ ಎರಡನೇ ವಿಕೆಟ್’ಗೆ 72 ರನ್’ಗಳ ಜತೆಯಾಟ ನಿಭಾಯಿಸಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ನಬೀ ಯಶಸ್ವಿಯಾದರು. ಇಮಾಮ್ ಉಲ್ ಹಕ್ 36 ರನ್ ಬಾರಿಸಿ ಸ್ಟಂಪೌಟ್ ಆದರು. ಇದಾದ ಕೆಲಹೊತ್ತಿನಲ್ಲೇ ಬಾಬರ್ ಅಜಂಗೂ ಕೂಡಾ ನಬೀ ಪೆವಿಲಿಯನ್ ಹಾದಿ ತೋರಿಸಿದರು. ಹಫೀಜ್[19], ಹ್ಯಾರಿಸ್ ಸೋಹಿಲ್[27], ಸರ್ಫರಾಜ್ ಅಹಮ್ಮದ್[18] ಉಪಯುಕ್ತ ರನ್ ಕಾಣಿಕೆ ನೀಡಿದರು. ಕೊನೆಯಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದ ಇಮಾದ್ ವಾಸೀಂ ಅಜೇಯ 49 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ವಿಶ್ವಕಪ್ 2019: ಪಾಕ್ ಗೆ ಸ್ಫರ್ಧಾತ್ಮಕ ಗುರಿ ನೀಡಿದ ಆಫ್ಘನ್
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನಕ್ಕೆ ಶಾಹೀನ್ ಅಫ್ರಿದಿ ಮಾರಕವಾಗಿ ಪರಿಣಮಿಸಿದರು. ಆಫ್ಘನ್ ತಂಡದ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದ ಅಫ್ರಿದಿ ತಂಡವನ್ನು 230 ರನ್ ಗಳೊಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಇಮಾದ್ ವಾಸೀಂ ಹಾಗೂ ವಹಾಬ್ ರಿಯಾಜ್ ಉತ್ತಮ ಸಾಥ್ ನೀಡಿದರು. ಆಫ್ಘನ್ ಮಾಜಿ ನಾಯಕ ಆಸ್ಗರ್ ಆಫ್ಘನ್ ಹಾಗೂ ನಜೀಬುಲ್ಲಾ ಜದ್ರಾನ್ ತಲಾ 42 ರನ್ ಬಾರಿಸುವ ಮೂಲಕ ತಂಡವನ್ನು ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.
ಸಂಕ್ಷಿಪ್ತ ಸ್ಕೋರ್:
ಆಫ್ಘಾನಿಸ್ತಾನ: 227/9
ಆಸ್ಗರ್ ಆಫ್ಘಾನ್: 42
ಶಾಹೀನ್ ಅಫ್ರಿದಿ: 47/4
ಪಾಕಿಸ್ತಾನ: 230/7
ಇಮಾದ್ ವಾಸೀಂ 49
ಮೊಹಮ್ಮದ್ ನಬೀ: 23/2